ನಿನ್ನೆ (ಸೆಪ್ಟೆಂಬರ್ 10) ಕೊಲೊಂಬೋದ ಆರ್ ಪ್ರೇಮದಾಸ ಮೈದಾನದಲ್ಲಿ ನಡೆದ ಭಾರತ-ಪಾಕಿಸ್ತಾನದ ಏಷ್ಯಾ ಕಪ್ ಪಂದ್ಯ ಮಳೆಯಿಂದಾಗಿ ಸ್ಥಗಿತಗೊಂಡಿತ್ತು. ಸೂಪರ್-4 ಹಂತದ ನಿನ್ನೆಯ ಪಂದ್ಯವನ್ನು ಸೆಪ್ಟೆಂಬರ್ 11ಕ್ಕೆ ಮುಂದೂಡಲಾಗಿತ್ತು. ಆದರೆ ಕೊಲೊಂಬೋದಲ್ಲಿ ಇಂದು ಕೂಡ ಮಳೆ ಸುರಿಯುತ್ತಿರುವ ಕಾರಣ ಪಂದ್ಯ ತಡವಾಗಿ ಆರಂಭವಾಗುವ ಸಾಧ್ಯತೆಯಿದೆ.
ಕೊಲಂಬೋದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ಪಂದ್ಯ ಆರಂಭವಾಗುವ ಮಧ್ಯಾಹ್ನ 3 ಗಂಟೆಗಿಂತ 90 ನಿಮಿಷಗಳ ಮೊದಲೇ ಮಳೆ ಸುರಿಯುತ್ತಿದೆ. ಮೀಸಲು ದಿನದಲ್ಲಿ ಬ್ಯಾಟಿಂಗ್ ಆರಂಭಿಸಬೇಕಾದ ಕೆ ಎಲ್ ರಾಹುಲ್ ಹಾಗೂ ವಿರಾಟ್ ಕೊಹ್ಲಿ ಬ್ಯಾಟಿಂಗ್ ಕಿಟ್ ಧರಿಸಿ ಮಳೆ ನಿಲ್ಲುವುದನ್ನೇ ಕಾಯುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬಿಸಿಸಿಐ ಹಾಳು ಮಾಡಲು ಭ್ರಷ್ಟ ಜಯ್ ಶಾ ಸಾಕು ಎಂದಿದ್ದ ಮಾಜಿ ಕ್ರಿಕೆಟಿಗ ವೆಂಕಿ: ಕೆಲವೇ ನಿಮಿಷದಲ್ಲಿ ಪೋಸ್ಟ್ ಡಿಲೀಟ್!
ಕ್ರೀಡಾಂಗಣದಲ್ಲಿ ಮಳೆ ಬರುತ್ತಿರುವ ಕಾರಣ “ಕೊಲೊಂಬೋದಲ್ಲಿ ಇಳಯರಾಜ ಸರ್ ಅವರ ಹಾಡುಗಳು ಹಾಗೂ ಬಿಸಿ ಟೀ ಸಮಯ” ಎಂದು ಕ್ರಿಕೆಟಿಗ ಆರ್ ಅಶ್ವಿನ್ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ.
“ಕೊಲೊಂಬೊದಲ್ಲಿ ರಾತ್ರಿಯಿಡೀ ಮಳೆ ಸುರಿದಿದೆ. ಸದ್ಯ ವಾತಾವರಣ ಶುಭ್ರವಾಗಿಲ್ಲ. ಮೋಡಗಳು ಆವರಿಸಿದ್ದು, ತಂಪು ವಾತಾವರಣವಿದೆ. ಈ ರೀತಿ ಆದಾಗ ಎಂತಹವರಿಗೂ ಹತಾಶೆಯಾಗುತ್ತದೆ. ಆದರೆ, ನಾವು ಹವಾಮಾನ ನಿಯಂತ್ರಿಸಲು ಸಾಧ್ಯವಿಲ್ಲ. ಪ್ರಾರ್ಥಿಸಬಹುದಷ್ಟೆ” ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ವಾಸಿಂ ಅಕ್ರಂ ಟ್ವಿಟರ್ನಲ್ಲಿ ತಿಳಿಸಿದ್ದಾರೆ.
ನಿನ್ನೆಯ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ಬೌಲಿಂಗ್ ಆಯ್ಕೆ ಆಯ್ದುಕೊಂಡಿತ್ತು. ಬ್ಯಾಟಿಂಗ್ ಆಹ್ವಾನ ಪಡೆದ ಭಾರತ 24.1 ಓವರ್ ಮುಗಿಸುವ ಹೊತ್ತಿಗೆ ಮಳೆ ಬಂದಿತ್ತು. ಸ್ವಲ್ಪ ಸಮಯದ ಬಳಿಕ ಮಳೆ ನಿಂತಿತ್ತು. ಕ್ರೀಡಾಂಗಣದ ಸಿಬ್ಬಂದಿ ಪಿಚ್ ಅನ್ನು ಒಣಗಿಸುವ ಕೆಲಸ ಮುಗಿಸಿ ಪಂದ್ಯಕ್ಕೆ ಸಿದ್ಧತೆ ಮಾಡಿದ್ದರು.
34 ಓವರ್ಗಳಿಗೆ ಸೀಮಿತಗೊಳಿಸಿ ಪಂದ್ಯ ಆರಂಭಕ್ಕೆ ತಯಾರಿಯಲ್ಲಿದ್ದಾಗ ಮತ್ತೆ ಮಳೆ ಆರಂಭವಾಗಿತ್ತು. ಹಾಗಾಗಿ, ಮೀಸಲು ದಿನಕ್ಕೆ ಪಂದ್ಯವನ್ನು ಮುಂದೂಡಲಾಗಿತ್ತು. ಪಂದ್ಯ ನಿಲ್ಲುವ ಹೊತ್ತಿಗೆ ಭಾರತ 147/2 ರನ್ ಗಳಿಸಿತ್ತು. ವಿರಾಟ್ ಕೊಹ್ಲಿ (ಅಜೇಯ 8) ಮತ್ತು ಕೆ.ಎಲ್. ರಾಹುಲ್ (ಅಜೇಯ 17) ರನ್ ಗಳಿಸಿದ್ದರು. ಇದಕ್ಕೂ ಮುನ್ನ ನಾಯಕ ರೋಹಿತ್ ಶರ್ಮಾ (56) ಮತ್ತು ಶುಭಮನ್ ಗಿಲ್ (58) ಅರ್ಧ ಶತಕ ಸಿಡಿಸಿ ಪೆವಿಲಿಯನ್ಗೆ ಮರಳಿದ್ದರು.
ಫೈನಲ್ ಪಂದ್ಯ ಕೊಲಂಬೊದಿಂದ ಸ್ಥಳಾಂತರ
ಫೈನಲ್ ಪಂದ್ಯದ ದಿನದಂದು ಕೊಲಂಬೋದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಏಷ್ಯಾ ಕಪ್ ಫೈನಲ್ ಪಂದ್ಯವನ್ನು ಕೊಲಂಬೋದ ಬದಲು ಕ್ಯಾಂಡಿಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ವರದಿಯಾಗಿದೆ.
ವಾಸ್ತವವಾಗಿ ಪೂರ್ವ ನಿಗದಿಯಂತೆ ಸೆಪ್ಟೆಂಬರ್ 17 ರಂದು ಕೊಲಂಬೋದಲ್ಲಿ ಏಷ್ಯಾಕಪ್ ಫೈನಲ್ ಪಂದ್ಯ ನಡೆಯಬೇಕಿತ್ತು. ಆದರೆ ಫೈನಲ್ ಪಂದ್ಯದ ದಿನದಂದು ಕೊಲಂಬೋದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಈ ಪಂದ್ಯವನ್ನು ಕೊಲಂಬೋ ಬದಲು ಕ್ಯಾಂಡಿಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ.
ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮೂಲಗಳ ಪ್ರಕಾರ, ಏಷ್ಯಾಕಪ್ ಫೈನಲ್ ಪಂದ್ಯವು ಭಾನುವಾರ ಸೆಪ್ಟೆಂಬರ್ 17 ರಂದು ಕ್ಯಾಂಡಿಯ ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ ಎಂದು ವರದಿಯಾಗಿದೆ.