ಸುಳ್ಳುಸುದ್ದಿ ಹಬ್ಬಿಸಿ ಪೇಚಿಗೆ ಸಿಲುಕಿದ ತೇಜಸ್ವಿ ಸೂರ್ಯ, ಸುಧೀರ್‌ ಚೌಧರಿ

Date:

Advertisements

ಕರ್ನಾಟಕ ಸರ್ಕಾರದ ಕಲ್ಯಾಣ ಕಾರ್ಯಕ್ರಮವೊಂದರ ಕುರಿತು ಸುಳ್ಳು ಸುದ್ದಿ ಹಬ್ಬಿಸಿದ ಆರೋಪದ ಮೇಲೆ ‘ಆಜ್ ತಕ್‌’ ಸುದ್ದಿಮಾಧ್ಯಮದ ಪ್ರಧಾನ ಸಂಪಾದಕ, ನಿರೂಪಕ ಸುಧೀರ್‌ ಚೌಧರಿ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಈ ಸುಳ್ಳು ಸುದ್ದಿ ಹರಡಿದವರ ಪೈಕಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ, ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಅವರ ಹೆಸರು ಮುಂಚೂಣಿಯಲ್ಲಿದೆ.

ಸೆಪ್ಟೆಂಬರ್‌ 8ರಂದು ತೇಜಸ್ವಿ ಸೂರ್ಯ ಅವರು ಕೋಮುವಾದಿ ಆಯಾಮದೊಂದಿಗೆ ತಪ್ಪು ಮಾಹಿತಿಯನ್ನು ಎಕ್ಸ್‌ (ಟ್ವಿಟರ್‌) ಖಾತೆಯಲ್ಲಿ ಹಂಚಿಕೊಂಡಿದ್ದರು. ಅದರ ನಂತರದಲ್ಲಿ ‘ಆಜ್‌ ತಕ್‌’ನಲ್ಲಿ ಸುಧೀರ್‌ ಚೌಧರಿ ಕೋಮುದ್ವೇಷ ನಿರೂಪಣೆಯನ್ನು ಮಾಡಿದ್ದಾರೆ.

ಅಲ್ಪಸಂಖ್ಯಾತ, ಎಸ್‌ಸಿ/ಎಸ್‌ಟಿ ಮತ್ತು ಹಿಂದುಳಿದ ವರ್ಗಗಳ ಸಮುದಾಯಗಳಿಗಾಗಿ ರೂಪಿಸಲಾಗಿರುವ ವಾಣಿಜ್ಯ ವಾಹನ ಸಬ್ಸಿಡಿ ಯೋಜನೆಯ ಬಗ್ಗೆ ತಪ್ಪು ಮಾಹಿತಿ ಹರಡಿದ ಚೌಧರಿ ಮತ್ತು ‘ಆಜ್ ತಕ್’ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 505, 153ಎ ಅಡಿಯಲ್ಲಿ ಎಫ್‌ಐಆರ್‌ ಆಗಿದೆ. ಆದರೆ ಸುಧೀರ್‌ ಚೌಧರಿಯವರಿಗಿಂತ ಮೊದಲೇ ತೇಜಸ್ವಿ ಸೂರ್ಯ ಈ ಸಂಬಂಧ ಸುಳ್ಳುಸುದ್ದಿ ಹರಡಿರುವುದು ಚರ್ಚೆಗೆ ಬಂದಿದೆ.

Advertisements

ಸುಧೀರ್‌ ಚೌಧರಿ ಪ್ರಸಾರ ಮಾಡಿದ್ದೇನು?

ವಾಣಿಜ್ಯ ವಾಹನಗಳ ಖರೀದಿಗಾಗಿ 4.5 ಲಕ್ಷ ರೂ.ಗಿಂತ ಕಡಿಮೆ ಆದಾಯವನ್ನು ಹೊಂದಿರುವ ಅಲ್ಪಸಂಖ್ಯಾತ ಕುಟುಂಬದ ಜನರಿಗೆ ಶೇಕಡಾ 50 ಅಥವಾ 3 ಲಕ್ಷದವರೆಗೆ ಸಬ್ಸಿಡಿ ನೀಡುವ ಸಂಬಂಧ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಜಾಹೀರಾತು ನೀಡಿತ್ತು. ಆದರೆ ಈ ಯೋಜನೆಯಲ್ಲಿ ಹಿಂದೂಗಳನ್ನು ಒಳಗೊಳ್ಳಲಾಗಿಲ್ಲ ಎಂದು ಸೆಪ್ಟೆಂಬರ್ 11 ರಂದು ಚೌಧರಿ ತಮ್ಮ ಕಾರ್ಯಕ್ರಮದಲ್ಲಿ ಆರೋಪಿಸಿದ್ದರು.

ಹಿಂದೂಗಳಿಗೆ ಈ ರೀತಿಯ ಯೋಜನೆ ಇಲ್ಲ ಎಂಬುದು ಸುಳ್ಳು ಮಾಹಿತಿಯಾಗಿತ್ತು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳಿಗೂ ಸರ್ಕಾರ ಸೌಲಭ್ಯವನ್ನು ನೀಡುತ್ತಿದೆ. ಪರಿಶಿಷ್ಟ ಸಮುದಾಯಕ್ಕೆ ಶೇ. 75ರಷ್ಟು ಸಬ್ಸಿಡಿಯನ್ನು ನೀಡಲಾಗುತ್ತಿದೆ. ಡಾ.ಅಂಬೇಡ್ಕರ್ ಅಭಿವೃದ್ಧಿ ನಿಗಮದ ವತಿಯಿಂದ ಐರಾವತ ಯೋಜನೆಯಡಿಯಲ್ಲಿ ಎಸ್‌ಸಿ/ಎಸ್‌ಟಿ ಸಮುದಾಯಕ್ಕೆ ನೆರವು ನೀಡಲಾಗುತ್ತದೆ. ರಾಜ್ಯ ಸರ್ಕಾರದಿಂದ ಹಿಂದುಳಿದ ಸಮುದಾಯಗಳೂ ಇಂತಹ ಸವಲತ್ತನ್ನು ಪಡೆಯುತ್ತವೆ. ವಿವಿಧ ನಿಗಮಗಳು ವಿವಿಧ ಸಮುದಾಯಗಳಿಗೆ ಸಂಬಂಧಿಸಿದಂತೆ ಇಂತಹ ಕಾರ್ಯಕ್ರಮಗಳನ್ನು ರೂಪಿಸುವುದನ್ನು ಕಾಣಬಹುದು.

ಸೋಮವಾರ ರಾತ್ರಿ ‘ಆಜ್ ತಕ್’ನಲ್ಲಿ ಮಾತನಾಡಿದ್ದ ಚೌಧರಿ, “ಕರ್ನಾಟಕ ಸರ್ಕಾರ ಹೇಳುತ್ತಿರುವುದೇನು? ನೀವು ಅತ್ಯಂತ ಬಡವರಾಗಿದ್ದರೂ ಮತ್ತು ಹಣವಿಲ್ಲದಿದ್ದರೂ ನೀವು ಹಿಂದೂ ಆಗಿದ್ದರೆ ವಾಹನ ಖರೀದಿಸಲು ಯಾವುದೇ ಸಬ್ಸಿಡಿ ನೀಡುವುದಿಲ್ಲ. ಆದರೆ ಮುಸ್ಲಿಂ, ಸಿಖ್, ಬೌದ್ಧರು ಮಾತ್ರ ವಾಹನಗಳನ್ನು ಖರೀದಿಸಲು ಸಬ್ಸಿಡಿ ಪಡೆಯುತ್ತಾರೆ” ಎಂದಿದ್ದರು. ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರಿಗೆ ಮಾತ್ರ ಸಹಕಾರ ನೀಡುತ್ತಿದೆ ಎಂದು ನರೇಟಿವ್‌ ಕಟ್ಟಿದ್ದರು.

ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಅಷ್ಟೇ ಅಲ್ಲದೆ ದೇವರಾಜ ಅರಸು ಅಭಿವೃದ್ಧಿ ನಿಗಮ, ಅಂಬೇಡ್ಕರ್ ಅಭಿವೃದ್ಧಿ ನಿಗಮ, ವಾಲ್ಮೀಕಿ ಅಭಿವೃದ್ಧಿ ನಿಗಮ, ಆದಿ ಜಾಂಬವ ಅಭಿವೃದ್ಧಿ ನಿಗಮದಲ್ಲೂ ಇಂತಹ ಕಾರ್ಯಕ್ರಮಗಳಿವೆ. ಅಲ್ಪಸಂಖ್ಯಾತ ಸಮುದಾಯ ಅಷ್ಟೇ ಅಲ್ಲದೆ ಹಿಂದುಳಿದ, ಪರಿಶಿಷ್ಟ ಜಾತಿ ಮತ್ತು ಪಂಗಡದವರು ಸೇರಿ ಹಿಂದೂ ಸಮುದಾಯದ ನಿರುದ್ಯೋಗಿ ಯುವಕರಿಗೂ ಈ ಸಾಲ ಸೌಲಭ್ಯವಿದೆ. ಈ ಯೋಜನೆ ಈಗಿನ ಕಾಂಗ್ರೆಸ್ ಸರ್ಕಾರದಲ್ಲಿ ಜಾರಿ ಮಾಡಿದ್ದಲ್ಲ, ಹಿಂದಿನ ಬಿಜೆಪಿ ಸರ್ಕಾರದಲ್ಲೇ ಜಾರಿಯಲ್ಲಿತ್ತು.

ಇದನ್ನೂ ಓದಿರಿ: ಎಫ್ಐಆರ್ ದಾಖಲಾಗುತ್ತಿದ್ದಂತೆ ವಿಡಿಯೋ ‘ಡಿಲೀಟ್’ ಮಾಡಿದ ‘ಆಜ್‌ ತಕ್’, ಸುಧೀರ್ ಚೌಧರಿ

ತೇಜಸ್ವಿ ಸೂರ್ಯ ಅವರು ಸೆಪ್ಟೆಂಬರ್‌ 8ರಂದು ಮಾಡಿರುವ ಟ್ವೀಟ್‌ನಲ್ಲಿ ಇದೇ ರೀತಿಯ ಕೋಮು ಆಯಾಮವನ್ನು ತಳಕು ಹಾಕಲಾಗಿತ್ತು. “ಕಾಂಗ್ರೆಸ್‌ ಬಿಟ್ಟಿಭಾಗ್ಯಗಳಿಗಾಗಿ ಮಾರ್ಗದರ್ಶನ ಮೌಲ್ಯವನ್ನು 30% ಹೆಚ್ಚಿಸುತ್ತಿದೆ, ವಿದ್ಯುತ್ ಶುಲ್ಕವನ್ನು ದ್ವಿಗುಣಗೊಳಿಸಿದೆ, ಅಬಕಾರಿ ಸುಂಕ, ಹಾಲಿನ ಬೆಲೆ, ರಸ್ತೆ ತೆರಿಗೆ ಹೆಚ್ಚಿದೆ. 5% ಸೆಸ್ ಅನ್ನು ಹೊರತೆಗೆಯಲು ಯೋಜಿಸಲಾಗಿದೆ. ಈಗ ನಿರ್ದಿಷ್ಟವಾಗಿ ಅಲ್ಪಸಂಖ್ಯಾತರಿಗಾಗಿ ವಿನ್ಯಾಸಗೊಳಿಸಲಾದ ‘ಧರ್ಮ ಉದ್ದೇಶಿತ ಯೋಜನೆ’ಗೆ ಕರ್ನಾಟಕದ ಮಧ್ಯಮ ವರ್ಗದವರು ನಿಧಿ ನೀಡಬೇಕಾಗಿದೆ. ವಾಹನಗಳನ್ನು ಖರೀದಿಸಲು ₹ 3 ಲಕ್ಷ ರೂ.ಗಳನ್ನು ಇದಕ್ಕೆ ಸಬ್ಸಿಡಿಯಾಗಿ ನೀಡಲಾಗುತ್ತಿದೆ” ಎಂದಿದ್ದರು ತೇಜಸ್ವಿ ಸೂರ್ಯ.

“ಕರ್ನಾಟಕದ ಮಧ್ಯಮ ವರ್ಗದ ಜನರು ’ಧಾರ್ಮಿಕ ಉದ್ದೇಶಿತ ಯೋಜನೆ’ಗೆ ನಿಧಿ ನೀಡಬೇಕಾಗಿದೆ. ಅಲ್ಪಸಂಖ್ಯಾತರಿಗೆ ಸಂಬಂಧಿಸಿರುವ ಈ ಯೋಜನೆ ವಾಹನ ಖರೀದಿಗೆ 3 ಲಕ್ಷ ರೂ.ಗಳವರೆಗೆ ಸಬ್ಸಿಡಿ ನೀಡಲಿದೆ. ಕಷ್ಟಪಟ್ಟು ದುಡಿಯುವ, ತೆರಿಗೆ ಪಾವತಿಸುವ ಮಧ್ಯಮ ವರ್ಗದ ಕುಟುಂಬಗಳನ್ನು ದುರ್ಬಲ ಮಾಡಲು, ಕಾಂಗ್ರೆಸ್ ತನ್ನ ಪ್ರಮುಖ ಮತದಾರರನ್ನು ತುಷ್ಟೀಕರಿಸಲು ಯಾವುದೇ ಹಂತಕ್ಕೆ ಬೇಕಾದರೂ ಹೋಗುತ್ತದೆ” ಎಂದು ಆರೋಪಿಸಿದ್ದರು.

ಇದನ್ನು ಆಧರಿಸಿಯೇ ‘ಆಜ್‌ ತಕ್’ ಸುದ್ದಿಮಾಧ್ಯಮ ಸುಳ್ಳುಸುದ್ದಿಯನ್ನು ಪ್ರಕಟಿಸಿದಂತೆ ಭಾಸವಾಗಿದೆ. ಸುಳ್ಳುಸುದ್ದಿಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಲು ರಾಜ್ಯ ಕಾಂಗ್ರೆಸ್ ಸರ್ಕಾರ ಯೋಚಿಸುತ್ತಿರುವ ಹೊತ್ತಿನಲ್ಲೇ ಈ ಪ್ರಕರಣ ಗಮನ ಸೆಳೆದಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ನಗರದ ವಿವಿಧ ಬಡಾವಣೆಗಳಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಅಡಿಗಲ್ಲು

ರಾಯಚೂರು ನಗರದ ವಾರ್ಡ್ ನಂ.34ರ ಬಂದೇನವಾಜ ಕಾಲೋನಿ, ದೇವರಾಜ ಅರಸ್ ಕಾಲೋನಿ,...

ಬಳ್ಳಾರಿ | ನಶಿಸಿ ಹೋಗುತ್ತಿರುವ ತೊಗಲುಗೊಂಬೆ ಪ್ರದರ್ಶನ ಉಳಿಸಿ ಬೆಳೆಸಬೇಕು: ಜೋಳದರಾಶಿ ತಿಮ್ಮಪ್ಪ

ನಶಿಸಿ ಹೋಗುತ್ತಿರುವ ತೊಗಲು ಗೊಂಬೆ ಪ್ರದರ್ಶನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ...

ಭಟ್ಕಳ | ಮಗಳ ಅಶ್ಲೀಲ ವಿಡಿಯೊ ವೈರಲ್ ಮಾಡುವುದಾಗಿ ಬೆದರಿಕೆ: ಮೂವರ ಬಂಧನ

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ನಗರದ ಕಿದ್ವಾಯಿ ರಸ್ತೆಯೊಂದರ ತರಕಾರಿ ವ್ಯಾಪಾರಿಯನ್ನು...

ಮಂಗಳೂರು | ಸ್ನಾತಕೋತ್ತರದತ್ತ ಮುಖಮಾಡದ ಪದವೀಧರರು: ಪ್ರವೇಶಾತಿ ಗಡುವು ವಿಸ್ತರಣೆ

ನಾಲ್ಕು ದಶಕಗಳಷ್ಟು ಹಳೆಯದಾದ ಮಂಗಳೂರು ವಿಶ್ವವಿದ್ಯಾಲಯ(MU), ನಿರೀಕ್ಷಿತ ಸಂಖ್ಯೆಯ ಪ್ರವೇಶಗಳನ್ನು ಪಡೆಯಲು...

Download Eedina App Android / iOS

X