ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ-2 ರ ಪರೀಕ್ಷಾ ಮೌಲ್ಯಮಾಪನ ಪೂರ್ಣಗೊಂಡಿದ್ದು, ಸೆ.12 ರ ಸಂಜೆ 4 ಗಂಟೆಯ ನಂತರ ಫಲಿತಾಂಶ ಪ್ರಕಟವಾಗಲಿದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ನಿರ್ದೇಶಕರು(ಪರೀಕ್ಷೆ), “ಆಗಸ್ಟ್/ಸೆಪ್ಟೆಂಬರ್ 2023ರ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ-2 ಅನ್ನು ಆಗಸ್ಟ್ 22 ರಿಂದ ಸೆಪ್ಟೆಂಬರ್ 2ರವರೆಗೆ ನಡೆಸಲಾಗಿದೆ. ಇದೀಗ ಎಲ್ಲ ವಿಷಯಗಳ ಉತ್ತರ ಮೌಲ್ಯಮಾಪನ ಕಾರ್ಯವು ಮುಕ್ತಾಯವಾಗಿದೆ. ಹಾಗಾಗಿ, ದ್ವಿತೀಯ ಪಿಯುಸಿ ಫಲಿತಾಂಶವನ್ನು ಸೆ.12 ರಂದು ಮಂಡಳಿಯ ಜಾಲತಾಣದಲ್ಲಿ https://karresults.nic.in ಸಂಜೆ 4 ಗಂಟೆಯ ನಂತರ ವೀಕ್ಷಿಸಬಹುದಾಗಿದೆ” ಎಂದು ತಿಳಿಸಿದ್ದಾರೆ.
ಈ ಮೊದಲು ಪ್ರಸಕ್ತ ವರ್ಷದಲ್ಲಿ ಮೇ ಮತ್ತು ಜೂನ್ ತಿಂಗಳಿನಲ್ಲಿ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯನ್ನು ನಡೆಸಲಾಗಿತ್ತು. ಆ ಬಳಿಕ ಜೂನ್ 20 ರಂದು ಫಲಿತಾಂಶ ಪ್ರಕಟವಾಗಿತ್ತು. ಇದೀಗ ಮತ್ತೊಂದು ಪೂರಕ ಪರೀಕ್ಷೆಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನಡೆಸಿದ್ದು, ಫಲಿತಾಂಶ ಪ್ರಕಟಿಸಲು ಸಿದ್ಧತೆ ನಡೆಸಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ತಮಿಳುನಾಡು ಸಾರಿಗೆ ಬಸ್ ಮೇಲೆ ಕಲ್ಲು ತೂರಾಟ; ಎಫ್‌ಐಆರ್ ದಾಖಲು
ಮಾರ್ಚ್ ತಿಂಗಳಲ್ಲಿ ನಡೆದ 2022-23ನೇ ಸಾಲಿನ ದ್ವಿತೀಯ ಪಿಯಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಏಪ್ರಿಲ್ನಲ್ಲಿ ಪ್ರಕಟವಾಗಿತ್ತು. ಈ ಫಲಿತಾಂಶದಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದರು. ಪರೀಕ್ಷೆಗೆ ಹಾಜರಾದ ಒಟ್ಟು 7,02,067 ವಿದ್ಯಾರ್ಥಿಗಳ ಪೈಕಿ 5,24,209 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು. ಶೇ.74.67 ರಷ್ಟು ಫಲಿತಾಂಶ ಬಂದಿತ್ತು. ವಾಣಿಜ್ಯ ವಿಭಾಗದಲ್ಲಿ ಶೇ.75.8, ಕಲಾ ವಿಭಾಗ ಶೇ.61.22 ಹಾಗೂ ವಿಜ್ಞಾನ ವಿಭಾಗದಲ್ಲಿ ಶೇ.85.71 ರಷ್ಟು ವಿದ್ಯಾರ್ಥಿಗಳು ಪಾಸ್ ಆಗಿದ್ದರು.
ಕಳೆದ ಬಾರಿಯ ಪೂರಕ ಪರೀಕ್ಷೆಗೆ ಒಟ್ಟು 1,58,881 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದರು. ಆದರೆ, 1,57,756 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಇದರಲ್ಲಿ 50,478 ವಿದ್ಯಾರ್ಥಿಗಳು ಪಾಸ್ ಆಗಿದ್ದರು. ಪೂರಕ ಪರೀಕ್ಷೆಯಲ್ಲಿ ಶೇ.32 ರಷ್ಟು ಫಲಿತಾಂಶ ಬಂದಿತ್ತು.