“ನಾವು ಹುಟ್ಟಿನಿಂದ ಅಲ್ಲ, ಈ ತಾಂಡಾ ಹುಟ್ಟಿನಿಂದಲೂ ರಸ್ತೆಯೇ ಕಂಡಿಲ್ಲ. ಸ್ವಲ್ಪ ಮಳೆಯಾದರೆ ಸಾಕು ತುಂಬಿ ಹರಿಯುವ ಹಳ್ಳ ದಾಟಬೇಕು, ಕಾಲು ದಾರಿಯಾದ ಈ ಕೆಸರು ಗದ್ದೆಯಲ್ಲಿ ಬೈಕ್ ಓಡಲ್ಲ, ಅಂಬುಲೆನ್ಸ್ ಬರಲ್ಲ, ಇನ್ನು ಬಸ್ ವ್ಯವಸ್ಥೆ ಅಂತೂ ದೂರದ ಮಾತು. ಆಸ್ಪತ್ರೆಗೆ ಹೋಗುವ ರೋಗಿಗಳನ್ನು ಮಂಚದ ಮೇಲೆ ಹೊತ್ತಿಕೊಂಡು ಹೋದ ಉದಾಹರಣೆಗಳೂ ಇವೆ. ಆದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಮಾತ್ರ ಕುಂಟು ನೆಪ ಹೇಳಿ ಸಮಜಾಯಿಸಿ ಕೊಡ್ತಾರೆ.”
“ಐದಾರು ದಶಕಗಳೇ ಕಳೆದಿವೆ, ನಮ್ಮ ತಾತಂದಿಯರ ಕಾಲದಿಂದಲೂ ನಮ್ಮ ತಾಂಡಾದ ಜನರು ರಸ್ತೆ ಕಂಡಿಲ್ಲ, ಪುಟ್ಟ ಮಕ್ಕಳು ಶಾಲೆಗೆ ಹೋಗಬೇಕಾದರೆ ಈ ಕೆಸರು ಗದ್ದೆಯಂತಾದ ರಸ್ತೆಯೇ ಗತಿ, ಸ್ವಲ್ಪ ಮಳೆಯಾದರೆ ತುಂಬಿ ಹರಿಯುವ ಹಳ್ಳ ದಾಟಲಾಗದೇ ಮಕ್ಕಳು ಮನೆಯಲ್ಲೇ ಇರಬೇಕು. ಒಂದೆರಡು ಬಾರಿ ಗರ್ಭಿಣಿಯರು ಹಳ್ಳ ದಾಟಲು ಸಾಧ್ಯವಾಗದೆ ಹಳ್ಳದಲ್ಲೇ ಹೆರಿಗೆಯಾಗಿತ್ತು. ಇನ್ನು ಆಸ್ಪತ್ರೆಗೆ ಕೊಂಡೊಯ್ಯದಕ್ಕೆ ಯಾವ ವ್ಯವಸ್ಥೆಯೂ ಇಲ್ಲದೆ ಮಂಚದ ಮೇಲೆ, ಬೆನ್ನ ಮೇಲೆ ಹೊತ್ತಿಕೊಂಡು ಹೋಗಬೇಕಾದ ದುಸ್ಥಿತಿ ನಮ್ಮದಾಗಿದೆ. ಇಡೀ ಬೀದರ್ ಜಿಲ್ಲೆಯಲ್ಲೇ ಇಂಥ ತಕ್ಲೀಪ್ ಬಹುಶಃ ಬರಲಾಕಿಲ್ಲ” – ಇದು ಬೀದರ್ ಜಿಲ್ಲೆ ಔರಾದ್ ತಾಲೂಕಿನ ವಾಡನಬಾಗ್ ತಾಂಡಾದ ನಿವಾಸಿ ಮೋತಿರಾಮ ಅವರು ಮಾತುಗಳು.
ಈ ತಾಂಡಾ ವಡಗಾಂವ-ಬೀದರ್ ಮುಖ್ಯ ರಸ್ತೆಯಿಂದ 1 ಕಿ.ಮೀ. ದೂರದಲ್ಲಿದೆ. ವಡಗಾಂವ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ತಾಂಡಾದಲ್ಲಿ ಹೆಚ್ಚು ಕಮ್ಮಿ 30 ಮನೆಗಳು, 200ಕ್ಕೂ ಅಧಿಕ ಜನರು ವಾಸಿಸುತ್ತಿದ್ದಾರೆ. ತಾಂಡಾದಲ್ಲಿ ಕಿರಿಯ ಪ್ರಾಥಮಿಕ ಶಾಲೆಯೂ ಇದೆ. ಕುಡಿಯುವ ನೀರು, ರಸ್ತೆ, ಚರಂಡಿ ಸೇರಿದಂತೆ ಅಗತ್ಯ ಸೌಲಭ್ಯಗಳು ತಕ್ಕಮಟ್ಟಿಗೆ ಇವೆ. ಆದರೆ, ಊರಿಗೆ ಸೂಕ್ತ ದಾರಿಯಿಲ್ಲದ ಕಾರಣ ತಾಂಡಾ ನಿವಾಸಿಗಳು ದಿನನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.
ಅಧಿಕ ಮಳೆಯಾದ ದಿನ ಶಾಲಾ-ಕಾಲೇಜಿಗೆ ತೆರಳಲ್ಲ:
ದೇಶಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷಗಳೇ ಕಳೆದಿವೆ, ಕಳೆದ ವರ್ಷದಿಂದ ದೇಶಾದ್ಯಂತ ಸ್ವತಂತ್ರದ ಅಮೃತ ಮಹೋತ್ಸವ ಆಚರಿಸಲಾಗುತ್ತಿದೆ. ಆದರೆ ಸ್ವಾತಂತ್ರ್ಯ ದಕ್ಕಿದರೂ ಈ ತಾಂಡಾದ ನಿವಾಸಿಗಳಿಗೆ ಇಲ್ಲಿಯವರಿಗೆ ರಸ್ತೆ ಭಾಗ್ಯ ಕಾಣಲಿಲ್ಲ. ಗ್ರಾಮೀಣ ಭಾಗದ ಸರ್ವಾಂಗೀಣ ವಿಕಾಸಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನೇಕ ಯೋಜನೆಗಳು ಜಾರಿಗೊಳಿಸಿದೆ. ಆದರೆ ಜನಪ್ರತಿನಿಧಿಗಳ ಇಚ್ಚಾಶಕ್ತಿ ಕೊರತೆ, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇಂಥ ಅನೇಕ ಗ್ರಾಮ-ತಾಂಡಾಗಳಿಗೆ ಕನಿಷ್ಠ ಮೂಲಭೂತ ಸೌಕರ್ಯ ದಕ್ಕದೇ ಇರುವುದು ವಿಪರ್ಯಸವೇ ಸರಿ. ಇದೇ ಕ್ಷೇತ್ರದಿಂದ ನಾಲ್ಕು ಬಾರಿ ಗೆದ್ದು, ಮಂತ್ರಿಯೂ ಆದ ಹಾಲಿ ಶಾಸಕ ಪ್ರಭು ಚವ್ಹಾಣ ಅವರು ಈ ತಾಂಡಾದ ಜನರಿಗೆ ಕನಿಷ್ಠ ರಸ್ತೆ ನಿರ್ಮಿಸಿಕೊಡಲು ಸಾಧ್ಯವಾಗದೇ ಇರುವುದು ದುರ್ದೈವದ ಸಂಗತಿ ಎನ್ನುವುದು ಸಾರ್ವಜನಿಕರ ಅಭಿಮತ.
ಊರಿನ ಸರ್ಕಾರಿ ಕಿರಿಯ ಶಾಲೆಯಲ್ಲಿ ಪುಟ್ಟ ಮಕ್ಕಳು ಕಲಿಯುತ್ತಾರೆ. ಹಿರಿಯ ಪ್ರಾಥಮಿಕ ಶಾಲೆ ಸೇರಿದಂತೆ ಕಾಲೇಜಿಗೆ ಹೋಗುವ ಸುಮಾರು 15-20 ಮಕ್ಕಳು ಒಂದು ಕಿ.ಮೀ. ಕೆಸರು ಗದ್ದೆಯಂತಾದ ಹಾದಿ ಮೇಲೆ ನಡೆದುಕೊಂಡು ತೆರಳಬೇಕು. ಇದೇ ರಸ್ತೆ ಮಧ್ಯೆ ಸೇತುವೆ ನಿರ್ಮಿಸಿದ್ದರು, ಅದು ಮಳೆ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದೆ. ಜೋರಾಗಿ ಮಳೆಯಾದರೆ ಅಂದಿನ ದಿನ ಹಳ್ಳ ತುಂಬಿ ಹರಿಯುವ ಕಾರಣ ಎಲ್ಲಾ ಮಕ್ಕಳು ಮನೆಯಲ್ಲೇ ಇರಬೇಕಾಗುತ್ತದೆ. ಇನ್ನು ಶಾಲಾ, ಕಾಲೇಜಿಗೆ ತೆರಳಿದ ವಿದ್ಯಾರ್ಥಿಗಳು ಹೆಚ್ಚು ಮಳೆಯಾದರೆ ತಾಂಡಕ್ಕೆ ಬರಲಾಗದೇ ಅಂದು ರಾತ್ರಿ ಸಂಬಂಧಿಕರ ಮನೆ, ಧಾಬಾದಲ್ಲಿ ಮಲಗಿ ಮುಂಜಾನೆದ್ದು ಬರಬೇಕಾಗುತ್ತದೆ. ಇಂಥ ದುರ್ಗತಿಯಲ್ಲೇ ಇಡೀ ಬದುಕು ಸವೆಸಿದ್ದೇವೆ. ಯಾರೋಬ್ಬರೂ ನಮ್ಮ ಗೋಳು ಕೇಳುತ್ತಿಲ್ಲ. ಸ್ಥಳೀಯ ಶಾಸಕರು ಮಾಡುವ ಭರವಸೆ ನೀಡಿದ್ದಾರೆ. ಅದು ಯಾವಾಗ ಆಗುತ್ತೋ ದೇವರೇ ಬಲ್ಲ ಎನ್ನುವುದು ತಾಂಡಾ ಜನರ ಒಡಲ ಸಂಕಟ.

ರಸ್ತೆ ಮಾಡಿಕೊಡುವಂತೆ ವಿದ್ದಾರ್ಥಿಗಳ ಬೇಡಿಕೆ:
“ನಾವು ಮೂರು ಕಿ.ಮೀ. ದೂರದ ವಡಗಾಂವ ಗ್ರಾಮದ ಶಾಲೆಗೆ ಹೋಗುತ್ತೇವೆ. ಆದರೆ ತಾಂಡಾದಿಂದ ಮುಖ್ಯರಸ್ತೆವರೆಗೆ 1 ಕಿ.ಮೀ. ರಸ್ತೆಯೇ ಇಲ್ಲ. ಮಳೆಗಾಲದಲ್ಲಿ ಶಾಲೆಗೆ ಹೋಗುವುದು ತುಂಬಾ ತೊಂದರೆಯಾಗುತ್ತದೆ. ಅಧಿಕ ಮಳೆಯಾದರೆ ಅಂದು ಶಾಲೆಗೆ ಹೋಗುವುದಿಲ್ಲ. ಈ ಕೆಸರು ಗದ್ದೆಯಲ್ಲೇ ಕೈ ಚಪ್ಪಲಿ ಹಿಡಿದುಕೊಂಡು ತೆರಳಬೇಕಾದ ಪರಿಸ್ಥಿತಿಯಿದೆ. ದಯವಿಟ್ಟು ನಮ್ಗೆ ರಸ್ತೆ ಮಾಡಿಕೊಡಿ” ಎಂದು ವಿದ್ಯಾರ್ಥಿಗಳು ಈದಿನ.ಕಾಮ್ ದೊಂದಿದೆ ಮಾತನಾಡಿ ಅವಲತ್ತುಕೊಂಡಿದ್ದಾರೆ.
ಈದಿನ.ಕಾಮ್ ದೊಂದಿಗೆ ಮಾತನಾಡಿದ ತಾಂಡಾ ನಿವಾಸಿ ಬಾಬುರಾವ್ , ” ಈ ಹಿಂದೆ ರಸ್ತೆ ಎಂಬುದೇ ಇರಲಿಲ್ಲ. ಕಂದಾಯ ಸಚಿವ ಆರ್. ಅಶೋಕ ಅವರು ವಡಗಾಂವ ಗ್ರಾಮದಲ್ಲಿ ವಾಸ್ತವ್ಯ ಕಾರ್ಯಕ್ರಮದ ನಂತರ ಫಾರ್ಮೇಶನ್ ರಸ್ತೆಯಾಗಿದೆ. ಚುನಾವಣೆ ವೇಳೆ ಶಾಸಕ ಪ್ರಭು ಚವ್ಹಾಣರವರು ತಾಂಡಾಕ್ಕೆ ಬಂದಿದ್ದರು. ಆದರೆ ರಸ್ತೆಗೆ ಜಾಗದ ತಕರಾರು ಹಿನ್ನಲೆಯಿಂದ ಹಾಗೇ ಉಳಿದಿದೆ. ಹೇಗಾದರೂ ಮಾಡಿ ನಮ್ಮ ತಾಂಡಾ ನಿವಾಸಿಗಳಿಗೆ ಸುಗಮವಾದ ರಸ್ತೆ ಸಂಪರ್ಕ ಕಲ್ಪಿಸಿಕೊಡುವಂತೆ” ಆಗ್ರಹಿಸಿದರು.
ಈ ಕುರಿತು ಔರಾದ ತಾಲೂಕು ಪಂಚಾಯತ್ ಇ.ಒ. ಬಿರೇಂದ್ರ ಸಿಂಗ್ ಈದಿನ.ಕಾಮ್ ದೊಂದಿಗೆ ಮಾತನಾಡಿ, ” ಈ ಬಗ್ಗೆ ನನ್ನ ಗಮನಕ್ಕೆ ಬಂದಿದೆ, ಅದು ಹೆಚ್ಚು ಅನುದಾನದ ರಸ್ತೆಯಿದೆ. ನಮ್ಮಲ್ಲಿ ಮನರೇಗಾದಲ್ಲಿ ಮಾತ್ರ ಮಾಡಬಹುದು. ಹೆಚ್ಚಿನ ಅನುದಾನದ ರಸ್ತೆ ಶಾಸಕರ ಅನುದಾನದಲ್ಲಿ ಮಾಡಬಹುದು. ಈ ಬಗ್ಗೆ ಶಾಸಕರಿಗೆ, ಮೇಲಾಧಿಕಾರಿಗಳ ಗಮನಕ್ಕೆ ತರುವೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಜೋಳಿಗೆ ಹಿಡಿದು ದುಶ್ಚಟ ಭಿಕ್ಷೆ ಬೇಡಿದ ಭಾಲ್ಕಿ ಹಿರೇಮಠದ ಗುರುಬಸವ ಪಟ್ಟದ್ದೇವರು
ಈ ಬಗ್ಗೆ ಮಾಜಿ ಸಚಿವ, ಶಾಸಕ ಪ್ರಭು ಚವ್ಹಾಣ ಹಾಗೂ ಜಿಲ್ಲಾ ಪಂಚಾಯತ್ .ಸಿ.ಇ.ಒ. ಅವರಿಗೆ ಈದಿನ.ಕಾಮ್ ಸಂಪರ್ಕಿಸಿದರೆ ಪ್ರತಿಕ್ರಿಯೆ ಸಿಗಲಿಲ್ಲ.
Thanks lots sir