- ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದ ಮಂಗಳೂರು ವಿವಿ ಕುಲಪತಿ ಜಯರಾಜ್ ಅಮೀನ್
- ಕುಲಪತಿ ಕಚೇರಿಗೆ ನುಗ್ಗಿ ರೌಡಿಗಳಂತೆ ಬೆದರಿಸಿದ ಬಿಜೆಪಿ ಮುಖಂಡರ ತಂಡ; ಆರೋಪ
ಮಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಯವರ ಕಚೇರಿಗೆ ನುಗ್ಗಿದ್ದಲ್ಲದೇ, ಗಣೇಶೋತ್ಸವಕ್ಕೆ ಎರಡು ಲಕ್ಷ ರೂಪಾಯಿ ಬಿಡುಗಡೆ ಮಾಡಬೇಕು ಎಂದು ಒತ್ತಡ ಹಾಕಿರುವ ಆರೋಪ ಕೇಳಿ ಬಂದಿದೆ.
ಸೆಪ್ಟೆಂಬರ್ 1ರಂದು ಈ ಬೆಳವಣಿಗೆ ನಡೆದಿದ್ದು, ಮಂಗಳೂರಿನ ಸಾಮಾಜಿಕ ಕಾರ್ಯಕರ್ತ ಮುನೀರ್ ಕಾಟಿಪಳ್ಳ ಸೋಷಿಯಲ್ ಮೀಡಿಯಾದಲ್ಲಿ ಹಾಕಿದ ಬಳಿಕ ಸಂಪೂರ್ಣ ಘಟನೆ ಬೆಳಕಿಗೆ ಬಂದಿದೆ.
“ಎಬಿವಿಪಿ ಬೇಡಿಕೆಯಂತೆ ಗಣೇಶೋತ್ಸವಕ್ಕೆ ಎರಡು ಲಕ್ಷ ರೂಪಾಯಿ ಬಿಡುಗಡೆ ಮಾಡಬೇಕು, ವಿ ವಿ ವತಿಯಿಂದಲೇ ಗಣೇಶೋತ್ಸವ ಮಾಡಬೇಕು” ಎಂದು ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ಕಚೇರಿಗೆ ಬಂದು ಒತ್ತಡ ಹೇರಿದ್ದಾರೆ ಎಂದು ಒಟ್ಟು ಪ್ರಕರಣದ ಕುರಿತು ಪೂರ್ಣ ವಿವರವನ್ನು ಮಂಗಳೂರು ವಿ ವಿ ಕುಲಪತಿ ಜಯರಾಜ್ ಅಮೀನ್ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯುವ ಮೂಲಕ ವಿವರಿಸಿದ್ದಾರೆ.
ಪತ್ರದ ಪ್ರತಿಯನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿರುವ ಮಂಗಳೂರಿನ ಸಾಮಾಜಿಕ ಕಾರ್ಯಕರ್ತ ಮುನೀರ್ ಕಾಟಿಪಳ್ಳ, ಶಾಸಕರು ಗೂಂಡಾ ವರ್ತನೆ ತೋರಿರುವುದನ್ನು ಖಂಡಿಸಿದ್ದಾರೆ.
“ಶಾಸಕರು ಸ್ಥಳೀಯ ಏಳೆಂಟು ಬಿಜೆಪಿ ಮುಖಂಡರ ತಂಡದೊಂದಿಗೆ ಕುಲಪತಿ ಕಚೇರಿಗೆ ಅಕ್ಷರಶಃ ನುಗ್ಗಿದ್ದಾರೆ. ಗಣೇಶೋತ್ಸವಕ್ಕೆ ಹಣ ಬಿಡುಗಡೆ ಮಾಡುವಂತೆ ಆಕ್ರಮಣಕಾರಿಯಾಗಿ ಆಗ್ರಹಿಸಿದ್ದಾರೆ. ಒಪ್ಪದೇ ಇದ್ದದ್ದಕ್ಕೆ ಸತತ ಎರಡು ಗಂಟೆಗಳ ಕಾಲ ಕುಲಪತಿಗಳನ್ನು ಅವರದ್ದೇ ಕಚೇರಿಯಲ್ಲಿ ಕೂಡಿ ಹಾಕಿದ್ದಾರೆ. ಥೇಟ್ ರೌಡಿಗಳಂತೆ ಬೆದರಿಸಿದ್ದಾರೆ. ಇದು ಅನಾಗರಿಕ ನಡೆ ಮಾತ್ರ ಅಲ್ಲ. ತೋಳ್ಬಲದಿಂದಲೇ ಎಲ್ಲವನ್ನೂ ತಮ್ಮ ಮೂಗಿನ ನೇರಕ್ಕೆ ಸಾಧಿಸಿ ಬಿಡುತ್ತೇವೆ ಎಂಬ ದುರಹಂಕಾರ. ದೂರದ ಉತ್ತರ ಭಾರತದ ಮಾದರಿಯನ್ನು ಶಾಸಕ ವೇದವ್ಯಾಸ ಕಾಮತ್ ಇಲ್ಲಿ ಅನುಕರಿಸಿದ್ದಾರೆ. ತುಳುನಾಡಿಗೆ ಇದು ಹೊಸತು. ಇಂತಹ ನಡೆಗಳನ್ನು ಈಗಲೇ ಬಲವಾಗಿ ವಿರೋಧಿಸಬೇಕು. ಶಾಸಕ ವೇದವ್ಯಾಸರದ್ದು ನಿರಂಕುಶ ಗೂಂಡಾಗಿರಿ” ಎಂದು ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.

ಕುಲಪತಿ ಜಯರಾಜ್ ಅಮೀನ್
ಘಟನೆಯ ಎಲ್ಲ ವಿವರಗಳನ್ನು ಮಂಗಳೂರು ವಿವಿ ಕುಲಪತಿ ಜಯರಾಜ್ ಅಮೀನ್ ಸರಕಾರದ ಗಮನಕ್ಕೆ ತಂದಿದ್ದಾರೆ. ಈ ಎಲ್ಲ ಬೆಳವಣಿಗೆಯ ನಡುವೆ ಕುಲಪತಿಗಳು ಹಿಂದೂ ವಿರೋಧಿ ಎಂದು ಆರೋಪಿಸಿರುವ ಬಿಜೆಪಿಯವರು, ಕುಲಪತಿ ವಿರುದ್ದ ಪ್ರತಿಭಟನಾ ಸಭೆ ನಡೆಸುವುದಾಗಿ ಹೇಳಿಕೆ ನೀಡಿದ್ದಾರೆ.
ಈ ಹಿಂದೆ ಕುಲಪತಿಯಾಗಿದ್ದ ಪ್ರೊ. ಯಡಪಡಿತ್ತಾಯ ಅವರು ಎಬಿವಿಪಿಯವರ ಬೇಡಿಕೆಯನ್ನು ಪರಿಗಣಿಸಿ ಮಂಗಳೂರು ವಿ ವಿ ವತಿಯಿಂದಲೇ ಗಣೇಶೋತ್ಸವ ಆಚರಿಸಲು ಒಂದೂವರೆ ಲಕ್ಷ ರೂ. ನಿಯಮದ ವಿರುದ್ಧವಾಗಿ ನೀಡಿದ್ದರು. ಆದರೆ ಅದನ್ನು ಸರ್ಕಾರದ ‘ಆಡಿಟ್ ವಿಭಾಗ’ ತಿರಸ್ಕರಿಸಿತ್ತು. ಆದರೂ ಈ ಹಿಂದಿನಂತೆ ನೀಡುವಂತೆ ಮಂಗಳೂರು ವಿವಿಯ ಈಗಿನ ಕುಲಪತಿ ಜಯರಾಜ್ ಅಮೀನ್ ಅವರಿಗೆ ಎಬಿವಿಪಿ ಮನವಿ ಸಲ್ಲಿಸಿತ್ತು ಎಂದು ತಿಳಿದುಬಂದಿದೆ.

ಈ ಹಿಂದೆ ಕುಲಪತಿಯಾಗಿದ್ದ ಪ್ರೊ. ಯಡಪಡಿತ್ತಾಯ
ಈ ಮನವಿಯನ್ನು ತಿರಸ್ಕರಿಸಿದ್ದ ಕುಲಪತಿಯವರು, ಹಾಸ್ಟೆಲ್‌ಗಾಗಿ ನಿಗದಿಪಡಿಸಲಾಗಿರುವ ವಿದ್ಯಾರ್ಥಿ ಕ್ಷೇಮ ನಿಧಿಯನ್ನು ಬಳಸಿಕೊಳ್ಳುವಂತೆ ಹಾಗೂ ಹಾಸ್ಟೆಲ್ ನಲ್ಲಿಯೇ ಗಣೇಶೋತ್ಸವ ಆಚರಣೆ ಮಾಡಿ ಎಂದು ತಿಳಿಸಿದ್ದರು ಎನ್ನಲಾಗಿದೆ. ಇದರಿಂದ ಕೆರಳಿದ ಎಬಿವಿಪಿಯವರು, ಬಿಜೆಪಿಯ ಮಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ಮೂಲಕ ಒತ್ತಡ ತಂದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದ ವಿವಿ ಕುಲಪತಿ
ಸೆಪ್ಟೆಂಬರ್ 1ರಂದು ವಿವಿಯ ಕಚೇರಿಗೆ ನುಗಿದ್ದ ವೇದವ್ಯಾಸ ಕಾಮತ್, ಬಿಜೆಪಿ ಮುಖಂಡ ಸಂತೋಷ್ ಕುಮಾರ್ ಬೋಳಿಯಾರ್, ವಿವಿಯ ಮಾಜಿ ಸಿಂಡಿಕೇಟ್ ಸದಸ್ಯ ರಮೇಶ್ ಕೆ ಹಾಗೂ ಇತರ ಸುಮಾರು 8 ಮಂದಿ ವಿಶ್ವವಿದ್ಯಾನಿಲಯದ ವತಿಯಿಂದಲೇ ಆರ್ಥಿಕ ವೆಚ್ಚವನ್ನು ಭರಿಸಿಕೊಂಡು ಮಂಗಳ ಸಭಾಂಗಣದಲ್ಲಿ ನಡೆಸಬೇಕೆಂದು ಆಗ್ರಹಿಸಿದ್ದಾರೆ.

ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಬರೆದ ಪತ್ರದ ಪ್ರತಿ
ಅಲ್ಲದೇ, ಈ ಬಗ್ಗೆ ಸುಮಾರು 2 ಗಂಟೆಗಳ ಕಾಲ ಒತ್ತಡ ತಂದಿದ್ದಾರೆ. ಒಪ್ಪಿಗೆ ನೀಡದಿದ್ದಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ಹಾಗೂ ಹೋರಾಟ ನಡೆಸುವುದಾಗಿ ಹಾಗೂ ಈ ಬಗ್ಗೆ ಮಾಧ್ಯಮಗೋಷ್ಠಿ ನಡೆಸುವುದಾಗಿ ಬೆದರಿಕೆ ಹಾಕಿರುತ್ತಾರೆ ಎಂದು ಕುಲಪತಿ ಜಯರಾಜ್ ಅಮೀನ್ ಮುಖ್ಯ ಕಾರ್ಯದರ್ಶಿಗಳಿಗೆ ವಿವರಿಸಿದ್ದಾರೆ.
ಪತ್ರದಲ್ಲಿ ಉದ್ವಿಗ್ನ ಮತ್ತು ಸೂಕ್ಷ್ಮ ಪರಿಸ್ಥಿತಿಯನ್ನು ಗಮನಿಸಿ ನಮಗೆ ಸೂಕ್ತವಾದ ಮಾರ್ಗದರ್ಶನವನ್ನು ನೀಡಬೇಕು. ಘರ್ಷಣೆ ತಡೆಯಲು ಈ ಕಾರ್ಯಕ್ರಮವನ್ನು ವಿಶ್ವವಿದ್ಯಾನಿಲಯದ ಮೂಲಕ ಮಂಗಳ ಸಭಾಂಗಣದಲ್ಲೇ (ಹಿಂದಿನ ಸಿಂಡಿಕೇಟ್ ನಿರ್ಧಾರದ ಪ್ರಕಾರ) ನಡೆಸಲು ಅನುಮತಿ ನೀಡುವುದೇ ಅಥವಾ ಬೇಡವೇ ಎನ್ನುವುದರ ಬಗ್ಗೆ ಸ್ಪಷ್ಟವಾಗಿ ನಿರ್ದೇಶನ ನೀಡುವುದು ಮತ್ತು ಆಚರಣೆಗೆ ಆರ್ಥಿಕ ಬೆಂಬಲದ ಬಗ್ಗೆ ಕೂಡ ಸೂಚನೆ ನೀಡಬೇಕೆಂದು ಮಂಗಳೂರು ವಿವಿ ಕುಲಪತಿ ಸರ್ಕಾರದ ಮುಖ್ಯ ಕಾರ್ಯದರ್ಶಿಯವರನ್ನು ಕೋರಿಕೊಂಡಿದ್ದು, ಪರಿಸ್ಥಿತಿಯ ಗಂಭೀರತೆಯನ್ನು ಅರ್ಥೈಸಿ, ಉತ್ತರವನ್ನು ಕೂಡಲೇ ಲಿಖಿತ ರೂಪದಲ್ಲಿ ನೀಡಬೇಕೆಂದು ಸೆ.2ರಂದು ಬರೆದಿರುವ ಪತ್ರದಲ್ಲಿ ಕೇಳಿಕೊಂಡಿದ್ದಾರೆ.
“ಶಾಸಕರಿಗೆ ಸಂವಿಧಾನ, ವಿ ವಿ, ಅದರ ನಿಯಮಗಳ ಅರಿವಿಲ್ಲದಿರುವುದು, ಹಿಂದುಳಿದ ಸಮುದಾಯದ ಕುಲಪತಿಗಳಿಗೆ ಕನಿಷ್ಠ ಗೌರವವನ್ನೂ ನೀಡದೆ ಗೂಂಡಾಗಿರಿ ಮೆರೆದು ಬೆದರಿಸುವುದು, ಅಪಮಾನಿಸುವುದು ಖಂಡನೀಯ. ಈ ಕುರಿತು ನಾಗರಿಕ ಸಮಾಜ ಧ್ವನಿ ಎತ್ತಬೇಕು. ಕುಲಪತಿ ಜಯರಾಜ ಅಮೀನ್ ಜೊತೆ ನಿಲ್ಲಬೇಕು. ಎಲ್ಲರೂ ಒಂದಾಗಿ ಶಾಸಕರ ಗೂಂಡಾಗಿರಿ, ಸಂವಿಧಾನ, ಕಾನೂನು ವಿರೋಧಿ ನಡೆಯನ್ನು ಪ್ರತಿಭಟಿಸಬೇಕು” ಎಂದು ಮುನೀರ್ ಕಾಟಿಪಳ್ಳ ಈ ದಿನ.ಕಾಮ್ ಜೊತೆಗೆ ಮಾತನಾಡುತ್ತಾ ತಿಳಿಸಿದ್ದಾರೆ.
Government hanadinda Ganesha shosthava maadabegindilla
Yaava devaru helodilla galaate maadi utsava maadi antha nimma swantha hanadinda maadi