ತೀವ್ರ ಮಳೆ ಕೊರತೆ ಹಿನ್ನೆಲೆಯಲ್ಲಿ ಸಾಲಕ್ಕೆ ಹೆದರಿ ರೈತನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಸಾಲಬಾಳು ಗ್ರಾಮದಲ್ಲಿ ನಡೆದಿದೆ.
ಸಾಲಬಾಳು ಗ್ರಾಮದ ಸತೀಶ ನಾಯ್ಕ(33) ಆತ್ಮಹತ್ಯೆಗೆ ಶರಣಾದ ರೈತ. ಸತೀಶ ನಾಯ್ಕ ಮತ್ತು ಸಹೋದರರ ಹೆಸರಿಗೆ ಜಂಟಿ ಖಾತೆಯಲ್ಲಿದ್ದ 2.10ಎಕರೆ ಜಮೀನಿನಲ್ಲಿ ಅಡಿಕೆ ತೋಟದ ಜೊತೆ ಮೆಕ್ಕೆ ಜೋಳ ಕೃಷಿ ಮಾಡಿಕೊಂಡಿದ್ದರು. ಬೀಜ, ಗೊಬ್ಬರ ಸೇರಿದಂತೆ ಜಮೀನು ಅಭಿವೃದ್ಧಿಗಾಗಿ ಹೊನ್ನಾಳಿ ಪಿಎಲ್ಡಿ ಬ್ಯಾಂಕ್ನಲ್ಲಿ ₹1.40 ಲಕ್ಷ, ಧರ್ಮಸ್ಥಳ ಸಂಘದಲ್ಲಿ ₹50,000 ಹಾಗೂ ಕೈಗಡವಾಗಿ ಅಂದಾಜು 5 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು. ಮಳೆ ಕೈಕೊಟ್ಟಿದ್ದರಿಂದ ಸತೀಶ ನಾಯ್ಕ ಆತಂಕಕ್ಕೆ ಒಳಗಾಗಿದ್ದರೆಂದು ಅವರ ಸಂಬಂಧಿಕರು, ಸ್ನೇಹಿತರು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೀದರ್ | ಔರಾದ ತಾಲೂಕನ್ನು ಬರಪಿಡಿತವೆಂದು ಘೋಷಿಸಲು ಆಗ್ರಹ
ಮಳೆ ಬಾರದಿದ್ದರಿಂದ ಬಿತ್ತಿದ್ದ ಬೆಳೆಯ ಕೈಗೆ ಬರಲಿಲ್ಲ. ಬ್ಯಾಂಕ್, ಸಂಘ ಹಾಗೂ ಕೈಗಡ ಸಾಲವನ್ನು ಹೇಗೆ ತೀರಿಸುವುದೆಂಬ ಆತಂಕದಲ್ಲಿ ಸತೀಶನಾಯ್ಕ ಮರಕ್ಕೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ. ಮೃತನ ಪತ್ನಿ ರೇಷ್ಮಾ ನ್ಯಾಮತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೋಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.