ಠಾಣೆಗೆ ದೂರು ನೀಡಲು ಹೋದ ವಕೀಲರನ್ನೇ ಪೊಲೀಸರು ಸೆಲ್ ಒಳಗೆ ಹಾಕಿ ದೌರ್ಜನ್ಯ ಎಸಗಿದ ಘಟನೆ ಬೆಂಗಳೂರಿನ ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಬೆಂಗಳೂರು ನಗರ ಜಿಲ್ಲೆಯ ಯಲಹಂಕ ತಾಲೂಕಿನ ಶ್ಯಾನುಬೋಗನಹಳ್ಳಿಯಲ್ಲಿರುವ ಸರ್ಕಾರಿ ಜಮೀನು ವಿಚಾರವಾಗಿ ವಕೀಲರು ದೂರು ನೀಡಲು ರಾಜಾನುಕುಂಟೆ ಪೊಲೀಸ್ ಠಾಣೆಗೆ ತೆರಳಿದ್ದರು. ಈ ವೇಳೆ, ಪೊಲೀಸರು ವಕೀಲರ ಮೇಲೆ ದೌರ್ಜನ್ಯ ಎಸಗಿರುವ ಆರೋಪ ಕೇಳಿಬಂದಿದೆ.
ಶ್ಯಾನಬೋಗನಹಳ್ಳಿಯ ಸರ್ಕಾರಿ ಜಮೀನನ್ನು ನಕಲಿ ದಾಖಲೆ ಸೃಷ್ಟಿ ಮಾಡಿ ಜಮೀನು ಕಬಳಿಕೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ವಿಚಾರವಾಗಿ ಎರಡು ಗುಂಪಿನ ನಡುವೆ ಪಂಚಾಯತ್ನಲ್ಲಿ ಜಗಳ ನಡೆದಿದೆ.
ಬಳಿಕ, ವಕೀಲ ಚಂದ್ರಶೇಖರ ಮತ್ತು ಸಹೋದರ ರಾಜನುಕುಂಟೆ ಪೊಲೀಸ್ ಠಾಣೆಗೆ ದೂರು ನೀಡಲು ತೆರಳಿದ್ದರು. ದೂರು ಸ್ವೀಕರಿಸಿದ ಪೊಲೀಸರು ಎರಡು ಕಡೆಯವರನ್ನು ವಿಚಾರಣೆ ಮಾಡುತ್ತಿದ್ದರು.
ವಿಚಾರಣೆ ನಡೆಸುವ ವೇಳೆ, ಎದುರುದಾರರ ಮುಂದೆ ವಕೀಲ ಚಂದ್ರಶೇಖರ್ ಅವರನ್ನು ಸೆಲ್ ಒಳಗಡೆ ಹಾಕಿ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಘಟನೆ ಗುರುವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಪೊಲೀಸರ ದೌರ್ಜನ್ಯದ ವಿರುದ್ಧ ಹಿರಿಯ ಅಧಿಕಾರಿಗಳಿಗೆ ವಕೀಲ ಚಂದ್ರಶೇಖರ್ ದೂರು ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ರೋಗ ಕಣ್ಗಾವಲು ಡ್ಯಾಶ್‌ಬೋರ್ಡ್ ಮತ್ತು ಮೊಬೈಲ್ ಅಪ್ಲಿಕೇಶನ್ ಅನಾವರಣ
“ಪೊಲೀಸ್ ಠಾಣೆಯಲ್ಲಿ ನೊಂದವರಿಗೆ ನ್ಯಾಯ ಸಿಗುತ್ತಿಲ್ಲ. ಈ ಘಟನೆ ಸಂಬಂಧ ಠಾಣೆಯ ಸಿಬ್ಬಂದಿ ಕಿರಣ್ ಮತ್ತು ಮೋಹನ್ ಎಂಬವರನ್ನು ಎಸ್ಪಿ ಅಮಾನತ್ತು ಮಾಡಿದ್ದಾರೆ. ಅವರು ಅಮಾಯಕ ಸಿಬ್ಬಂದಿಯನ್ನು ಅಮಾನತ್ತು ಮಾಡಿದ್ದಾರೆ. ದೌರ್ಜನ್ಯ ಎಸಗಿದ ಇನ್ಸ್ಪೆಕ್ಟರ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ದೂರುದಾರ ಚಂದ್ರಶೇಖರ್ ಒತ್ತಾಯಿಸಿದ್ದಾರೆ.