ಪೌರಕಾರ್ಮಿಕರ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ದಿನಗೂಲಿ ಮತ್ತು ನೇರ ಪಾವತಿ ಪೌರ ಸೇವಾ ನೌಕರರ ಸಂಘದ ಕಾರ್ಯಕರ್ತರು ರಾಯಚೂರು ನಗರದ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಿದರು.
“ಪೌರಕಾರ್ಮಿಕರಿಗೆ ಖಾಯಂ ನೌಕರರಿ ಭರ್ತಿಯಾಗದೇ ಉಳಿದ 29 ಹುದ್ದೆಗಳಿಗೆ ನೇರ ವೇತನ, ಪೌರಕಾರ್ಮಿಕರನ್ನು ಕೂಡಲೇ ಭರ್ತಿ ಮಾಡುವುದು, ಸಿರವಾರ, ಕವಿತಾಳ, ದೇವದುರ್ಗ, ಲಿಂಗಸೂಗೂರು, ಹಟ್ಟಿಯಲ್ಲಿ ಪೌರಕಾರ್ಮಿಕರಾಗಿ ನೇಮಕ ಗೊಂಡವರಿಗೆ 05 ತಿಂಗಳ ವೇತನ ಪಾವತಿಸಲು ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.
“2007ರಲ್ಲಿ ಪೌರಕಾರ್ಮಿಕರೆಂದು ನೇಮಕಗೊಂಡು ಪೌರಕಾರ್ಮಿಕರ ಕೆಲಸ ಮಾಡದೇ ಪೌರಕಾರ್ಮಿಕರ ವೇತನ ಪಡೆಯುತ್ತಿರುವವರನ್ನು ಕೂಡಲೇ ಕೆಲಸದಿಂದ ವಜಾಗೊಳಿಸಬೇಕು. ಜಿಲ್ಲೆಯ ಹಲವು ತಾಲೂಕಗಳ ಪುರಸಭೆ, ಪಟ್ಟಣ ಪಂಚಾಯಿತಿಗಳಿಂದ ಪೌರಕಾರ್ಮಿಕ ಹುದ್ದೆಯಲ್ಲಿರುವವರನ್ನು ನಿಯುಕ್ತಿಗೊಳಿಸಬಾರದು. ರಾಯಚೂರು ನಗರಸಭೆ ವ್ಯಾಪ್ತಿಯ ಪಂಚಾಯಿತಿಗಳಲ್ಲಿ ಖಾಯಂ ಪೌರ ಕಾರ್ಮಿಕರು ಸೇರಿದಂತೆ ಇತರರ ವಿರುದ್ಧ ಕ್ರಮ ಕೈಗೊಳ್ಳಬೇಕು. ತಾಲೂಕು, ಪುರಸಭೆ, ಪಟ್ಟಣ ಬದಲಿ ಕಾರ್ಮಿಕರನ್ನು ನೇಮಿಸಿಕೊಳ್ಳಬೇಕು” ಎಂದು ಮನವಿ ಮಾಡಿದರು.
“ನಗರಸಭೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೇರ ವೇತನ ಪೌರಕಾರ್ಮಿಕರಿಗೆ ಬೆಳಗಿನ ಉಪಹಾರ, ಸಮವಸ್ತ್ರ, ಚಪ್ಪಲಿ, ಗ್ಲೌಸ್, ಮಾಸ್ಕ್‌ಗಳನ್ನು ಕೂಡಲೇ ಒದಗಿಸಬೇಕು. ನಗರಸಭೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೇರ ವೇತನ ಪೌರಕಾರ್ಮಿಕರಿಗೆ ಆಕ್ಟೋಬರ್ 2022 ರಿಂದ ಮಾರ್ಚ್ 2023ರವರೆಗೆ ವ್ಯತ್ಯಾಸದ ವೇತನ ನೀಡಬೇಕು. ನಗರಸಭೆಯ 20 ಮಂದಿ ವಾಹನ ಚಾಲಕರಿಗೆ 4 ತಿಂಗಳ ವೇತನ ಪಾವತಿಸಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಚಾಮರಾಜನಗರ | ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ
“ನಗರಸಭೆಯ ಎಲೆಕ್ಟ್ರಿಕಲ್ ವಿಭಾಗದ ಕಾರ್ಮಿಕರಿಗೆ 4 ತಿಂಗಳ ವೇತನ ಪಾವತಿಸಬೇಕು. ಮರಣ ಹೊಂದಿದ ನೇರ ವೇತನ ಪೌರಕಾರ್ಮಿಕರ 6 ಕುಟುಂಬಗಳಿಗೆ ಅನುಕಂಪದ ಅಧಾರದ ಮೇರೆಗೆ ಪೌರಕಾರ್ಮಿಕರ ಹುದ್ದೆಗೆ ನೇಮಿಸಿಕೊಳ್ಳಬೇಕು. ನಿವೃತ್ತಿ ಹೊಂದಿದ ನೇರ ವೇತನ ಪೌರ ಕಾರ್ಮಿಕರ ಕುಟುಂಬಗಳಿಗೆ ಉದ್ಯೋಗ, ನಷ್ಟ ಪರಿಹಾರ ಒದಗಿಸಬೇಕು. ಕೆಲಸದಿಂದ ವಜಾಗೊಳಿಸಿದ ಪೌರಕಾರ್ಮಿಕರನ್ನು ಕೂಡಲೇ ನೇಮಿಸಿಕೊಳ್ಳಬೇಕು” ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಎಸ್ ಮಾರೆಪ್ಪ ವಕೀಲ, ನರಸಿಂಹಲು, ಆರ್ ಹನುಮಂತಪ್ಪ, ಮುತ್ತಪ್ಪ, ಉರುಕುಂದಪ್ಪ ಸೇರಿದಂತೆ ಅನೇಕರು ಇದ್ದರು.
ವರದಿ ಮಾಹಿತಿ: ಸಿಟಿಜನ್ ಜರ್ನಲಿಸ್ಟ್, ಹಫೀಜುಲ್ಲ