- ಹೈ-ಕ ಪ್ರದೇಶ 1948 ಸೆಪ್ಟೆಂಬರ್ 17 ರಂದು ನಿಜಾಂ ಆಡಳಿತದಿಂದ ವಿಮೋಚನೆ
- ಸಿಎಂ ಸಿದ್ದರಾಮಯ್ಯ, ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯಸಿಂಗ್ ಅವರಿಗೆ ಮನವಿ
ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ ಸಂದರ್ಭದಲ್ಲಿ ಹೈದ್ರಾಬಾದ-ಕರ್ನಾಟಕ (ಕಲ್ಯಾಣ ಕರ್ನಾಟಕ) ವಿಮೋಚನೆಗಾಗಿ ಹೋರಾಡಿದ ಕಲ್ಯಾಣ ಕರ್ನಾಟಕ ಭಾಗದ ಎಲ್ಲಾ ಸ್ವತಂತ್ರ ಸೇನಾನಿಗಳ ಸ್ಮಾರಕಗಳನ್ನು ನಿರ್ಮಿಸಬೇಕೆಂದು ಸಾಮಾಜಿಕ ಕಾರ್ಯಕರ್ತ ಗುರುನಾಥ ವಡ್ಡೆ ಆಗ್ರಹಿಸಿದ್ದಾರೆ.
ಈ ಸಂಬಂಧ ಸಿಎಂ ಸಿದ್ದರಾಮಯ್ಯ ಹಾಗೂ ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯಸಿಂಗ್ ಹಾಗೂ ಮಂಡಳಿ ಕಾರ್ಯದರ್ಶಿಗಳಿಗೆ ಹಕ್ಕೊತ್ತಾಯ ಪತ್ರ ಬರೆದಿದ್ದಾರೆ.
“ಭಾರತ ದೇಶವು 15ನೇ ಆಗಸ್ಟ್ 1947 ಕ್ಕೆ ಸ್ವತಂತ್ರಗೊಂಡರೂ ನಿಜಾಮನ ಆಳ್ವಿಕೆಯಲ್ಲಿದ್ದ ಹೈದ್ರಾಬಾದ-ಕರ್ನಾಟಕ ಪ್ರದೇಶವು 1948 ಸೆಪ್ಟೆಂಬರ್ 17 ರಂದು ವಿಮೋಚನೆಗೊಂಡಿತ್ತು. ಈ ವಿಮೋಚನಾ ಸಂಗ್ರಾಮದಲ್ಲಿ ಈ ಭಾಗದ ಅನೇಕರು ನಿಜಾಮನ ವಿರುದ್ಧ ಹೋರಾಡಿದರು, ಅನೇಕರು ಹುತಾತ್ಮರಾದರು, ಹಲವರು ಜೈಲು ಪಾಲಾದರು. ಈ ಭಾಗದ ಸ್ವತಂತ್ರಕ್ಕೆ ಹೋರಾಡಿದ ಎಲ್ಲಾ ಸ್ವತಂತ್ರ ಹೋರಾಟಗಾರರ ಚರಿತ್ರೆ ಪುಸ್ತಕವನ್ನು ಪ್ರಕಟಿಸುವುದು ಹಾಗೂ ಸ್ವತಂತ್ರ ಸೇನಾನಿಗಳ ಸ್ವಂತ ಗ್ರಾಮದಲ್ಲಿ ಸ್ಮಾರಕಗಳನ್ನು ನಿರ್ಮಿಸುವುದು ಅವಶ್ಯಕವಾಗಿದೆ” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ರೈತರ ಸಮಸ್ಯೆಗಳಿಗೆ ಸರ್ಕಾರ ಯುದ್ಧೋಪಾದಿಯಲ್ಲಿ ಕ್ರಮಕೈಗೊಳ್ಳಲಿ
“ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ, ಕಲಬುರಗಿಯಿಂದ ಈ ವರ್ಷ ಪೂರ್ತಿ ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ ಆಚರಿಸಲಾಗುತ್ತಿದ್ದು, ಈ ಸಂದರ್ಭದಲ್ಲಿ ಈ ಭಾಗದ ವಿಮೋಚನೆಗಾಗಿ ಹೋರಾಡಿದ ಎಲ್ಲಾ ಹೋರಾಟಗಾರರ ಚರಿತ್ರೆ ಪ್ರಕಟಿಸಬೇಕು ಹಾಗೂ ಅವರ ಸ್ಮಾರಕಗಳನ್ನು ನಿರ್ಮಿಸಬೇಕೆಂದು” ವಡ್ಡೆ ಆಗ್ರಹಿಸಿದರು.