ದಲಿತ ಮಹಿಳೆ ಅಡುಗೆ ತಯಾರಿಸಿದರೆಂದು ಶಾಲಾ ಮಕ್ಕಳು ಆಹಾರವನ್ನು ಸೇವಿಸಲು ನಿರಾಕರಿಸಿರುವ ಘಟನೆ ತಮಿಳುನಾಡಿನ ಕರೂರ್ ಜಿಲ್ಲೆಯ ಶಾಲೆಯೊಂದರಲ್ಲಿ ನಡೆದಿದೆ.
ತಮಿಳುನಾಡಿನ ಕರೂರ್ ಜಿಲ್ಲೆಯ ವೇಲನ್ ಚೆಟ್ಟಿಯಾರ್ ಪಂಚಾಯತ್ ಯೂನಿಯನ್ ಶಾಲೆಯಲ್ಲಿ ಓದುತ್ತಿರುವ 30 ವಿದ್ಯಾರ್ಥಿಗಳ ಪೈಕಿ 15 ವಿದ್ಯಾರ್ಥಿಗಳು ಉಪಾಹಾರ ಸೇವಿಸಲು ನಿರಾಕರಿಸಿದ್ದು, ಈ ಕುರಿತು ಜಿಲ್ಲಾಡಳಿತಕ್ಕೆ ದೂರು ನೀಡಲಾಗಿದೆ.
ರಾಜ್ಯ ಸರ್ಕಾರದ ಉಚಿತ ಉಪಾಹಾರ ಯೋಜನೆಯಡಿಯಲ್ಲಿ ತಯಾರಾದ ಬೆಳಗಿನ ಉಪಾಹಾರವನ್ನು 15 ವಿದ್ಯಾರ್ಥಿಗಳು ಸೇವಿಸಲು ನಿರಾಕರಿಸಿದ್ದಾರೆ. ದಲಿತ ಮಹಿಳೆಯೊಬ್ಬರು ಅಡುಗೆ ಮಾಡಿದ್ದರಿಂದ ವಿದ್ಯಾರ್ಥಿಗಳು ಆಹಾರವನ್ನು ಸೇವಿಸಿಲ್ಲ.
ಈ ಬಗ್ಗೆ ಮಾಹಿತಿ ತಿಳಿದು ಶಾಲೆಗೆ ಆಗಮಿಸಿದ ಜಿಲ್ಲಾಧಿಕಾರಿ ಡಾ. ಟಿ ಪ್ರಭು ಶಂಕರ್ ಪೋಷಕರಿಗೆ ವಿದ್ಯಾರ್ಥಿಗಳಿಗೆ ತಿಳಿ ಹೇಳುವಂತೆ ಮನವರಿಕೆ ಮಾಡಿದರು. ಈ ರೀತಿ ಘಟನೆ ನಡೆದರೆ ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಸಂಭಾವ್ಯ ಕಾನೂನು ಕ್ರಮದ ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಸಂಸತ್ತಿನ ವಿಶೇಷ ಅಧಿವೇಶನ : 9 ವಿಷಯಗಳ ಚರ್ಚೆಗೆ ಪ್ರಧಾನಿಗೆ ಸೋನಿಯಾ ಪತ್ರ
ನಮ್ಮ ಮಕ್ಕಳು ಆಹಾರವನ್ನು ಸೇವಿಸುವುದಿಲ್ಲ. ಶಾಲೆಯವರು ಒತ್ತಾಯಿಸಿದರೆ, ತಮ್ಮ ಮಕ್ಕಳನ್ನು ಶಾಲೆಯಿಂದ ಹೊರಗೆ ಕರೆದೊಯ್ಯಲು ಸಿದ್ಧ ಎಂದು ಪೋಷಕರು ಜಿಲ್ಲಾಧಿಕಾರಿ ಬಳಿ ಹೇಳಿದ್ದಾರೆ ಎಂದು ವರದಿಯಾಗಿದೆ.
ಯೋಜನಾ ನಿರ್ದೇಶಕ ಶ್ರೀನಿವಾಸನ್ ಅವರು ಕೂಡ ಪೋಷಕರ ಬಳಿ ಮಕ್ಕಳಿಗೆ ಆಹಾರವನ್ನು ಸೇವಿಸಲು ತಿಳಿಸಿ ಎಂದು ಪೋಷಕರಲ್ಲಿ ಮನವಿ ಮಾಡಿದ್ದಾರೆ. ಆದರೆ ಪೋಷಕರು ಅಧಿಕಾರಿಯ ಮನವಿಗೆ ಸ್ಪಂದಿಸಿಲ್ಲ. 15 ವಿದ್ಯಾರ್ಥಿಗಳಲ್ಲಿ ಇಬ್ಬರು ಮಾತ್ರ ಆಹಾರವನ್ನು ಸೇವಿಸುತ್ತಿದ್ದಾರೆ. ಇದರಿಂದ ಈ ಸಮಸ್ಯೆ ಮತ್ತಷ್ಟು ಉಲ್ಬಣವಾಗಿದೆ.
ಜಿಲ್ಲಾಡಳಿತವು ಎಲ್ಲ ಪೋಷಕರಿಗೆ ಮನವರಿಕೆ ಮಾಡಿ, ತಮ್ಮ ಮಕ್ಕಳಿಗೆ ಆಹಾರ ಸೇವಿಸುವಂತೆ ಹೇಳಲು ತಿಳಿಸಲಾಗಿದೆ. ಇದನ್ನು ಪಾಲಿಸದವರಿಗೆ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ನೀಡಲಾಗಿದೆ.
ರಾಜ್ಯದ ಪ್ರಾಥಮಿಕ ಸರ್ಕಾರಿ ಶಾಲೆಗಳಲ್ಲಿನ 15.75 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಉಪಾಹಾರ ನೀಡುವ ಯೋಜನೆಯನ್ನು ಆಗಸ್ಟ್ 25 ರಂದು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಉದ್ಘಾಟಿಸಿದ್ದಾರೆ.