- ‘ಸಾರಿಗೆ ಚಾಲಕರು 3 ಲಕ್ಷ ಮಂದಿ ಇದ್ದು, ಅವರ ಬೇಡಿಕೆ ಈಡೇರಿಕೆ ಕಷ್ಟ’
- ‘ಪ್ರತಿಯೊಬ್ಬರಿಗೆ ಪರಿಹಾರ ಕೊಟ್ಟರೆ 5,009 ಕೋಟಿ ರೂ. ಬೇಕಾಗುತ್ತದೆ’
ಖಾಸಗಿ ಸಾರಿಗೆಯವರು ಶಕ್ತಿ ಯೋಜನೆಯಿಂದ ನಷ್ಟ ಆಗಿದೆ ಪರಿಹಾರ ಕೊಡಿ ಅಂತಿದ್ದಾರೆ. ಅದು ಪ್ರಾಯೋಗಿಕವಾಗಿ ಸಾಧ್ಯವಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದರು.
ಖಾಸಗಿ ಸಾರಿಗೆ ಒಕ್ಕೂಟದ ಮುಷ್ಕರ ವಿಚಾರವಾಗಿ ಬೆಂಗಳೂರಿನಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, “ನಮ್ಮ ಶಕ್ತಿ ಯೋಜನೆಗೆ ಬಜೆಟ್‌ನಲ್ಲಿ 2500 ಕೋಟಿ ರೂ. ಇಡಲಾಗಿದೆ. ಆಟೋ ಚಾಲಕರು ಪ್ರತಿ ತಿಂಗಳು 10 ಸಾವಿರ ಕೊಡು ಅಂತಾರೆ. ಎಲ್ಲಿಂದ ಹಣ ತರಬೇಕು? ಸಾರಿಗೆ ಚಾಲಕರು 3 ಲಕ್ಷ ಮಂದಿ ಇದ್ದಾರೆ. ಅವರ ಬೇಡಿಕೆ ಪ್ರಕಾರ ಪರಿಹಾರ ಕೊಟ್ಟರೆ ಅದೇ 5,009 ಕೋಟಿ ರೂ. ಆಗುತ್ತದೆ. ಇದನ್ನು ಈಡೇರಿಸಲು ಸಾಧ್ಯವೇ” ಎಂದು ಪ್ರಶ್ನಿಸಿದರು.
“ಸಾರಿಗೆ ಸಂಸ್ಥೆಗಳ ಬೇಡಿಕೆ ಎಲ್ಲವೂ ಈಗಿನದ್ದಲ್ಲ. ಕಳೆದ ನಾಲ್ಕೈದು ವರ್ಷಗಳ ಹಳೆಯ ಬೇಡಿಕೆಗಳು ಅವು. ಟ್ಯಾಕ್ಸ್ ಹೆಚ್ಚಳ ಮತ್ತು ಶಕ್ತಿ ಯೋಜನೆ ಮಾತ್ರ ನಮ್ಮ ಸರ್ಕಾರ ಬಂದ ಮೇಲೆ ಆಗಿದೆ. ಮುಖ್ಯಮಂತ್ರಿಗಳು ಸಭೆ ಕರೆದಾಗ ಸಾರಿಗೆ ಸಂಘಗಳು ಬರಲಿಲ್ಲ. ಕಾನೂನಾತ್ಮಕವಾಗಿ ಏನು ಈಡೇರಿಸಲು ಸಾಧ್ಯ ಅದನ್ನು ಈಡೇರಿಸುತ್ತೇವೆ. ಸಾರಿಗೆ ಚಾಲಕರ ಪರವಾಗಿಯೇ ನಮ್ಮ ಸರ್ಕಾರ ಇದೆ” ಎಂದರು.
ಈ ಸುದ್ದಿ ಓದಿದ್ದೀರಾ? ಖಾಸಗಿ ಸಾರಿಗೆಯವರ ನಷ್ಟ ತುಂಬಿಕೊಡಲು ಸರ್ಕಾರಕ್ಕೆ ಆಗಲ್ಲ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ
ಖಾಸಗಿ ಸಾರಿಗೆ ಬೇಡಿಕೆ ವಿಚಾರವಾಗಿ ಕೆಲವು ಪ್ರಕರಣ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನಲ್ಲಿವೆ. ನಮ್ಮ ವಕೀಲರಿಗೆ ಹೇಳಿ ಅವರ ನ್ಯಾಯಯುತ ಬೇಡಿಕೆ ಈಡೇರಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಬಿಜೆಪಿ ಅವಧಿಯಲ್ಲಿ ಬೇಡಿಕೆ ಈಡೇರಿಕೆಗೆ ಅವರು ಪ್ರಯತ್ನಿಸದೇ ಈಗ ನಮ್ಮ ಸರ್ಕಾರದ ಅವಧಿಯಲ್ಲಿ ಎಲ್ಲ ಬೇಡಿಕೆ ಮುಂದಿಟ್ಟರೆ ಹೇಗೆ? ಸಭೆಗೆ ಕರೆದಾಗ ಬರಲಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.
ಬಿಜೆಪಿಗೆ ನೈತಿಕತೆ ಇಲ್ಲ
ಖಾಸಗಿ ಸಾರಿಗೆ ಪ್ರತಿಭಟನೆಗೆ ಬೆಂಬಲಿಸುವ ಹಕ್ಕು ಬಿಜೆಪಿಗೆ ಇದೆಯಾ? ತಮ್ಮ ಅಧಿಕಾರ ಅವಧಿಯಲ್ಲಿ ಬಿಜೆಪಿ ಏನು ಮಾಡಿತು? ಈಗ ಅವರ ಬಗ್ಗೆ ಸಿಂಪಥಿ ಮಾತುಗಳನ್ನಾಡುತ್ತಿದೆ” ಎಂದು ಟೀಕಿಸಿದರು.