ಸನಾತನ ಧರ್ಮದ ಬಗ್ಗೆ ಹೇಳಿಕೆ ನೀಡಿ ಬಲಪಂಥೀಯರ ಕೋಪಕ್ಕೆ ಗುರಿಯಾಗಿದ್ದ ತಮಿಳುನಾಡು ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್, ಈಗ ಬಿಜೆಪಿಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ‘ಬಿಜೆಪಿ ಒಂದು ವಿಷ ಸರ್ಪ’ ಎಂದಿರುವ ಅವರು, ‘ಅದನ್ನು ತಮಿಳುನಾಡಿನಿಂದ ಹೊರಗೆ ಅಟ್ಟಬೇಕಿದೆ’ ಎಂದಿದ್ದಾರೆ.
ಕಡಲೂರಿನಲ್ಲಿ ಡಿಎಂಕೆ ಶಾಸಕ ಸಭಾ ರಾಜೇಂದ್ರನ್ ಅವರ ಮನೆಯ ಸಮಾರಂಭವೊಂದರಲ್ಲಿ ಭಾಗವಹಿಸಿದ್ದ ಅವರು, ತಮಿಳುನಾಡಿನಲ್ಲಿ ಬಿಜೆಪಿ ಮಿತ್ರಪಕ್ಷವಾದ ಎಐಎಡಿಎಂಕೆಯನ್ನೂ ಟೀಕಿಸಿದ್ದಾರೆ. ‘ಎಐಎಡಿಎಂಕೆ ವಿಷಸರ್ಪಕ್ಕೆ ಆಶ್ರಯ ನೀಡಿರುವ ಒಂದು ಕಸದ ರಾಶಿ’ ಎಂದು ಅವರು ವಿಶ್ಲೇಷಿಸಿದ್ದಾರೆ. ‘ಕಸವನ್ನು ಕೂಡ ತೊಲಗಿಸಬೇಕಿದೆ’ ಎಂದು ಅವರು ಕರೆ ನೀಡಿದ್ದಾರೆ.
‘ಕಸದಲ್ಲಿ ಆಶ್ರಯ ಪಡೆದಿರುವ ಸರ್ಪ ನಮ್ಮ ಮನೆಗಳಿಗೆ ನುಗ್ಗುತ್ತಿದೆ. ಹಾವನ್ನು ಇಲ್ಲವಾಗಿಸಬೇಕೆಂದರೆ, ಮೊದಲು ಕಸ ಇಲ್ಲದಂತೆ ನೋಡಿಕೊಳ್ಳಬೇಕು. ಹೀಗಾಗಿ ತಮಿಳುನಾಡಿನ ಜನ 2024ರಲ್ಲಿ ಬಿಜೆಪಿ ಮತ್ತು ಎಐಎಡಿಎಂಕೆಯನ್ನು ಕಿತ್ತೊಗೆಯಬೇಕು’ ಎಂದು ಅವರು ಕರೆ ನೀಡಿದರು. ‘2021ರ ವಿಧಾನಸಭಾ ಚುನಾವಣೆಯಲ್ಲಿ ನಾವು ಅವರ ಗುಲಾಮರನ್ನು ಕಿತ್ತೊಗೆದಿದ್ದೇವೆ. 2024ರ ಲೋಕಸಭಾ ಚುನಾವಣೆಯಲ್ಲಿ ಅವರ ಧಣಿಗಳನ್ನೂ ಒದ್ದೋಡಿಸಬೇಕಿದೆ’ ಎಂದರು.
ಸನಾತನ ಧರ್ಮದ ಬಗ್ಗೆ ತಾವು ಮುಂದೆಯೂ ಮಾತನಾಡುತ್ತಲೇ ಇರುವುದಾಗಿ ಇದೇ ಸಂದರ್ಭದಲ್ಲಿ ಅವರು ತಿಳಿಸಿದರು. ‘ತಮಿಳುನಾಡಿನಲ್ಲಿ ಕಳೆದ 100 ವರ್ಷಗಳಿಂದ ಸನಾತನ ಧರ್ಮದ ವಿರುದ್ಧದ ಧ್ವನಿ ಕೇಳಿಬರುತ್ತಿದೆ. ಇನ್ನೂ 200 ವರ್ಷ ನಾವು ಅದನ್ನು ಮುಂದುವರೆಸುತ್ತೇವೆ’ ಎಂದು ಅವರು ನುಡಿದರು.
ಈ ಸುದ್ದಿ ಓದಿದ್ದೀರಾ: ಉದಯನಿಧಿ ಎಂಬ ಉದಯಸೂರ್ಯ!
‘ಸನಾತನ ಧರ್ಮದ ಬಗೆಗಿನ ಟೀಕೆಗಳು ಹೊಸದೇನಲ್ಲ’ ಎಂದ ಉದಯನಿಧಿ, ‘ಡಾ.ಬಿ.ಆರ್.ಅಂಬೇಡ್ಕರ್, ಪೆರಿಯಾರ್, ಕರುಣಾನಿಧಿ ಈ ಹಿಂದೆ ಅನೇಕ ಸಂದರ್ಭಗಳಲ್ಲಿ ಸನಾತನ ಧರ್ಮದ ವಿರುದ್ಧ ಮಾತನಾಡಿದ್ದಾರೆ. ಸನಾತನ ಧರ್ಮಕ್ಕೆ ಸಮರ್ಥ ವಿರೋಧ ವ್ಯಕ್ತವಾಗಿದ್ದರಿಂದಲೇ ಮಹಿಳೆಯರು ಹೊಸಿಲು ಬಿಟ್ಟು ಹೊರಬರುವಂತಾಯಿತು, ಸತಿ ಪದ್ಧತಿಯಂಥ ಅನಿಷ್ಟ ಆಚರಣೆಗಳು ಅಂತ್ಯಗೊಂಡವು. ಡಿಎಂಕೆ ಹುಟ್ಟಿಕೊಂಡದ್ದೇ ಅಂಥ ಅನಿಷ್ಟ ಆಚರಣೆಗಳ ವಿರೋಧದ ತಾತ್ವಿಕತೆಯ ಮೇಲೆ. ಆದರೆ, ಈಗ ಬಿಜೆಪಿಯು ನನ್ನ ಹೇಳಿಕೆಗಳನ್ನು ಸಂಪೂರ್ಣವಾಗಿ ತಿರುಚಿ, ನಾನು ಹೇಳದೇ ಇರುವುದನ್ನು ಪ್ರಚಾರ ಮಾಡುತ್ತಿದೆ’ ಎಂದು ಅವರು ಕಿಡಿ ಕಾರಿದರು.