- ಬೆಲೆ ಏರಿಕೆ ನಿಯಂತ್ರಣ, ಉದ್ಯೋಗ ಸೃಷ್ಟಿಗೆ ಕೇಂದ್ರದ ವಿರುದ್ಧ ಸಿಪಿಐ(ಎಮ್) ಪ್ರತಿಭಟನೆ
- 9 ವರ್ಷಗಳಿಂದ ಅಧಿಕ್ಕೇರಿದ ಕೇಂದ್ರದ ಬಿಜೆಪಿ ಸರ್ಕಾರ ಭರವಸೆ ಈಡೇರಿಸದೆ ಜನರನ್ನು ವಂಚಿಸುತ್ತಿದೆ.
ಕಳೆದ 9 ವರ್ಷಗಳಿಂದ ಅಧಿಕಾರ ಮುನ್ನಡೆಸುತ್ತಿರುವ ಕೇಂದ್ರ ಸರಕಾರ ರೈತರ ಆದಾಯ ದ್ವಿಗುಣಗೊಳಿಸಿಲ್ಲ, ಪ್ರತಿವರ್ಷ 2 ಕೋಟಿ ಉದ್ಯೋಗ ಸೃಷ್ಟಿ, ಬೆಲೆ ಏರಿಕೆ ನಿಯಂತ್ರಣ, ಕಪ್ಪು ಹಣ ವಾಪಸ್, ಬಡವರ ಖಾತೆಗೆ ತಲಾ ರೂ. 15 ಲಕ್ಷ ಜಮಾ ಸೇರಿದಂತೆ ಅನೇಕ ಭರವಸೆಗಳನ್ನು ನೀಡಿ ʼಅಚ್ಚೆ ದಿನ್ʼ ತರದೇ ಜನರನ್ನು ವಂಚಿಸುತ್ತಿದೆ ಎಂದು ಭಾರತೀಯ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸವಾದ) ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಬೆಳಗಾವಿ ನಗರದಲ್ಲಿ ಕೇಂದ್ರ ಸರ್ಕಾರದ ಸುಳ್ಳು ಭರವಸೆ, ಬೆಲೆ ಏರಿಕೆ ಮತ್ತು ಉದ್ಯೋಗ ಕಡಿತ ವಿರುದ್ಧ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಜಿಲ್ಲಾಧಿಕಾರಿ ಮೂಲಕ ಪ್ರಧಾನಿ ನರೇಂದ್ರ ಮೋದಿಯವರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದರು.
“2014 ಚುನಾವಣೆಯಲ್ಲಿ ಜನರಿಗೆ ನೀಡಿದ ಆಶ್ವಾಸನೆ 9 ವರ್ಷ ಕಳೆದರೂ ಇನ್ನೂ ಈಡೇರಿಸಿಲ್ಲ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದಾಗಿನಿಂದ ಬೆಲೆ ಏರಿಕೆ, ಅಕ್ಕಿ, ಬೇಳೆ, ಅಡುಗೆ ಎಣ್ಣೆ, ಪೆಟ್ರೋಲ್, ಡಿಸೇಲ್, ವಿದ್ಯುತ್, ರಸಾಯನಿಕ ಔಷಧಿ ಬೆಲೆ ಸೇರಿದಂತೆ ದಿನ ಬಳಕೆಯ ವಸ್ತುಗಳ ಬೆಲೆಗಳು ಗಗನಮುಖಿಯಾಗಿವೆ. ಆದರೂ ಕೇಂದ್ರ ಸರಕಾರ ಬಡವರ ಬಗ್ಗೆ ಕಾಳಜಿ ವಹಿಸದೆ, ಕಾರ್ಪೋರೇಟ್ ಕಂಪನಿಗಳ ಪರವಾಗಿ ಕೆಲಸ ಮಾಡುತ್ತಿದೆ” ಎಂದು ಆರೋಪಿಸಿದರು.
“ಚುನಾವಣೆ ಪೂರ್ವದಲ್ಲಿ 2 ಕೋಟಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ ಕೇಂದ್ರ ಸರಕಾರ ಉದ್ಯೋಗ ಸೃಷ್ಟಿ ಕುರಿತು ಕ್ರಮವಹಿಸುತ್ತಿಲ್ಲ. ನಿರುದ್ಯೋಗಿ ಯುವಕರು ಕೆಲಸವಿಲ್ಲದೆ ಪರದಾಡುವಂತಾಗಿದೆ. ಹೀಗಾಗಿ ನಿರುದ್ಯೋಗಿಗಳ ಪಡೆ ಹೆಚ್ಚಾಗುತ್ತಿದೆ. ಸರಕಾರದ ಅಡಿಯಲ್ಲಿ ಖಾಲಿ ಇರುವ 50 ಲಕ್ಷದಷ್ಟು ಉದ್ಯೋಗಗಳನ್ನು ಭರ್ತಿ ಮಾಡಬೇಕು. ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸಬೇಕು, ಅನ್ನಭಾಗ್ಯಕ್ಕೆ ಹೆಚ್ಚುವರಿ 5 ಕೆ.ಜಿ ಅಕ್ಕಿ ವಿತರಿಸಬೇಕು, ಸಾರ್ವಜನಿಕ ವಲಯದ ಖಾಸಗಿಕರಣ ನಿಲ್ಲಬೇಕು, ರಾಜ್ಯದ ತೆರಿಗೆ ಪಾಲು ನೀಡುವ ತಾರತಮ್ಯ ನೀಡಬೇಕೆಂದು” ಎಂದು ಆಗ್ರಹಿಸಿದರು.
ಪಕ್ಷದ ಮುಖಂಡ ಮಂದಾ ನೇವಗಿ ಮಾತನಾಡಿ, “ದೇಶದಲ್ಲಿ ಉದ್ಯೋಗ ಸೃಷ್ಟಿಯಾಗಬೇಕು. ರಾಜ್ಯದಲ್ಲಿ ಮಳೆ ಕೊರತೆಯಿಂದ ರೈತರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಹೀಗಾಗಿ ರಾಜ್ಯದ ರೈತರ ಸಾಲ ಮನ್ನಾ ಮಾಡಬೇಕು, ಬೆಲೆ ಏರಿಕೆ ಅಧಿಕವಾಗಿದ್ದು ಅಗತ್ಯ ವಸ್ತುಗಳ ಬೆಲೆ ಇಳಿಕೆ ಮಾಡಬೇಕು ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸಂಪಾದಕರ ಬಾಯಿ ಬಡಿಯುವುದು ವಿಕಟ ವಿಡಂಬನೆ
ಈ ಸಂದರ್ಭದಲ್ಲಿ ಭಾರತ ಕಮ್ಯುನಿಸ್ಟ್ (ಮಾರ್ಕ್ಸವಾದಿ) ಪಕ್ಷದ ಸಂಧ್ಯಾ ಕುಲಕರ್ಣಿ ಮೀನಾಕ್ಷಿ ಧವಡೆ, ಸುಶೀಲಾ ತಳವಾರ, ರೇಣುಕಾ ಗೌಡರ, ಕಾಂಚನ ಗಡಕರಿ, ಕೃಷ್ಣಾವತಿ ಟೋಪಿನಕಟ್ಟಿ, ರೇಣುಕಾ ಪಾಟಿಲ್, ಸುವರ್ಣಾ ಮೋರೆ
ಸೇರಿದಂತೆ ಪಕ್ಷದ ಕಾರ್ಯಕರ್ತರು ಇದ್ಧರು.