ದಲಿತರ ಪಾಲಿಗೆ ಮೇಲ್ವರ್ಗ ಎಂದರೆ ಅವರನ್ನು ಬಿಟ್ಟು ಮಿಕ್ಕೆಲ್ಲ ಜಾತಿಯವರೂ. ಇನ್ನು ಬ್ರಾಹ್ಮಣರಿಗೆ ಅವರ ಜಾತಿ ಬಿಟ್ಟು ಮಿಕ್ಕವರೆಲ್ಲ ಅಸೃಶ್ಯರೇ. ತಾವಿರುವ ಜಾಗಗಳಲ್ಲಿ ಬೇರೆಲ್ಲ ಜಾತಿಯವರಿಂದ ಒಂದು ಮಟ್ಟಿನ ಅಂತರ ಕಾಯ್ದುಕೊಳ್ಳದೇ ಇರುವುದಿಲ್ಲ. ಜಾತಿಶ್ರೇಷ್ಠತೆಯ ವ್ಯಸನದಿಂದ ಹೊರಬರದಿರುವ ಸನಾತನ ಮನಸ್ಥಿತಿಗೆ ಮದ್ದು ಅರೆಯಲೇ ಬೇಕು.
‘ಕೆಲವು ವಿಷಯಗಳನ್ನು ವಿರೋಧ ಸಾಲದು. ಅವುಗಳ ನಿರ್ಮೂಲನೆಯೇ ಪರಿಹಾರ. ನಾವು ಡೆಂಗ್ಯೂ, ಮಲೇರಿಯಾ, ಸೊಳ್ಳೆ ಅಥವಾ ಕೊರೊನಾ ವೈರಸ್ ಅನ್ನು ವಿರೋಧಿಸಿದರೇನು ಪ್ರಯೋಜನ?. ಅವುಗಳ ನಿರ್ಮೂಲನೆಯೇ ಆಗಬೇಕು. ಅದರಂತೆಯೇ ನಾವು ಮನುಷ್ಯ ಮನುಷ್ಯರ ನಡುವೆ ತಾರತಮ್ಯ, ಮೇಲು ಕೀಳು ಬೋಧಿಸುವ ಸನಾತನ ಮನಸ್ಥಿತಿಯನ್ನು ನಾಶ ಮಾಡಬೇಕು. ‘ಸನಾತನ ಧರ್ಮ’ವನ್ನು ವಿರೋಧಿಸುವ ಬದಲು ಅದನ್ನು ನಿರ್ಮೂಲನೆ ಮಾಡಬೇಕು’ ಎಂದು ಪ್ರಗತಿಪರರು ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ತಮಿಳುನಾಡಿನ ಸಚಿವ ಉದಯನಿಧಿ ಸ್ಟಾಲಿನ್ ಹೇಳಿರುವುದು ಹಿಂದೂ ಧರ್ಮ ವಿರೋಧಿ ಹೇಳಿಕೆ ಎಂದು ಬಿಜೆಪಿಯವರು ಬೊಬ್ಬೆ ಹೊಡೆಯುತ್ತಿದ್ದಾರೆ. ಆದರೆ ಅವರ ಹೇಳಿಕೆಯನ್ನು ಪ್ರಜ್ಞಾವಂತರು ಮತ್ತು ಸಮಾನತೆಯ ಪ್ರತಿಪಾದಕರು ಸ್ವಾಗತಿಸಿದ್ದಾರೆ.
ಸಮ ಸಮಾಜವನ್ನು ನಿರಾಕರಿಸುವುದು, ಜಾತಿಪದ್ಧತಿಯನ್ನು ಎತ್ತಿ ಹಿಡಿದು ಆಚರಿಸುವುದು, ಪಂಕ್ತಿಭೇದ, ಮನೆ, ದೇವಸ್ಥಾನಗಳಿಗೆ ಪ್ರವೇಶ ನಿರಾಕರಣೆ, ಮಡಿ ಮೈಲಿಗೆಯ ಆಚರಣೆ, ಹೆಣ್ಣನ್ನು ಗಂಡಿನ ಗುಲಾಮಳಂತೆ ಕಾಣುವುದು, ಮುಟ್ಟಾದ ಹೆಣ್ಣನ್ನು ಮೈಲಿಗೆಯ ಹೆಸರಲ್ಲಿ ದೇವಸ್ಥಾನ-ಶುಭ ಕಾರ್ಯಗಳಿಂದ ದೂರ ಇರಿಸುವುದು ಅನಿಷ್ಟ ಆಚರಣೆ. ಇಂತಹ ಜೀವವಿರೋಧಿ ಆಚರಣೆಗಳನ್ನು ಜೀವಂತ ಇಟ್ಟವರೇ ಸನಾತನಿಗಳು. ಹಾಗೆ ನೋಡಿದರೆ ಈಗ ಉದಯನಿಧಿ, ಪ್ರಿಯಾಂಕ್ ಖರ್ಗೆ ಮುಂತಾದವರ ಹೇಳಿಕೆಗಳನ್ನು ವಿರೋಧಿಸುತ್ತಿರುವ ಬಿಜೆಪಿ ನಾಯಕ ಕೆ ಎಸ್ ಈಶ್ವರಪ್ಪ ಕೂಡಾ ಬ್ರಾಹ್ಮಣರಿಂದ ಮುಟ್ಟಿಸಿಕೊಳ್ಳದವರೇ. ಸ್ವತಃ ಮಂತ್ರಿ ಆಗಿ ದೇವಸ್ಥಾನಕ್ಕೆ ಹೋಗಿದ್ದಾಗ ಅವರಿಗೆ ಹೂ ಹಾರವನ್ನು ಎರಡಡಿ ದೂರದಿಂದ ಅರ್ಚಕನೊಬ್ಬ ಎಸೆದಿರುವ ವಿಡಿಯೊವೊಂದು ಓಡಾಡಿತ್ತು. ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಗೌಡ ಸಾರಸ್ವತ ಬ್ರಾಹ್ಮಣರ ದೇವರ ಪಲ್ಲಕ್ಕಿಗೆ ಹೆಗಲು ಕೊಟ್ಟ ಕಾರಣಕ್ಕೆ ಪಲ್ಲಕ್ಕಿಯನ್ನು ಶುದ್ದೀಕರಣ ಮಾಡಿರುವುದು, ಮಾಜಿ ರಾಷ್ಟ್ರಪತಿ ಕೋವಿಂದ್ ದಂಪತಿಗೆ ದೇವಸ್ಥಾನವೊಂದರ ಮುಖ್ಯ ಪ್ರಾಂಗಣಕ್ಕೆ ಪ್ರವೇಶ ನಿರಾಕರಿಸಿರುವಂತಹ ಲಕ್ಷಾಂತರ ಪ್ರಕರಣಗಳು ವರದಿಯಾಗುತ್ತಲೇ ಇವೆ. ಇವೆಲ್ಲ ಮೇಲು ಕೀಳಿನ ಸನಾತನ ಮನಸ್ಥಿತಿಯ ಕೆಲವೇ ಉದಾಹರಣೆಗಳು.
ಅಯೋಧ್ಯೆಯಲ್ಲಿ ರಾಮಮಂದಿರದ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಅಂದಿನ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಗೆ ಆಮಂತ್ರಣ ನೀಡದಿರುವುದು ಹಾಗೂ ಇತ್ತೀಚೆಗೆ ‘ಸೆಂಟ್ರಲ್ ವಿಸ್ತಾ’ದ ಉದ್ಘಾಟನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಸೌಜನ್ಯಕ್ಕೂ ಕರೆಯದೆ ಪ್ರಧಾನಿ ಮೋದಿ ನೆರವೇರಿಸಿದ್ದು ಸನಾತನ ಮನಸ್ಥಿತಿ ಎಂಬ ಟೀಕೆಯಲ್ಲಿ ಹುರುಳಿದೆ. “ಸನಾತನ ಧರ್ಮದ ಜಾತಿ ತಾರತಮ್ಯ ಆಚರಣೆಯ ಬಗ್ಗೆ ನೀವು ಯಾವುದಾದರೂ ಉದಾಹರಣೆಯನ್ನು ನೀಡಬಹುದೇ” ಎಂದು ಪತ್ರಕರ್ತರೊಬ್ಬರು ಕೇಳಿದಾಗ , “ಹೊಸ ಸಂಸತ್ ಕಟ್ಟಡದ ಉದ್ಘಾಟನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಆಹ್ವಾನಿಸಲಾಗಿಲ್ಲ. ಇದು ಪ್ರಸ್ತುತ ಅತ್ಯುತ್ತಮವಾದ ಉದಾಹರಣೆ” ಎಂದು ಉದಯನಿಧಿ ಸ್ಟಾಲಿನ್ ಹೇಳಿರುವುದು ಸರಿಯಾಗಿದೆ.
ಮಾಂಸಹಾರಿಗಳನ್ನು ಕೀಳಾಗಿ ಕಾಣುವುದು, ಬಾಡಿಗೆ ಮನೆಯ ಮುಂದೆ ʼಸಸ್ಯಹಾರಿಗಳಿಗೆ ಮಾತ್ರʼ ಎಂಬ ಬೋರ್ಡ್ ಹಾಕುವುದು, ಹೊಟೇಲುಗಳಲ್ಲಿ ದಲಿತರಿಗೆ ಪ್ರತ್ಯೇಕ ತಟ್ಟೆ ಲೋಟ ಇಡುವುದು, ದಲಿತ ಯುವಕರಿಗೆ ಕ್ಷೌರ ಮಾಡದಿರುವುದು, ಸಾರ್ವಜನಿಕ ನಲ್ಲಿಯ ನೀರು ನಿರಾಕರಿಸುವುದು, ಶಾಲೆ-ಅಂಗನವಾಡಿಗಳಲ್ಲಿ ದಲಿತ ಮಹಿಳೆ ಮಾಡಿದ ಅಡುಗೆ ಬಹಿಷ್ಕರಿಸುವುದು, ಶಾಲೆಯ ಪಾಯಿಖಾನೆಗಳನ್ನು ದಲಿತ ಮಕ್ಕಳಿಂದ ತೊಳೆಸುವುದು, ಶಿಕ್ಷಕನ ಗಡಿಗೆಯ ನೀರು ತೆಗೆದು ಕುಡಿದ ಬಾಲಕನ ಜೀವ ತೆಗೆಯುವುದು ಅಪ್ಪಟ ರೋಗಿಷ್ಠ ಸಮಾಜದ ಲಕ್ಷಣಗಳು. ಉತ್ತರ ಭಾರತದಲ್ಲಿ ಜಾತಿಶ್ರೇಷ್ಠತೆಯ ವ್ಯಸನ ಯಾವ ಮಟ್ಟದಲ್ಲಿದೆ ಎಂದರೆ, ದಲಿತ ಮದುಮಗ ಕುದುರೆ ಮೇಲೆ ಮೆರವಣಿಗೆ ಹೋದ ಕಾರಣಕ್ಕೆ ಹಲ್ಲೆ ನಡೆಸಿದ ಉದಾಹರಣೆಗಳು ಹೇರಳ. . ಬೈಕ್‌ನಲ್ಲಿ ಓಡಾಡಿದ, ಅಂಬೇಡ್ಕರ್ ಅವರನ್ನು ಮೆಚ್ಚುವ ಗೀತೆಯನ್ನು ಮೊಬೈಲ್ ಫೋನಿನ ರಿಂಗ್ ಟೋನ್ ಮಾಡಿಕೊಂಡ, ಮೀಸೆ ಬೆಳೆಸಿದ, ಕೂಲಿಂಗ್ ಗ್ಲಾಸ್ ಹಾಕಿದ್ದ, ಹೇರ್‌ಸ್ಟೈಲ್ ಮಾಡಿದ್ದ, ಬಲಿಷ್ಠ ಜಾತಿಯ ಹುಡುಗಿಯನ್ನು ಪ್ರೀತಿಸಿದ ಕಾರಣಗಳಿಗಾಗಿ ದಲಿತ ಯುವಕರನ್ನು ಹೊಡೆದು ಸಾಯಿಸುವ ಮನಸ್ಥಿತಿಯನ್ನು ಏನೆಂದು ಬಣ್ಣಿಸಬೇಕು? ದಲಿತನ ಮೇಲೆ ಮೂತ್ರ ಮಾಡೋದು, ಮೂತ್ರ ಕುಡಿಸೋದು, ಮಲ ತಿನ್ನಿಸುವುದು ಬೂಟು ನೆಕ್ಕಿಸುವುದು ಇವೆಲ್ಲ ಹಿಂದೂ ಧರ್ಮಕ್ಕೆ ಅಂಟಿದ ಕಳಂಕಗಳು ಎಂದು , ‘ಧರ್ಮ ರಕ್ಷಕರಿ’ಗೆ ಯಾಕೆ ಅನಿಸುವುದಿಲ್ಲ? ಈ ಅನಿಷ್ಠಗಳನ್ನು ನಿವಾರಿಸಬೇಕೆಂದು ದನಿ ಎತ್ತುವುದು ಅಪರಾಧವೇ?
ಬ್ರಾಹ್ಮಣರು ತಮ್ಮದಲ್ಲದ ಎಲ್ಲ ಜಾತಿಯವರನ್ನೂ ಅಸಮಾನವಾಗಿ ಕಂಡರೆ, ಜಾತಿ ವ್ಯವಸ್ಥೆಯ ಅತ್ಯಂತ ಕೆಳಗಿರುವ ದಲಿತರನ್ನು ಅಸ್ಪೃಶ್ಯರನ್ನಾಗಿ ಕಾಣುವುದರಲ್ಲಿ ಬ್ರಾಹ್ಮಣೇತರ ಜಾತಿಯವರೂ ಇದ್ದಾರೆ. ಒಕ್ಕಲಿಗರು, ಬಂಟರು, ಗೌಡರು, ಕುರುಬರು. ಲಿಂಗಾಯತರು ಹೀಗೆ ಎಲ್ಲರೂ ದಲಿತರನ್ನು ಅಸ್ಪೃಶ್ಯರನ್ನಾಗಿಯೇ ಕಾಣುತ್ತಿದ್ದಾರೆ. ದಲಿತರ ಪಾಲಿಗೆ ಮೇಲ್ವರ್ಗ ಎಂದರೆ ಅವರನ್ನು ಬಿಟ್ಟು ಮಿಕ್ಕೆಲ್ಲ ಜಾತಿಯವರೂ. ಇನ್ನು ಬ್ರಾಹ್ಮಣರಿಗೆ ಅವರ ಜಾತಿ ಬಿಟ್ಟು ಮಿಕ್ಕವರೆಲ್ಲ ಅಸೃಶ್ಯರೇ. ತಾವಿರುವ ಜಾಗಗಳಲ್ಲಿ ಬೇರೆಲ್ಲ ಜಾತಿಯವರಿಂದ ಒಂದು ಮಟ್ಟಿನ ಅಂತರ ಕಾಯ್ದುಕೊಳ್ಳದೇ ಇರುವುದಿಲ್ಲ. ಜಾತಿಶ್ರೇಷ್ಠತೆಯ ವ್ಯಸನದಿಂದ ಹೊರಬರದಿರುವ ಸನಾತನ ಮನಸ್ಥಿತಿಗೆ ಮದ್ದು ಅರೆಯಲೇ ಬೇಕು.
ಉದಯನಿಧಿ ಸ್ಟಾಲಿನ್ ಅವರ ತಲೆ ಕತ್ತರಿಸಿದವರಿಗೆ ಹತ್ತು ಕೋಟಿ ರೂಪಾಯಿ ಬಹುಮಾನ ಕೊಡುವುದಾಗಿ ಅಯೋದ್ಯೆಯ ಕಾವಿಧಾರಿ ಧರ್ಮಾಂಧರೊಬ್ಬರು ಘೋಷಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಪ್ರಿಯಾಂಕ್ ಖರ್ಗೆ ಮತ್ತು ಉದಯನಿಧಿ ಸ್ಟಾಲಿನ್ ವಿರುದ್ಧ ಧರ್ಮನಿಂದನೆಯ ಪ್ರಕರಣ ದಾಖಲಿಸಲಾಗಿದೆ. ಮಣಿಪುರ ನಾಲ್ಕು ತಿಂಗಳಿನಿಂದ ಜನಾಂಗೀಯ ಹಿಂಸೆ, ರಕ್ತಪಾತದಿಂದ ತೊಯ್ದಿದೆ. ಅದರ ಬಗ್ಗೆ ಪ್ರಧಾನಿಯಾಗಿ ತನ್ನ ಕರ್ತವ್ಯ ನಿರ್ವಹಿಸಲು ಅಸಮರ್ಥರಾಗಿರುವ ನರೇಂದ್ರ ಮೋದಿ ಉದಯನಿಧಿ ಹೇಳಿಕೆಗೆ ತಕ್ಕ ಉತ್ತರ ನೀಡಬೇಕು ಎಂದು ಪ್ರಚೋದನಕಾರಿ ಹೇಳಿಕೆ ಕೊಟ್ಟಿದ್ದಾರೆ. ಕೆಲವೇ ತಿಂಗಳಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂಬ ಉತ್ಸಾಹದಲ್ಲಿರುವ ಮೋದಿ ಅವರಿಗೆ ಇಂತಹ ಭಾವೋದ್ರೇಕದ ಅಸ್ತ್ರಗಳು ಸಿಕ್ಕಾಗ ಅವರ ಉನ್ಮಾದ ಇಮ್ಮಡಿಯಾಗುತ್ತದೆ. ಇದು ಕೂಡ ಸನಾತನ ಮನಸ್ಥಿತಿಯ ಉಲ್ಬಣಿತ ವ್ಯಾಧಿ.
