ಆಟೋ ರೀಕ್ಷಾ ಚಾಲಕನೊಬ್ಬ ಯುವತಿ ಹೋಗಬೇಕಾಗಿರುವ ಸ್ಥಳಕ್ಕೆ ಗೊತ್ತು ಮಾಡಿದ್ದ ಮಾರ್ಗದಲ್ಲಿ ತೆರಳದೆ ಬೇರೆ ಮಾರ್ಗದಿಂದ ತೆರಳುವಾಗ ಅನುಮಾನಗೊಂಡ ಯುವತಿ ಆಟೋದಿಂದ ಜಿಗಿದು ಗಾಯಗೊಂಡಿರುವ ಘಟನೆ ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯ ಪೈ ಲೇಔಟ್ನಲ್ಲಿ ನಡೆದಿದೆ.
ಶನಿವಾರ ಮಧ್ಯಾಹ್ನ ಸಂತ್ರಸ್ತೆ ರೋಶಿನಿ ಜೋಸೆಫ್(25) ವೇಗವಾಗಿ ಚಲಿಸುತ್ತಿದ್ದ ಆಟೋದಿಂದ ಜಿಗಿದು ಬಲಗೈ ಮುರಿದುಕೊಂಡು, ಸೊಂಟಕ್ಕೆ ಗಾಯಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ ಯುವತಿ ಮೂಲತಃ ಕೇರಳದವರು. ಇವರು ನಗರದಲ್ಲಿ ಡೇಟಾ ವಿಶ್ಲೇಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಗರದ ಪ್ರಶಾಂತ್ ಲೇಔಟ್ನ ಹೋಪ್ ಫಾರ್ಮ್ ಬಳಿ ಪೇಯಿಂಗ್ ಗೆಸ್ಟ್ನಲ್ಲಿ ವಾಸಿಸುತ್ತಿದ್ದಾರೆ.
ಬಿ ನಾರಾಯಣಪುರದ ಜಿಮ್ ಬಳಿಯಿಂದ ಯುವತಿ ವಿಜಿನಾಪುರದ ಬೃಂದಾವನ ಲೇಔಟ್ಗೆ ಆಟೋವನ್ನು ಬಾಡಿಗೆಗೆ ಪಡೆದಿದ್ದರು. ಯುವತಿ ಆಟೋ ಹತ್ತಿದ ನಂತರ, ಚಾಲಕ ಸಾಮಾನ್ಯ ಮಾರ್ಗವನ್ನು ಬಿಟ್ಟು ಬೇರೆ ಮಾರ್ಗದಲ್ಲಿ ಯುವತಿಯನ್ನು ಕರೆದುಕೊಂಡು ಹೋಗುತ್ತಿದ್ದನು.
ಇದನ್ನು ಕಂಡು ಅನುಮಾನಗೊಂಡ ಯುವತಿ ಆಟೋ ನಿಲ್ಲಿಸುವಂತೆ ಚಾಲಕನನ್ನು ಕೇಳಿದ್ದಾರೆ. ಆದರೆ, ಚಾಲಕ ಯುವತಿ ಮಾತನ್ನು ಕೇಳದೆ ಆಟೋವನ್ನು ಇನ್ನೂ ವೇಗವಾಗಿ ಚಲಾಯಿಸಿದ್ದಾನೆ. ಮುಂದಾಗುವ ತೊಂದರೆಯನ್ನು ಗ್ರಹಿಸಿದ ಯುವತಿಯು ಐಟಿಪಿಎಲ್ ರಸ್ತೆಯ ಪೈ ಲೇಔಟ್ನಲ್ಲಿ ಮಧ್ಯಾಹ್ನ 2.45ರ ಸುಮಾರಿಗೆ ವೇಗವಾಗಿ ಚಲಿಸುತ್ತಿದ್ದ ಆಟೋದಿಂದ ಜಿಗಿದಿದ್ದಾರೆ.
ವೇಗವಾಗಿ ಚಲಿಸುತ್ತಿದ್ದ ಆಟೋದಿಂದ ಯುವತಿ ಜಿಗಿದ ಪರಿಣಾಮ ಆಕೆಯ ಬಲಗೈ ಮುರಿದಿದ್ದು, ಸೊಂಟಕ್ಕೆ ಗಾಯವಾಗಿದೆ ಎಂದು ತಿಳಿದುಬಂದಿದೆ.
“ವೈದ್ಯರು ನಾಲ್ಕು ವಾರಗಳ ಕಾಲ ಬೆಡ್ ರೆಸ್ಟ್ಗೆ ಸಲಹೆ ನೀಡಿದ್ದಾರೆ. ನನಗೆ ನಡೆಯಲು ಸಾಧ್ಯವಾಗುತ್ತಿಲ್ಲ. ಗೂಗಲ್ ಮ್ಯಾಪ್ನಲ್ಲಿ ನಾನು ತೆರಳಬೇಕಾಗಿರುವ ಪ್ರದೇಶಕ್ಕೆ ಕೇವಲ ಒಂಬತ್ತು ನಿಮಿಷದ ಪ್ರಯಾಣ ಎಂದು ತೋರಿಸುತ್ತಿತ್ತು. ಆದರೆ, ಆಟೋ ಚಾಲಕ 15 ನಿಮಿಷ ಕಳೆದರೂ ಕೂಡ ನಾನು ತಲುಪಬೇಕಾಗಿರುವ ಸ್ಥಳಕ್ಕೆ ನನ್ನನ್ನು ಬಿಟ್ಟಿರಲಿಲ್ಲ. ಗೊತ್ತಿಲ್ಲದೆ ಇರುವ ಮಾರ್ಗಗಳಲ್ಲಿ ಚಲಿಸಿದ್ದಾರೆ. ಅವರು ಕರೆದುಕೊಂಡು ಹೋದ ಮಾರ್ಗಗಳಲ್ಲಿ ವಾಹನಗಳಾಗಲಿ, ಜನರಾಗಲಿ ಇರಲಿಲ್ಲ. ಇದರಿಂದ ನಾನು ಭಯಗೊಂಡು ಆಟೋದಿಂದ ಜಿಗಿದೆ. ನಂತರ ಆಟೋ ಚಾಲಕ ಗಾಡಿ ನಿಲ್ಲಿಸದೇ, ವೇಗವಾಗಿ ಆಟೋ ಚಲಾಯಿಸಿಕೊಂಡು ಹೋದನು. ಚಾಲಕ ಹಿಂದಿ ಮಾತನಾಡುತ್ತಿದ್ದನು” ಎಂದು ಸಂತ್ರಸ್ತೆ ರೋಶಿನಿ ಹೇಳಿದರು.
“ರಸ್ತೆಯಲ್ಲಿ ನನಗೆ ಯಾವುದೇ ಸಹಾಯ ಸಿಗದಿದ್ದಾಗ, ನನ್ನ ಸಹೋದರಿಗೆ ಕರೆ ಮಾಡಿ ಕರೆಯಿಸಿದೆ. ಬಳಿಕ ಅವರ ಜತೆಗೆ ಆಸ್ಪತ್ರೆಗೆ ಬಂದೆ. ನಾನು ತೀವ್ರ ನೋವಿನಲ್ಲಿದ್ದೇನೆ. ನನ್ನ ಸೊಂಟಕ್ಕೆ ತುಂಬಾ ನೋವಾಗಿದೆ. ನನ್ನ ಬಲಗೈ ಮುರಿದಿದೆ” ಎಂದು ಅವರು ಹೇಳಿದರು.
ಈ ಸುದ್ದಿ ಓದಿದ್ದೀರಾ? ಸೆ.12 ಸಂಜೆ 4 ಗಂಟೆ ನಂತರ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ-2 ಫಲಿತಾಂಶ ಪ್ರಕಟ
“ನನ್ನ ತಾಯಿ ನನ್ನೊಂದಿಗೆ ನಗರದಲ್ಲಿ ಇರಲು ಬಯಸಿದ್ದರಿಂದ ನಾನು ಮನೆಯನ್ನು ಹುಡುಕುತ್ತಿದ್ದೇನೆ. ಘಟನೆ ದಿನ ಮಹದೇವಪುರದ ಮನೆಗಳನ್ನು ನೋಡಲು ಒಬ್ಬರನ್ನು ಭೇಟಿಯಾಗಬೇಕಿತ್ತು” ಎಂದು ಹೇಳಿದರು.
ಈ ಬಗ್ಗೆ ಸಂತ್ರಸ್ತೆ ಯುವತಿ ಮಹದೇವಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಮೇರೆಗೆ ಪೊಲೀಸರು ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರು.
“ಆಟೋ ರಿಕ್ಷಾದ ನೋಂದಣಿ ಸಂಖ್ಯೆ ಸರಿಯಾಗಿ ಗೋಚರಿಸಲಿಲ್ಲ. ಚಾಲಕನನ್ನು ಇನ್ನೂ ಬಂಧಿಸಲಾಗಿಲ್ಲ. ಆಟೋ ಚಾಲಕನ ವಿರುದ್ಧ ಇತರರ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ (IPC 337) ಅಪಾಯವನ್ನುಂಟುಮಾಡುವ ಕೃತ್ಯದಿಂದ ನೋವುಂಟುಮಾಡುವ ಪ್ರಕರಣವನ್ನು ದಾಖಲಿಸಲಾಗಿದೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.