- ಕಳಸಾಪುರ ಗ್ರಾಮದ ಡಾ ಬಿ ಆರ್ ಅಂಬೇಡ್ಕರ್ ಪ್ರತಿಮೆ ತೆರವಿಗೆ ನ್ಯಾಯಾಲಯದಿಂದ ಆದೇಶ
- ʼಬಾಬಾ ಸಾಹೇಬರ ಮೂರ್ತಿ ತೆರವುಗೊಳಿಸಿದರೆ ರಾಜ್ಯಾದ್ಯಂತ ತೀವ್ರ ಹೋರಾಟ ಮಾಡಲಾಗುವುದುʼ.
ಗದಗ ತಾಲೂಕಿನ ಕಳಸಾಪುರ ಗ್ರಾಮದ ಅಂಬೇಡ್ಕರ್ ನಗರದ ಜನರು ಖಾಲಿ ಭೂಮಿಯನ್ನು ಛಲವಾದಿ ಸಮಾಜದ ಉಪಯೋಗಕ್ಕೆ ಬಳಸಿಕೊಂಡು ಬಂದಿದ್ದು, ಇವತ್ತಿಗೂ ಮುಂದುವರೆಸಿದ್ದಾರೆ. ಈ ಜಾಗದಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಅವರ ಪ್ರತಿಮೆಯನ್ನು ಪ್ರತಿಷ್ಠಾನ ಮಾಡಲಾಗಿದೆ. ಆದರೆ, ಈ ಪ್ರತಿಮೆಯನ್ನು ತೆರವುಗೊಳಿಸುವಂತೆ ನ್ಯಾಯಾಲಯದಿಂದ ಆದೇಶ ತಂದಿದ್ದು ಖಂಡನೀಯ. ಯಾವುದೇ ಕಾರಣಕ್ಕೂ ಅಂಬೇಡ್ಕರ್ ಪ್ರತಿಮೆಯನ್ನು ತೆರವುಗೊಳಿಸಬಾರದು ಎಂದು ಗದಗ ಜಿಲ್ಲಾ ಛಲವಾದಿ ಮಹಾಸಭಾ ಆಗ್ರಹಿಸಿದೆ.
ಈ ಕುರಿತು ಜಿಲ್ಲಾ ಛಲವಾದಿ ಮಹಾಸಭಾ ಮುಖಂಡರು ಜಿಲ್ಲಾಧಿಕಾರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದರು.
“ಕಳಸಾಪುರ ಗ್ರಾಮದ ಡಾ ಬಿ ಆರ್ ಅಂಬೇಡ್ಕರ್ ನಗರಕ್ಕೆ ಹೊಂದಿಕೊಂಡಿರುವ 2 ಎಕರೆ 35 ಗುಂಟೆ ಖಾಲಿ ಜಾಗವನ್ನು ಛಲವಾದಿ ಮಹಾಸಭಾ ಸಮಾಜಕ್ಕೆ ನೀಡುವಂತೆ ಹಲವಾರು ವರ್ಷಗಳಿಂದ ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದೇವೆ. ಆದರೆ ಈವರೆಗೂ ಸರ್ಕಾರವಾಗಲಿ, ಸಂಬಂಧಪಟ್ಟ ಆಡಳಿತ ವ್ಯವಸ್ಥೆಯಾಗಲಿ ಯಾವುದೇ ಕ್ರಮ ಕೈಗೊಂಡಿಲ್ಲ” ಎಂದು ಮಹಾಸಭಾದ ಮುಖಂಡ ಶರೀಫ್ ಬಿಳಿಯಲಿ ಅಸಮಾಧಾನ ವ್ಯಕ್ತಪಡಿಸಿದರು.
“ಈ ಭೂಮಿ ವಿವಾದದಲ್ಲಿ ಕೆಲವು ಭೂ ಮಾಲೀಕರು ಉದ್ದೇಶ ಪೂರ್ವಕವಾಗಿಯೇ ಖಾಲಿ ಜಾಗ ಕಬಳಿಸಲು ಸುಳ್ಳು ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಈ ಭೂಮಿಯನ್ನು ಭೂ ಮಾಲೀಕರಿಗೆ ಬಿಟ್ಟುಕೊಡದಿರುವಂತೆ ಜಿಲ್ಲಾಧಿಕಾರಿಗಳು ಕ್ರಮ ಜರುಗಿಸಬೇಕು” ಎಂದು ಒತ್ತಾಯಿಸಿದರು.
ಸಂಘಟನೆಯ ಮುಖಂಡ ಆನಂದ ಸಿಂಗಾಡಿ ಮಾತನಾಡಿ, “ಈ ಭೂಮಿ ಭೂ ಮಾಲೀಕರಿಗೆ ಬಿಟ್ಟುಕೊಡುವುದಿಲ್ಲ. ಒಂದು ವೇಳೆ ಬಲವಂತವಾಗಿ ತೆರವುಗೊಳಿಸಲು ಮುಂದಾದರೆ ದಲಿತ ಸಂಘಟನೆಗಳ ಸಮ್ಮುಖದಲ್ಲಿ ರಾಜ್ಯಾದ್ಯಂತ ಹೋರಾಟಕ್ಕೆ ಕರೆಕೊಟ್ಟು ತೀವ್ರ ಹೋರಾಟ ಮಾಡಲಾಗುವುದು. ಮುಂದಿನ ಅನಾಹುತಕ್ಕೆ ಜಿಲ್ಲಾಡಳಿತವೇ ನೇರ ಹೊಣೆಯಾಗಲಿದೆ” ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಗದಗ | ಅನಧಿಕೃತ ಉಸುಗು ತುಂಬಿದ ಲಾರಿಗಳ ಸಂಚಾರ ನಿರ್ಬಂಧಿಸುವಂತೆ ಆಗ್ರಹ
ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರುಗಳಾದ ಸುಬಾಷ್ ಸೊಂಪುರ, ಮುತ್ತು ಬಿಳಿಯಲಿ, ಪರಶು ಕಾಳೆ, ಶಿವಾನಂದ ತಮ್ಮಣ್ಣವರ, ಎನ್ ಡಿ ಚಲವಾದಿ ಹಾಗೂ ಕಳಸಾಪುರ ಗ್ರಾಮದ ಮುಖಂಡರು ಇದ್ದರು.