ಈ ದಿನ ಸಂಪಾದಕೀಯ | ಅಸಮಾಧಾನದ ಕಿಡಿ ಜ್ವಾಲೆಯಾಗಿ ಸರ್ಕಾರವನ್ನು ಸುಡದಿರಲಿ

Date:

Advertisements
ದಕ್ಷಿಣ ಭಾರತದಲ್ಲಿ ಕಾಂಗ್ರೆಸ್‌ ಪಕ್ಷ ಏನಾದರೂ ಉಸಿರಾಡುತ್ತಿದ್ದರೆ, ಅದು ಕರ್ನಾಟಕದಲ್ಲಿ ಮಾತ್ರ. ಸಿಗದೆ ಸಿಗದೇ ಸಿಕ್ಕಿರುವ ಈ ಅಪೂರ್ವ ಅವಕಾಶವನ್ನು ಕಾಂಗ್ರೆಸ್ಸಿಗರು ಅರ್ಥ ಮಾಡಿಕೊಳ್ಳದೆ ಅಧಿಕಾರಕ್ಕಾಗಿ ಕಿತ್ತಾಡಿಕೊಂಡರೆ, ಸ್ಥಿರ ಸರ್ಕಾರ ನೀಡಲು ಅಶಕ್ತರಾದರೆ, ಅವರಿಗಿಂತ ಮೂರ್ಖರು ಮತ್ತೊಬ್ಬರಿಲ್ಲ

ʼಹ್ಯೂಬ್ಲೋ ವಾಚ್‌ ಕಟ್ಟಿಕೊಂಡು, ಪಂಚೆ ಉಟ್ಟುಕೊಂಡು ಒಳಗೆ ಖಾಕಿ ಚಡ್ಡಿ ಧರಿಸುವುದು ಸಮಾಜವಾದವಲ್ಲ; ದೇವರಾಜ ಅರಸು ಕಾರಲ್ಲಿ ಕೂತ ಮಾತ್ರಕ್ಕೆ ಅರಸು ಆಗಲ್ಲʼ ಎಂದು ಕಾಂಗ್ರೆಸ್ಸಿನ ಹಿರಿಯ ನಾಯಕ, ವಿಧಾನ ಪರಿಷತ್‌ ಸದಸ್ಯ ಬಿ.ಕೆ ಹರಿಪ್ರಸಾದ್‌, ಪರೋಕ್ಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಟೀಕಿಸಿದ್ದಾರೆ.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಶನಿವಾರ ಸಮಾನ ಮನಸ್ಕರ ಸಭೆ ಹೆಸರಲ್ಲಿ ಈಡಿಗ, ಬಿಲ್ಲವ, ನಾಮಧಾರಿ, ದೀವ ಸಮುದಾಯದ ಶ್ರೀಗಳು, ನಾಯಕರನ್ನು ಒಗ್ಗೂಡಿಸಿ ಹರಿಪ್ರಸಾದ್‌ ಸಭೆ ನಡೆಸಿದ್ದಾರೆ. ಸಮಾನ ಮನಸ್ಕರ ಸಭೆ ಹೆಸರಲ್ಲಿ ಶಕ್ತಿ ಪ್ರದರ್ಶಿಸಿ ಬಾಂಬ್‌ ಸಿಡಿಸಿದ್ದಾರೆ. ಸಮಾಜವಾದ, ಹಿಂದುಳಿದವರಿಗೆ ಆದ ಅನ್ಯಾಯ ಹೇಳುತ್ತಲೇ ನನ್ನನ್ನು ಕಡೆಗಣಿಸಿದರೆ ಸುಮ್ಮನಿರಲ್ಲ ಅನ್ನುವ ಸಂದೇಶ ರವಾನಿಸಿದ್ದಾರೆ.

ಬಿ.ಕೆ ಹರಿಪ್ರಸಾದರ ವಿವಾದಾತ್ಮಕ ಹೇಳಿಕೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ʼಅವರು ನನ್ನ ಹೆಸರು ಹೇಳಿದ್ದಾರ, ಇಲ್ಲ, ಅಂದಮೇಲೆ ನಾನು ಪ್ರತಿಕ್ರಿಯಿಸುವುದಿಲ್ಲʼ ಎಂದು ನಿರ್ಲಕ್ಷಿಸಿದ್ದಾರೆ. ಸುದ್ದಿ ಮಾಧ್ಯಮಗಳ ಮುಂದೆ ಮುಖ್ಯಮಂತ್ರಿಗಳ ವರ್ತನೆ ಸರಿ ಇರಬಹುದು. ಆ ಕ್ಷಣಕ್ಕೆ ಅವರನ್ನು ಸುಮ್ಮನಾಗಿಸಬಹುದು. ಆದರೆ ಕಾಂಗ್ರೆಸ್ ಪಕ್ಷದೊಳಗೆ ಪುಟಿದೇಳುವ ಪ್ರಹಸನಗಳನ್ನು ಪರಿಹರಿಸುವುದು ಹೇಗೆ?

Advertisements

ಆಡಳಿತಕ್ಕೆ ಬಂದು ನಲವತ್ತು ದಿನಕ್ಕೆ ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕ ಬಿ.ಆರ್‌ ಪಾಟೀಲ್‌, ಸಂಪರ್ಕಕ್ಕೆ ಸಿಗದ ಸಚಿವರ ಕುರಿತು ಅಸಮಾಧಾನ ವ್ಯಕ್ತಪಡಿಸಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರು. ಅದಾದ ನಂತರ ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ, ನೀವೇ ಖುದ್ದಾಗಿ ಬಂದು ಸಭೆ ನಡೆಸಬೇಕು ಎಂದು ಶಾಸಕ ರಾಯರೆಡ್ಡಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಕೊಂಕು ಮಾತುಗಳಿಂದ ಕುಟುಕಿದರು. ಇವು ಪ್ರೇಮ ಪತ್ರವಲ್ಲ, ಅಸಹಾಯಕತೆ ಹಾಗೂ ಆಕ್ರೋಶ ಹೊರಹಾಕುವ ಪತ್ರಗಳು, ಸರ್ಕಾರ ಸರಿ ದಾರಿಯಲ್ಲಿ ಸಾಗುತ್ತಿಲ್ಲ ಎಂದು ಸೂಚಿಸುವ ಸಂಕೇತಗಳು.

ಈಗ ಹರಿಪ್ರಸಾದ್‌ ಸಮಾನಮನಸ್ಕರ ಸಭೆಯ ನೆಪದಲ್ಲಿ ಶಕ್ತಿ ಪ್ರದರ್ಶನಕ್ಕಿಳಿದಿದ್ದಾರೆ. ಇದು ಸತ್ತಂತಿರುವ ವಿರೋಧ ಪಕ್ಷಗಳಿಗೆ ಜೀವ ಬಂದಂತಾಗಿದೆ. ಸಿ.ಟಿ ರವಿ ಬಾಯಲ್ಲಿ ಭೂಕಂಪ ಆಗಿದೆ. ಗೋಧಿ ಮೀಡಿಯಾಗಳಿಗೆ ಸಾಮಗ್ರಿ ಸಿಕ್ಕಿದೆ. ನಾಡಿನ ಜನತೆಗೆ ನಕಾರಾತ್ಮಕ ಸಂದೇಶ ರವಾನಿಸುತ್ತದೆ. ಕಡ್ಡಿ ಗುಡ್ಡವಾಗಿ ಮುಂದೊಂದು ದಿನ ಸರ್ಕಾರಕ್ಕೆ ಸಂಚಕಾರ ತರುತ್ತದೆ. ಇದನ್ನು ಹಿರಿಯ, ಅನುಭವಿ ರಾಜಕಾರಣಿ ಸಿದ್ದರಾಮಯ್ಯನವರು ಅರಿಯದಿದ್ದರೆ ಅಪಾಯವಿದೆ.

69ರ ಹರೆಯದ ಬಿ.ಕೆ ಹರಿಪ್ರಸಾದ್‌, ಪಕ್ಷ ನಿಷ್ಠರು. ಕಳೆದ ನಾಲ್ಕು ದಶಕಗಳಿಂದ ಪಕ್ಷಕ್ಕಾಗಿ ದುಡಿದವರು. ಪಕ್ಷ ಕೂಡ ಅವರಿಗೆ ನಾಲ್ಕು ಬಾರಿ ರಾಜ್ಯಸಭಾ ಸದಸ್ಯರನ್ನಾಗಿಸಿದೆ, ಎಐಸಿಸಿಯಲ್ಲಿ ಸ್ಥಾನಮಾನ ನೀಡಿದೆ, ಹಲವು ರಾಜ್ಯಗಳ ಉಸ್ತುವಾರಿ ವಹಿಸಿ ಗೌರವಿಸಿದೆ. ಸದ್ಯ ವಿಧಾನ ಪರಿಷತ್‌ ಸದಸ್ಯರಾಗಿದ್ದು, ಬಿಜೆಪಿ ಆಡಳಿತದಲ್ಲಿ ಪರಿಷತ್ತಿನ ವಿಪಕ್ಷ ನಾಯಕನ ಜವಾಬ್ದಾರಿಯನ್ನು ದಕ್ಷವಾಗಿಯೇ ನಿರ್ವಹಿಸಿದ್ದಾರೆ. ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದಾಗ ಮಂತ್ರಿ ಸ್ಥಾನದ ಆಕಾಂಕ್ಷಿಗಳಲ್ಲಿ ಹರಿಪ್ರಸಾದ್‌ ಕೂಡ ಒಬ್ಬರಾಗಿದ್ದರು. ಆದರೆ ಇತ್ತೀಚೆಗೆ ಪಕ್ಷಕ್ಕೆ ಬಂದ ಅವರದೇ ಈಡಿಗ ಸಮುದಾಯದ ಮಧು ಬಂಗಾರಪ್ಪನವರಿಗೆ ಮಂತ್ರಿ ಸ್ಥಾನ ನೀಡಿದ್ದು, ಹರಿಪ್ರಸಾದರನ್ನು ಕಡೆಗಣಿಸಿದ್ದು ಕೆರಳಿಸಿದೆ. ಪಕ್ಷದೊಳಗೆ ಮೂಲ-ವಲಸಿಗ ಸಮಸ್ಯೆಯನ್ನು ಮುನ್ನಲೆಗೆ ತಂದಿದೆ. ಡಿ.ಕೆ ಶಿವಕುಮಾರ್‌, ಸಿದ್ದರಾಮಯ್ಯನವರ ಗುಂಪುಗಳು ಹಾಗೂ ದಿಲ್ಲಿಯ ಹೈಕಮಾಂಡಿನ ಆಪ್ತಕೂಟದಿಂದಲೂ ಹೊರಗುಳಿದಿರುವುದು ಹತಾಶೆಗೆ ದೂಡಿ ಆಕ್ರೋಶಕ್ಕೆ ಕಾರಣವಾಗಿದೆ. ಲೋಕಸಭೆಗೆ ಟಿಕೆಟ್‌ ಸಿಗದಿರುವುದು ಖಾತ್ರಿಯಾಗಿದೆ. ಇತ್ತೀಚೆಗೆ ನಡೆದ ಈಡಿಗ ಸಮುದಾಯದ ಸರ್ಕಾರಿ ಸಮಾವೇಶಕ್ಕೆ ಹರಿಪ್ರಸಾದ್‌ರನ್ನು ಕರೆಯದೆ, ದೂರವಿರಿಸಿದ್ದು ಸಿಡಿದೇಳುವಂತೆ ಮಾಡಿದೆ.

ಹಿಂದೊಮ್ಮೆ ಸಿದ್ದರಾಮಯ್ಯನವರು ದೇವೇಗೌಡರ ವಿರುದ್ಧ ಸೆಟೆದುನಿಂತು ಅಹಿಂದ ಸಮಾವೇಶ ಮಾಡಿದಂತೆಯೇ, ಇಂದು ಹರಿಪ್ರಸಾದ್‌ ಕೂಡ ಹಿಂದುಳಿದ ಜಾತಿಗಳನ್ನು ಒಗ್ಗೂಡಿಸಿ ಸಿದ್ದರಾಮಯ್ಯನವರ ವಿರುದ್ಧ ಹರಿಹಾಯ್ದಿದ್ದಾರೆ. ತಮ್ಮದೇ ಪಕ್ಷದ ಮುಖ್ಯಮಂತ್ರಿಗಳ ಮೇಲೆ ಬಹಿರಂಗವಾಗಿ ಬಂಡಾಯವೇಳುವುದು ರಾಜಕಾರಣದಲ್ಲಿ ನಡೆಯದ ವಿದ್ಯಮಾನವಲ್ಲ. ಅಸಮಾಧಾನ ಹೊರಹಾಕುವುದು ಅಪರಾಧವಲ್ಲ. ಆದರೆ ಅದು ಒಂದು ಸಮುದಾಯವನ್ನು ಬೆನ್ನಿಗಿಟ್ಟುಕೊಂಡು ಬೆದರಿಸುವ ಅಸ್ತ್ರವಾಗಬಾರದು. ಆ ಅಸ್ತ್ರ ಸ್ವಾರ್ಥ ರಾಜಕಾರಣಕ್ಕೆ ಬಳಕೆಯಾಗಬಾರದು.

ಅದೇ ರೀತಿ, ಎಲ್ಲರನ್ನು ಎಲ್ಲಾ ಕಾಲಕ್ಕೂ ಸಂತೃಪ್ತರನ್ನಾಗಿ ಇಡಲಾಗುವುದಿಲ್ಲ ಎನ್ನುವುದು ಸತ್ಯವಾದರೂ, ಅಧಿಕಾರದ ಸ್ಥಾನದಲ್ಲಿ ಕೂತವರು ಕೊಂಚ ಉದಾರಿಗಳಾಗಬೇಕಾಗುತ್ತದೆ. ಅವಕಾಶವಂಚಿತರನ್ನು ಹತ್ತಿರಕ್ಕೆ ಕರೆದು ಆಪ್ತತೆ ತೋರಬೇಕಾಗುತ್ತದೆ. ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗುತ್ತದೆ. ಎಲ್ಲ ಜಾತಿ ಜನಾಂಗಗಳನ್ನು ಸಮಾನವಾಗಿ ಕಾಣಬೇಕಾಗುತ್ತದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೂ ಕೊಂಚ ನೆಲ ನೋಡಿ ನಡೆಯಬೇಕಾಗುತ್ತದೆ.

ಹಾಗೆಯೇ 2018ರ ಕಾಂಗ್ರೆಸ್-ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ವಿರುದ್ಧ ಸಣ್ಣ ಕಿಡಿಯಾಗಿ ಶುರುವಾದ ರಮೇಶ್‌ ಜಾರಕಿಹೊಳಿಯವರ ಅಸಮಾಧಾನ, ಕೊನೆಗೆ ಸರ್ಕಾರವನ್ನೇ ಬಲಿ ತೆಗೆದುಕೊಳ್ಳುವಲ್ಲಿ ಪರ್ಯವಸಾನವಾಯಿತು. ಇದನ್ನೂ ಕೂಡ ಸಿದ್ದರಾಮಯ್ಯನವರು ನೆನಪಿನಲ್ಲಿಟ್ಟುಕೊಳ್ಳಬೇಕಾಗಿದೆ.

2023ರ ವಿಧಾನಸಭಾ ಚುನಾವಣೆಯಲ್ಲಿ ಬಲಿಷ್ಠ ಬಿಜೆಪಿಯನ್ನು ಮಣಿಸುವುದು ಅಷ್ಟು ಸುಲಭವಾಗಿರಲಿಲ್ಲ. ಕಾಂಗ್ರೆಸ್‌ ಪಕ್ಷವೇನಾದರೂ ಗೆದ್ದಿದ್ದರೆ, ಅದು ಅವರ ಸ್ವಂತ ಶಕ್ತಿಯಿಂದಲ್ಲ. ಬಿಜೆಪಿಯ ಮನುಷ್ಯವಿರೋಧಿ ನಡೆ ನೋಡಿ ಬೇಸತ್ತ ಶೋಷಿತರು, ಅಲ್ಪಸಂಖ್ಯಾತರು, ಅಸಹಾಯಕರು, ಬಡವರು, ಸಂಘಟನೆಗಳ ಕಾರ್ಯಕರ್ತರು, ಸಾಹಿತಿ ಕಲಾವಿದರು ಮತ್ತು ಸಾಮಾನ್ಯರು ತೆಗೆದುಕೊಂಡ ದಿಟ್ಟ ನಿರ್ಧಾರದಿಂದ.

ದಕ್ಷಿಣ ಭಾರತದಲ್ಲಿ ಕಾಂಗ್ರೆಸ್‌ ಪಕ್ಷ ಏನಾದರೂ ಉಸಿರಾಡುತ್ತಿದ್ದರೆ, ಅದು ಕರ್ನಾಟಕದಲ್ಲಿ ಮಾತ್ರ. ಸಿಗದೆ ಸಿಗದೇ ಸಿಕ್ಕಿರುವ ಈ ಅಪೂರ್ವ ಅವಕಾಶವನ್ನು ಕಾಂಗ್ರೆಸ್ಸಿಗರು ಅರ್ಥ ಮಾಡಿಕೊಳ್ಳದೆ ಅಧಿಕಾರಕ್ಕಾಗಿ ಕಿತ್ತಾಡಿಕೊಂಡರೆ, ಸ್ಥಿರ ಸರ್ಕಾರ ನೀಡಲು ಅಶಕ್ತರಾದರೆ, ಅವರಿಗಿಂತ ಮೂರ್ಖರು ಮತ್ತೊಬ್ಬರಿಲ್ಲ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X