ಬಳ್ಳಾರಿ ನಗರದಲ್ಲಿ ಸುರಿದ ಮಳೆಗೆ ಎಪಿಎಂಸಿ ಮೈದಾನ ಕೆಸರು ಗದ್ದೆಯಂತಾಗಿದೆ. ರೈತರು, ವ್ಯಾಪಾರಿಗಳು ಹಾಗೂ ಗ್ರಾಹಕರು ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುವುದಿರಲಿ, ಓಡಾಡುವುದಕ್ಕೂ ಪರದಾಡುವಂಯಹ ಪರಿಸ್ಥಿತಿ ಎದುರಾಗಿದೆ.
ಎಪಿಎಂಸಿಯಲ್ಲಿ ದಿನನಿತ್ಯ ಕೋಟ್ಯಂತರ ರೂಪಾಯಿ ವ್ಯವಹಾರ ನಡೆಯುತ್ತದೆ. ಸಾವಿರಾರು ಜನರು ಮಾರುಕಟ್ಟೆಯಲ್ಲಿ ವ್ಯಾಪಾರ-ವಹಿವಾಟು ನಡೆಸುತ್ತಾರೆ. ಆದರೂ, ಮಾರುಕಟ್ಟೆಯಲ್ಲಿ ಕನಿಷ್ಠ ಮೂಲಭೂತ ಸೌಕರ್ಯಗಳಾದ ರಸ್ತೆ, ಚರಂಡಿ, ಕುಡಿಯುವ ನೀರು, ವಿದ್ಯುತ್‌ನಂತರಹ ಸೌಲಭ್ಯಗಳಿಲ್ಲದೆ ಜನರು ಹೈರಾಣುಗುತ್ತಿದ್ದಾರೆ.
ಈ ನಡುವೆ, ಜಿಲ್ಲೆಯಲ್ಲಿ ಕಳೆದ ಎರಡು-ಮೂರು ದಿನಗಳಿಂದ ಮಳೆ ಸುರಿಯುತ್ತಿದ್ದು, ಮಳೆ ನೀರಿನಿಂದ ಮಾರುಕಟ್ಟೆ ಮತ್ತಷ್ಟು ಕೊಚ್ಚೆಯಾಗಿದೆ. ಮಂಗಳವಾರ ವ್ಯಾಪಾರಿಗಳು ಕೆಸರಿನಲ್ಲಿಯೇ ವ್ಯಾಪಾರ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಗ್ರಾಹಕರೂ ಕೂಡ ಅಧಿಕಾರಿಗಳಿಗೆ ಶಪಿಸುತ್ತಾ ಕೊಳ್ಳುವಿಕೆಯಲ್ಲಿ ತೊಡಗಿದ್ದರು.
ಮಾರುಕಟ್ಟೆಯ ಸಮಸ್ಯೆಗಳ ಬಗ್ಗೆ ಅಧಿಕಾರಿಗಳು, ಜನಪ್ರತಿನಿಧಿಗಳು ನಿರ್ಲಕ್ಷ್ಯ ಧೋರಣೆ ತಳೆದಿದ್ದಾರೆ. ಕೂಡಲೇ ಮಾರುಕಟ್ಟೆಯ ಸಮಸ್ಯೆಗಳನ್ನು ಪರಿಹರಿಸಬೇಕು. ಮೂಲಭೂತ ಸೌಕರ್ಯ ಒದಗಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಸಮಸ್ಯೆ ಬಗ್ಗೆ ಈದಿನ.ಕಾಮ್ ಜೊತೆ ಮಾತನಾಡಿದ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಮುಖಂಡ ಕೃಷ್ಣಪ್ಪ, “ನಗರದ ಎಪಿಎಂಸಿ ಅವ್ಯವಸ್ಥೆಯ ತಾಣವಾಗಿದೆ. ಮಳೆ ಬಂದಾಗ ಕೆಸರು ಗದ್ದೆಯಂತಾಗುತ್ತದೆ. ಸ್ವಚ್ಛತೆಯಿಲ್ಲದೆ ದುರ್ವಾಸನೆ ಬೀರಿ ಒಳಗೆ ಬರುವವರು ಮೂಗು ಮುಚ್ಚಿಕೊಂಡು ಬರುವ ಸ್ಥಿತಿಯಿದೆ. ಇದರ ಬಗ್ಗೆ ಈ ಹಿಂದೆಯೇ ಜಿಲ್ಲಾಧಿಕಾರಿ, ಮಹಾನಗರ ಪಾಲಿಕೆ ಹಾಗೂ ಎಪಿಎಂಸಿ ಅಧಿಕಾರಿಗೆ ಮನವಿ ಸಲ್ಲಿಸಲಾಗಿತ್ತು. ಇಲ್ಲಿಯವರೆಗೂ ಯಾವುದೇ ಅಭಿವೃದ್ಧಿ ಕಂಡು ಬಂದಿಲ್ಲ” ಎಂದು ಕಿಡಿಕಾರಿದ್ದಾರೆ.
ಮಾರುಕಟ್ಟೆ ಸಮಸ್ಯೆ ಸಂಬಂಧ ಈದಿನ.ಕಾಮ್ ಜೊತೆ ಮಾತನಾಡಿದ ಬಳ್ಳಾರಿ ಮಹಾನಗರ ಪಾಲಿಕೆ ಅಧಿಕಾರಿ ನಂಜುಂಡ ಸ್ವಾಮಿ, “ಸಮಸ್ಯೆಗಳ ಬಗ್ಗೆ ನಾವು ಗಮನಿಸಿದ್ದೇವೆ. ದುರಸ್ತಿ ಕೆಲಸಗಳು ನಡೆಯುತ್ತಿವೆ. ಆದಷ್ಟು ಬೇಗ ಸಿಸಿ ರಸ್ತೆ ಹಾಕಲಾಗುವುದು. ಇನ್ನೆರಡು ವಾರಗಳಲ್ಲಿ ಸಮಸ್ಯೆಗಳನ್ನು ಪರಿಹರಿಸಲಾಗುತ್ತದೆ” ಎಂದು ಹೇಳಿದ್ದಾರೆ.