ಭೂ ಕಬಳಿಕೆ, ಹಲ್ಲೆ ಹಾಗೂ ಜಾತಿ ನಿಂದನೆ – ದೌರ್ಜನ್ಯ ಆರೋಪದ ಮೇಲೆ ಯೋಜನೆ ಹಾಗೂ ಸಾಂಖ್ಯಿಕ ಖಾತೆ ಸಚಿವ ಡಿ.ಸುಧಾಕರ್ ವಿರುದ್ಧ ಬೆಂಗಳೂರಿನಲ್ಲಿ ಪ್ರಕರಣ ದಾಖಲಾಗಿದೆ.
ನಗರದ ಯಲಹಂಕ ಪೊಲೀಸ್ ಠಾಣೆಯಲ್ಲಿ ಸುಬ್ಬಮ್ಮ ಎಂಬುವವರು ದೂರು ದಾಖಲಿಸಿದ್ದಾರೆ. ಅವರ ದೂರಿನ ಆಧಾರದ ಮೇಲೆ ಪೊಲೀಸರು ಸಚಿವ ಸುಧಾಕರ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಪ್ರಕರಣದಲ್ಲಿ ಸಚಿವ ಸುಧಾಕರ್ ಮಾತ್ರವಲ್ಲದೆ, ಶ್ರೀನಿವಾಸ್ ಮತ್ತು ಭಾಗ್ಯಮ್ಮ ಎಂಬುವರ ಹೆಸರನ್ನೂ ಉಲ್ಲೇಖಿಸಲಾಗಿದೆ. ಈ ಮುವರು ದಲಿತ ಸಮುದಾಯದ ಸುಬ್ಬಮ್ಮ ಅವರ ಕುಟುಂಬಸ್ಥರ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೆ, ಜಾತಿ ನಿಂದನೆ ಮಾಡಿದ್ದಾರೆ ಎಂದು ಪ್ರಕರಣದಲ್ಲಿ ಉಲ್ಲೇಖಿಸಲಾಗಿದೆ.
ಸೆವೆನ್ ಹಿಲ್ಸ್ ಡೆವಲಪರ್ಸ್ ಮತ್ತು ಟ್ರೇಡರ್ಸ್ ಕಂಪನಿಯ ಪಾಲುದಾರರಾದ ಸಚಿವ ಡಿ ಸುಧಾಕರ್ ಅವರು ಯಲಹಂಕ ಗ್ರಾಮದ ಸರ್ವೆ ನಂ.108/1ರ ಜಮೀನನ್ನು ಮೋಸದಿಂದ ಕಬಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಜಮೀನಿನ ವಿವಾದ ಕೋರ್ಟ್‍ನಲ್ಲಿ ವಿಚಾರಣೆಯಲ್ಲಿದೆ. ಈ ನಡುವೆ, ಸಚಿವರು ಮತ್ತು ಅವರ ಸಂಗಡಿಗರು ಗುಂಪು ಕಟ್ಟಿಕೊಂಡು ಸುಬ್ಬಮ್ಮ ಅವರ ಮಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಮನೆಯಲ್ಲಿದ್ದ ಕುಟುಂಬಸ್ಥರನ್ನು ಹೊರ ದಬ್ಬಿ, ಮನೆಯನ್ನು ಕೆಡವಿದ್ದಾರೆ ಎಂದು ಆರೋಪಿಸಲಾಗಿದೆ.