ವಿಶ್ವದ 20 ರಾಷ್ಟ್ರಗಳ ಗುಂಪಾದ ಜಿ20ಗೆ ಈ ವರ್ಷ ಭಾರತ ಆತಿಥ್ಯ ವಹಿಸುತ್ತಿದೆ. ಎರಡು ದಿನಗಳ ಜಿ20 ಶೃಂಗಸಭೆ ಇಂದು ದೆಹಲಿಯಲ್ಲಿ ಪ್ರಾರಂಭವಾಗಿದೆ.
ದೇಶದ ಹೆಸರು ಬದಲಾವಣೆಯ ಸುದ್ದಿ ಚರ್ಚೆಯ ಮಧ್ಯೆಯೇ ಪ್ರಧಾನಿ ನರೇಂದ್ರ ಮೋದಿಯವರು ಕುಳಿತ ಸ್ಥಳದಲ್ಲಿ ‘ಇಂಡಿಯಾ’ ಬದಲಿಗೆ ‘ಭಾರತ್’ ಹೆಸರು ನಾಮಫಲಕದಲ್ಲಿ ಪ್ರತ್ಯಕ್ಷಗೊಂಡಿದೆ. ಶೃಂಗಸಭೆಯಲ್ಲಿ ಪ್ರಧಾನಿ ಮೋದಿಯವರು ‘ಭಾರತ್’ ಅನ್ನು ಪ್ರತಿನಿಧಿಸುವ ನಾಯಕ ಎಂದು ಗುರುತಿಸಲಾಯಿತು.
ಸಭೆಯಲ್ಲಿ ಭಾಷಣ ಆರಂಭಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಎಲ್ಲ ನಾಯಕರನ್ನು ಸ್ವಾಗತಿಸಿದ ನಂತರ ಮೊರೋಕ್ಕೋದಲ್ಲಿ ಇಂದು ಸಂಭವಿಸಿದ ಭೂಕಂಪದಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಿದರು.
ಆ ಬಳಿಕ ಜಿ20 ಒಕ್ಕೂಟಕ್ಕೆ ಆಫ್ರಿಕನ್ ಒಕ್ಕೂಟ ಸೇರ್ಪಡೆ ಬಗ್ಗೆ ಘೋಷಣೆ ಮಾಡಿದರು. ಆ ಮೂಲಕ ಜಿ20 ಒಕ್ಕೂಟದ 21ನೇ ದೇಶವಾಗಿ ಆಫ್ರಿಕನ್ ಒಕ್ಕೂಟ ಸೇರ್ಪಡೆಯಾದಂತಾಗಿದೆ.
‘ಸಬ್ ಕಾ ಸಾತ್, ಸಬ್ ಕಾ ವಿಕಾಸ್’ ಮಂತ್ರವನ್ನು ಪಠಿಸಬೇಕಿದೆ ಎಂದ ಪ್ರಧಾನಿ ಮೋದಿ, ಭಯೋತ್ಪಾದನೆ, ಸೈಬರ್ ದಾಳಿ ಭೀತಿ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚಿಂತಿಸಬೇಕಿದೆ ಎಂದು ಹೇಳಿದರು.
ಸೆಪ್ಟೆಂಬರ್ 9 ಮತ್ತು 10ರಂದು ಎರಡು ದಿನಗಳ ಕಾಲ ಜಿ20 ಒಕ್ಕೂಟದ ಸಭೆಯು ನಡೆಯಲಿದೆ.