ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಬಲೀಕರಣಕ್ಕಾಗಿ ಮೀಸಲಾಗಿರುವ ವಿಶೇಷ ಘಟಕ ಯೋಜನೆ(ಎಸ್ಸಿಪಿ) ಮತ್ತು ಬುಡಕಟ್ಟು ಉಪ ಯೋಜನೆ (ಟಿಎಸ್ಪಿ) ಅನುದಾನವನ್ನು ಪ್ರಸ್ತು ಹಣಕಾಸು ವರ್ಷದ ಅಂತ್ಯದ ವೇಳೆಗೆ ಸಂಪೂರ್ಣವಾಗಿ ಬಳಸಿಕೊಳ್ಳುವಂತೆ ಮೈಸೂರು ಜಿಲ್ಲಾಧಿಕಾರಿ ಕೆ ವಿ ರಾಜೇಂದ್ರ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಮೈಸೂರಿನಲ್ಲಿ ನಡೆದ ಎಸ್ಸಿಪಿ/ ಟಿಎಸ್ಪಿ ಅನುದಾನದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಫಲಾನುಭವಿಗಳಿಗೆ ಸವಲತ್ತುಗಳನ್ನು ವಿಸ್ತರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
“ಸರ್ಕಾರದಿಂದ ಅನುದಾನ ಬಿಡುಗಡೆ ಆಗುವವರೆಗೂ ಕಾಯಬಾರದು. ಫಲಾನುಭವಿಗಳ ಪಟ್ಟಿಯನ್ನು ಸಿದ್ಧವಾಗಿಟ್ಟುಕೊಂಡಿರಬೇಕು. ಅನುದಾನ ಬಿಡುಗಡೆಯಾದ ಕೂಡಲೇ ಸೌಲಭ್ಯ ಕಲ್ಪಿಸಲು ಅನುಕೂಲವಾಗುತ್ತದೆ. ಇದರಿಂದ ಅನುದಾನ ವ್ಯರ್ಥವಾಗುವುದನ್ನೂ ತಡೆಯಬಹುದು” ಎಂದು ತಿಳಿಸಿದರು.
“ಹಣಕಾಸು ಇಲಾಖೆ ಅನುದಾನ ಬಿಡುಗಡೆ ಮಾಡಿದ ಬಳಿಕ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸುವ ಪ್ರಕ್ರಿಯೆಯನ್ನು ಅಧಿಕಾರಿಗಳು ಪ್ರಾರಂಭಿಸಬೇಕು. ಸರ್ಕಾರಿ ವಸತಿ ನಿಲಯಗಳ ನಿರ್ಮಾಣಕ್ಕೆ ಸರ್ಕಾರಕ್ಕೆ ಭೂಮಿ ಬೇಕಾಗಿರುವುದರಿಂದ ತಮ್ಮ ವ್ಯಾಪ್ತಿಯಲ್ಲಿ ಭೂಮಿಯನ್ನು ಗುರುತಿಸಿ ಸಾರ್ವಜನಿಕ ಬಳಕೆಗೆ ಕಾಯ್ದಿರಿಸಿ, ಅದರ ಪಟ್ಟಿಯನ್ನು ತನಗೆ ಸಲ್ಲಿಸಬೇಕು” ಎಂದರು.
“ಭೂರಹಿತ ಎಸ್ಸಿ/ಎಸ್ಟಿ ಕುಟುಂಬಗಳನ್ನು ಗುರುತಿಸಿ ಅವರಿಗೆ ಹಲವು ಯೋಜನೆಗಳಡಿ ಭೂಮಿ ವಿತರಿಸಬೇಕು” ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಕೊಡಗು | ಜೇನು ಕೃಷಿಕರ ಸಂಘದ ಚುನಾವಣೆ; ಮತದಾನ ವಂಚಿತರಿಗೆ ಮತದಾನಕ್ಕೆ ಅವಕಾಶ
“ಬುಡಕಟ್ಟು ಕುಗ್ರಾಮಗಳಲ್ಲಿ ನಿಯಮಿತ ಶಿಬಿರಗಳನ್ನು ನಡೆಸಬೇಕು. ಬುಡಕಟ್ಟು ಜನರಿಗೆ ಸರ್ಕಾರದಿಂದ ಪಡಿತರ ಚೀಟಿಗಳು, ಆಧಾರ್, ಜಾಬ್ ಕಾರ್ಡ್ಗಳು ಮತ್ತು ಇತರ ಸೌಲಭ್ಯಗಳನ್ನು ಪಡೆಯಲು ಸಹಾಯ ಮಾಡಬೇಕು” ಎಂದು ಬುಡಕಟ್ಟು ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಕೆ ಎಂ ಗಾಯತ್ರಿ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ರಂಗೇಗೌಡ ಇದ್ದರು.