ಹಟ್ಟಿ ಚಿನ್ನದ ಗಣಿ ಕಾರ್ಮಿಕರ ಹಲವು ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ (ಸಿಐಟಿಯು) ರಾಯಚೂರು ಜಿಲ್ಲೆ ಲಿಂಗಸೂಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿ ಘಟಕದಿಂದ ಕಂಪನಿಯ ಪ್ರಧಾನ ವ್ಯವಸ್ಥಾಪಕ (ಸಮನ್ವಯ) ಹನುಮಂತಪ್ಪ ಅವರಿಗೆ ಮನವಿ ಸಲ್ಲಿಸಿದರು.
ಸಿಐಟಿಯುನ ಹಟ್ಟಿ ಘಟಕದ ಪ್ರಮುಖ ಕಾರ್ಯಕರ್ತರು ಹಟ್ಟಿ ಚಿನ್ನದ ಗಣಿಯ ಕಾರ್ಯಾಲಯದಲ್ಲಿ ಮನವಿ ಸಲ್ಲಿಸಿ ಮಾತನಾಡಿ, “ಕಾರ್ಮಿಕರ ವೇತನ ಒಪ್ಪಂದ ಪ್ರಾರಂಭಗೊಂಡು ಹಲವು ತಿಂಗಳು ಕಳೆದರೂ ಇನ್ನೂ ವೇತನ ಒಪ್ಪಂದದ ವಿಚಾರವೇ ಇಲ್ಲ. ಕಾರ್ಮಿಕರು ಪ್ರಕೃತಿಯ ವಿರುದ್ಧ ಕಾರ್ಯನಿರ್ವಹಿಸುವ ಕಾರ್ಮಿಕರು ವಯಸ್ಸಾಗುತ್ತಿದ್ದಂತೆ ಹಲವಾರು ರೋಗಗಳಿಗೆ ಒಳಗಾಗುತ್ತಾರೆ. ಬಿಪಿ, ಶುಗರ್, ಪ್ಯಾರಲಿಸಿಸ್, ಹೃದಯ ಸಂಬಂಧಿತ ರೋಗಗಳು ಸೇರಿದಂತೆ ಮುಂತಾದ ರೋಗಗಳು ಕಾರ್ಮಿಕರನ್ನು ಕಾಡುತ್ತವೆ. ಇಂತಹ ಕಾರ್ಮಿಕರಿಗೆ ಅನುಕಂಪದ ಆಧಾರದಲ್ಲಿ ವೈದ್ಯಕೀಯ ತಪಾಸಣೆಗೊಳಪಡಿಸಿ ಅನರ್ಹಗೊಂಡ ಕಾರ್ಮಿಕರಿಗೆ ಅವರ ಕುಟುಂಬದ ಒಬ್ಬ ಸದಸ್ಯರಿಗೆ ಕೆಲಸಕ್ಕೆ ನೇಮಕ ಮಾಡಿಕೊಳ್ಳಬೇಕು” ಎಂದು ಸಿಐಟಿಯು ಆಗ್ರಹಿಸಿದೆ.
“ಸುಮಾರು ಒಂಬತ್ತು ವರ್ಷಗಳಿಂದ ಅನುಕಂಪದ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಗಣಿ ಕಂಪನಿ ನೌಕರರಿಗೆ ವಿದ್ಯಾರ್ಹತೆ ಮೇಲೆ ಅರ್ಹತೆಗೆ ತಕ್ಕಂತೆ ದರ್ಜೆ ನೀಡಬೇಕು. ವಿದ್ಯಾಭ್ಯಾಸ ಹೊಂದಿದ ಕಾರ್ಮಿಕರುಗಳಾದ ಡಿಪ್ಲೊಮಾ, ಬಿಇ ಮೈನಿಂಗ್, ಮೆಕಾನಿಕಲ್, ಎಲೆಕ್ಟ್ರಾನಿಕ್ಸ್, ಎಲೆಕ್ಟಿಕಲ್, ಐಟಿಐ ಇತರ ಕೋರ್ಸ್‌ಗಳನ್ನು ಹೊಂದಿದ ಕಾರ್ಮಿಕರು ಜಿ-12 ದರ್ಜೆಯಲ್ಲಿಯೇ ಸಾಮಾನ್ಯ ಕೆಲಸಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಾಗಾಗಿ ಶೀಘ್ರದಲ್ಲಿಯೇ ಡಿಪಿಸಿ ಸಭೆ ನಡೆಸಿ ಮುಂಬಡ್ತಿ ನೀಡಬೇಕು” ಎಂದು ಆಗ್ರಹಿಸಿದರು.
“2020-21, 2021-22ನೇ ಸಾಲಿನ ಎರಡು ವರ್ಷದ ಉತ್ಪಾದನಾ ಪ್ರೋತ್ಸಾಹ ಧನ ಪಿಎಲ್‌ಐಬಿ ಕೊಟ್ಟಿರುವುದಿಲ್ಲ. ಪ್ರತಿ ತಿಂಗಳು ಬರುವ ವೇತನ ತನ್ನ ವೈಯಕ್ತಿಕ ಸಾಲಗಳಿಗೆ, ಮನೆ ನಿರ್ವಾಹಣೆ ಸರಿದೂಗಲು ಸಾಕಾಗುವುದಿಲ್ಲ. ಆಸ್ಪತ್ರೆಯಲ್ಲಿ ಔಷಧಗಳ ಕೊರತೆ ಎದ್ದು ಕಾಣುತ್ತಿದೆ. ವೈದ್ಯರು ರೋಗಿಗಳಿಗೆ ಸರಿಯಾಗಿ ತಪಾಸಣೆ ಮಾಡುತ್ತಿದ್ದಾರೆ. ಆದರೆ ತಕ್ಕ ಔಷಧಗಳು ದೊರೆಯುತ್ತಿಲ್ಲ. ಒಂದು ಔಷಧಿ ಸಿಕ್ಕರೆ ಇನ್ನೊಂದು ಔಷಧವನ್ನು ಖಾಸಗಿ ಔಷಧ ಅಂಗಡಿಯಲ್ಲಿ ಕೊಳ್ಳಬೇಕು. ಯಾವ ರೋಗಿಯೂ ಹೊರಗಡೆ ಔಷಧಿ ಪಡೆಯದಂತೆ ಆಸ್ಪತ್ರೆಯಲ್ಲಿಯೇ ಎಲ್ಲ ಔಷಧಗಳು ದೊರೆಯಬೇಕು. ಆಸ್ಪತ್ರೆಯಲ್ಲಿ ರೋಗಿಗಳಬ್ಬು ಮಲಗಿಸಿ ಅಥವಾ ಕೂರಿಸಿ ಕರೆದೊಯ್ಯಲು ಗಾಲಿಕುರ್ಚಿ(ವೀಲ್ ಚೇರ್, ವೀಲ್ ಸ್ಟ್ರೆಚರ್), ಕುಡಿಯುವ ನೀರು, ರಸ್ತೆ ಸೇರಿದಂತೆ ಹಲವು ಮೂಲ ಸೌಕರ್ಯಗಳನ್ನು ಒದಗಿಸಬೇಕು. ಈಗಿರುವ ಇಸಿಜಿ ತಂತ್ರಜ್ಞಾನ ಅತ್ಯಂತ ಹಳೆಯದಾಗಿದ್ದು, ಹೊಸದನ್ನು ಖರೀದಿಸಬೇಕು. ಅದನ್ನು ಬಳಸಲು ಸರಿಯಾದ ಸಿಬ್ಬಂದಿಯನ್ನು ನೇಮಕಮಾಡಬೇಕು” ಎಂದು ಒತ್ತಾಯಿಸಿದರು.
“ನಮ್ಮ ಕಂಪನಿಯ ಹಲವಾರು ವಿಭಾಗಗಳನ್ನು ಹೊರಗುತ್ತಿಗೆ ನೀಡಲಾಗುತ್ತಿದೆ. ಈಗಾಗಲೇ ಹೊರ ಗುತ್ತಿಗೆ ಪಡೆದ ಸಿಐಎಸ್‌ಬಿ ಕಂಪೆನಿಯವರು 10 ಕೋಟಿ ರೂಪಾಯಿವರೆಗೆ ಗುತ್ತಿಗೆ ಪಡೆದು ಸಿಐಎಸ್‌ಬಿ ಯಾವುದೇ ರೀತಿಯ ಕೆಲಸಗಳನ್ನು ಸರಿಯಾಗಿ ಮಾಡಿಲ್ಲ. ಪರಿಣಾಮ ಕಂಪನಿಗೆ ನಷ್ಟವಾಗಿದೆ. ಹೊರಗುತ್ತಿಗೆ ನೀಡದೆ ಕಂಪನಿಯಿಂದಲೇ ನೇರವಾಗಿ ನಮ್ಮ ಕಂಪನಿ ಗುತ್ತಿಗೆ ಕಾರ್ಮಿಕರನ್ನು ತೆಗೆದುಕೊಂಡು ಕಂಪನಿಗೆ ಯಾವ ಭಾಗದಲ್ಲಿ ಕಾರ್ಮಿಕರ ಅವಶ್ಯಕತೆ ಇದೆಯೋ ಆ ಭಾಗಕ್ಕೆ ನೇಮಕ ಮಾಡಿಕೊಳ್ಳಬೇಕು. ಇದರಿಂದ ಈ ಭಾಗದ ರೈತರು, ಕೂಲಿ ಕಾರ್ಮಿಕರ ಮಕ್ಕಳಿಗೆ ನಿರುದ್ಯೋಗದ ಸಮಸ್ಯೆಗೆ ಪರಿಹಾರ ನೀಡಿದಂತಾಗುತ್ತದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
“ಆಹಾರ ಪೊಟ್ಟಣ ನೀಡುವಾಗ ಅದರಲ್ಲಿ ಅಕ್ಕಿ, ಬೇಳೆ, ಸಕ್ಕರೆ, ಎಣ್ಣೆ ಇವುಗಳ ಗುಣಮಟ್ಟ ಕಾಪಾಡಬೇಕು. ಕಾರ್ಮಿಕರು ವಾಸಿಸುವ ವಸತಿ ಪ್ರದೇಶದ ರಸ್ತೆಗಳು ಗುಂಡಿಗಳಿಂದ ಕೂಡಿದ್ದು, ಸಂಚಾರಕ್ಕೆ ತೊಂದರೆಯಾಗುತ್ತಿದೆ. ಚರಂಡಿ ವ್ಯವಸ್ಥೆ ಇಲ್ಲ. ಇದರಿಂದ ವಸತಿ ಪ್ರದೇಶಗಳು ದುರಂತದಿಂದ ಕೂಡಿವೆ. ಆಡಳಿತ, ಕಾರ್ಮಿಕರನ್ನು ಮನುಷ್ಯರೆಂದು ಭಾವಿಸಿದಿಯೋ ಇಲ್ಲವೋ ತಿಳಿಯದು. ಇಂತಹ ವಾತಾವರಣದಲ್ಲಿ ಕಾರ್ಮಿಕರು ಮತ್ತು ಅವರ ಕುಟುಂಬ ಜೀವಿಸುವುದಾದರೂ ಹೇಗೆ?. ಇತ್ತೀಚೆಗೆ ಕೆಲ ಕಡೆಗಳಲ್ಲಿ ನಡೆಯುತ್ತಿರುವ ಕಾಮಗಾರಿಗಳು ಸಂಪೂರ್ಣವಾಗಿ ಕಳಪೆ ಮಟ್ಟದ್ದಾಗಿದ್ದು, ಅಧಿಕಾರಿಗಳು ಈ ಬಗ್ಗೆ ತುಟಿ ಬಿಚ್ಚುತ್ತಿಲ್ಲ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ಹುಬ್ಬಳ್ಳಿ | ಭಾರತ್ ಜೋಡೊ ದೇಶ ರಕ್ಷಣೆಯ ಒಂದು ಪ್ರಯತ್ನ: ಗಂಗಾಧರ ದೊಡವಾಡ
ಈ ಸಂದರ್ಭದಲ್ಲಿ ಸಿಐಟಿಯು ಗೌರವಾಧ್ಯಕ್ಷ ಅಮರೇಶ ಗುರಿಕಾರ, ಅಧ್ಯಕ್ಷ ಅಸನತ್ ಅಲಿ ಜಮೆದಾರ್, ಕಾರ್ಯದರ್ಶಿ ಬಾಬು ಸಾಗರ್, ಜಿಲ್ಲಾ ಸಹ ಕಾರ್ಯದರ್ಶಿ ಮಹ್ಮದ್ ಹನೀಫ್, ಎಸ್ಎಫ್ಐ ಜಿಲ್ಲಾಧ್ಯಕ್ಷ ರಮೇಶ ವೀರಾಪೂರು, ಮುಖಂಡರುಗಳಾದ ಫಕ್ರುದ್ದೀನ್, ಅಲ್ಲಾಭಕ್ಷ ಗಿರಿಣಿ, ಭೀಮಣ್ಣ ಉಪ್ಪೇರಿ, ದಾವೂದ್, ಮೇಘನಾಥ್, ಮಲ್ಲಿಕಾರ್ಜುನ್, ದೇವು, ಆದಪ್ಪ ಕೋಟಾ, ಯಮನಪ್ಪ ಸೇರಿದಂತೆ ಗಣಿಯ ಕಾರ್ಮಿಕರು ಇದ್ದರು.