ಆಘಾತಕಾರಿ ಮಾಹಿತಿಯೊಂದು ಬಯಲಾಗಿದೆ. 2023ರ ಏಪ್ರಿಲ್‌ನಿಂದ ಇಲ್ಲಿಯವರೆಗೆ 251 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸರ್ಕಾರದ ಅಧಿಕೃತ ಮೂಲಗಳು ತಿಳಿಸಿವೆ. ಬರ ಕಾಮಗಾರಿಗೆ ಸಂಬಂಧಿಸಿದಂತೆ ಹಿರಿಯ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದಲ್ಲಿ ತೀವ್ರ ಗತಿಯಲ್ಲಿ ಹೆಚ್ಚಾದ ಅನ್ನದಾತರ ಆತ್ಮಹತ್ಯೆಗಳ ಬಗ್ಗೆ ಮಾತನಾಡಿದ್ದಾರೆ. ರೈತರ ಆತ್ಮಹತ್ಯೆ ತಡೆಯುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಹಲವು ಸೂಚನೆ ನೀಡಿದ್ದಾರೆ. ಲೇವಾದೇವಿಗಾರರು ಮತ್ತು ಬ್ಯಾಂಕ್‌ಗಳ ಕಿರುಕುಳವೇ ರೈತರ ಆತ್ಮಹತ್ಯೆಗಳಿಗೆ ಮುಖ್ಯ ಕಾರಣ ಎನ್ನುವುದು ಹೊಸ ವಿಚಾರವೇನಲ್ಲ. ಸಾಲ ವಾಪಸ್ ಕೊಡಲು ವಿಫಲರಾಗಿದ್ದರಿಂದ ರೈತರು ಲೇವಾದೇವಿಗಾರರಿಂದ, ಬ್ಯಾಂಕ್‌ಗಳಿಂದ ಕಿರುಕುಳ ಅನುಭವಿಸಬೇಕಾಗಿ ಬಂದಿದೆ. ಲೇವಾದೇವಿಗಾರರನ್ನು ಮಟ್ಟ ಹಾಕುವುದು, ಸತ್ತ ರೈತರ ಕುಟುಂಬಗಳಿಗೆ ಪರಿಹಾರ ನೀಡುವುದು ತಕ್ಷಣದ ಆದ್ಯತೆಯಾಗಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. ಸರ್ಕಾರದ ಅಂಕಿಅಂಶಗಳ ಪ್ರಕಾರ, 174 ಪ್ರಕರಣಗಳನ್ನು ಮಾತ್ರ ಇದುವರೆಗೆ ಇತ್ಯರ್ಥಪಡಿಸಿ ತಲಾ ಐದು ಲಕ್ಷ ರೂಪಾಯಿ ಪರಿಹಾರ ನೀಡಲಾಗಿದೆ. ಉಳಿದ ರೈತರ ಕುಟುಂಬಗಳಿಗೆ ಇನ್ನೂ ಪರಿಹಾರದ ಹಣವೂ ಸಿಕ್ಕಿಲ್ಲ.
2022ಕ್ಕೆ ಹೋಲಿಸಿದರೆ, 2023ರಲ್ಲಿ ಕರ್ನಾಟಕದಲ್ಲಿ ರೈತರ ಆತ್ಮಹತ್ಯೆಗಳು ಕಡಿಮೆಯಾಗಿವೆ ಎಂದು ಜುಲೈ ತಿಂಗಳ ಕೊನೆಯಲ್ಲಿ ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದ್ದರು. ಆದರೆ, ಅದಕ್ಕೆ ವ್ಯತಿರಿಕ್ತವಾದ, ಬೆಚ್ಚಿಬೀಳಿಸುವಂಥ ಮಾಹಿತಿಯನ್ನು ಸರ್ಕಾರವೇ ನೀಡಿದೆ. ಕರ್ನಾಟಕದಲ್ಲಿ 2018ರಿಂದ 2023ರ ಫೆಬ್ರವರಿವರೆಗೆ 4,257 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಆಗಿನ ಕೃಷಿ ಸಚಿವ ಬಿ ಸಿ ಪಾಟೀಲ್ ಮತ್ತು ಕಂದಾಯ ಸಚಿವ ಆರ್ ಅಶೋಕ್ ಬಜೆಟ್ ಅಧಿವೇಶನದಲ್ಲಿ ತಿಳಿಸಿದ್ದರು. ಅದು ನಿಜವೇ ಎನ್ನುವ ಅನುಮಾನ ಕೆಲವರಲ್ಲಾದರೂ ಆಗ ಹುಟ್ಟಿಕೊಂಡಿತ್ತು. ಈಗ ನಡೆಯುತ್ತಿರುವ ಆತ್ಮಹತ್ಯೆಗಳ ಸಂಖ್ಯೆ ನೋಡಿದರೆ, ನಿಜಕ್ಕೂ ಗಾಬರಿ ಹುಟ್ಟುವಂತಿದೆ.
ರಾಜ್ಯದಲ್ಲಿ ಈ ಬಾರಿ ಮಳೆ ಕೊರತೆ ತೀವ್ರವಾಗಿದೆ. 161 ತಾಲ್ಲೂಕುಗಳಲ್ಲಿ ತೀವ್ರ ಬರಗಾಲದ ಪರಿಸ್ಥಿತಿ ಇದೆ ಎಂದು ಬೆಳೆ ಸಮೀಕ್ಷೆ ವರದಿ ಹೇಳುತ್ತಿದೆ. ಸಾವಿರಾರು ರೂಪಾಯಿ ಸಾಲ ಮಾಡಿ ಬಿತ್ತನೆ ಕಾರ್ಯ ಮುಗಿಸಿರುವ ರೈತರು ಮುಗಿಲ ಕಡೆ ನೋಡುತ್ತಾ ನಿಟ್ಟುಸಿರು ಚೆಲ್ಲುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಕೃಷಿ ಕಾರ್ಯ ದುಬಾರಿಯಾಗುತ್ತಿದೆ. ಆದರೆ, ಆದಾಯ ಮಾತ್ರ ತೀವ್ರವಾಗಿ ಕುಸಿಯುತ್ತಿದೆ. ರೈತರ ಆದಾಯವನ್ನು ದ್ವಿಗುಣಗೊಳಿಸುವುದಾಗಿ ಪ್ರಧಾನಿ ಮೋದಿ ನೀಡಿದ್ದ ಭರವಸೆ ಸುಳ್ಳಾಗಿದೆ. ಕೇಂದ್ರ ಸರ್ಕಾರ ತನಗೆ ಅಗತ್ಯ ಬಿದ್ದಾಗಲಷ್ಟೇ ರೈತರ ಹೆಸರು ಜಪಿಸುತ್ತದೆ. ಆದರೆ, ಉದ್ಯಮಿಗಳಿಗೆ ಸಕಲ ವಿನಾಯ್ತಿ, ಸಬ್ಸಿಡಿ ನೀಡುತ್ತಿದೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ರೈತರ ಬದುಕು ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ. ಮೋದಿಯವರ ಆಡಳಿತದಲ್ಲಿ ಕೃಷಿಯ ಬೆಳವಣಿಗೆ ದರ ಶೇ.3.47 ಇದ್ದು, ರೈತರ ಆದಾಯ ದ್ವಿಗುಣಗೊಳ್ಳಬೇಕಾದರೆ, ಕೃಷಿಯ ಬೆಳವಣಿಗೆ ದರ ಶೇ.10.4ರಷ್ಟಿರಬೇಕು. ಹೀಗಾಗಿ ರೈತರ ಆದಾಯ ದ್ವಿಗುಣಗೊಳ್ಳುವುದು ದೂರದ ಕನಸು.
ರೈತರ ಆತ್ಮಹತ್ಯೆಗಳಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. ಕರ್ನಾಟಕದಲ್ಲಿ ನೀರಾವರಿ ಪ್ರದೇಶಗಳಾದ ಮೈಸೂರು ಮತ್ತು ಬೆಳಗಾವಿ ರೈತರ ಆತ್ಮಹತ್ಯೆಗಳಲ್ಲಿ ಅಗ್ರಸ್ಥಾನದಲ್ಲಿವೆ. ಹಾವೇರಿ, ಧಾರವಾಡ, ಚಿಕ್ಕಮಗಳೂರು, ಯಾದಗಿರಿ, ಹಾಸನ ಜಿಲ್ಲೆಗಳಲ್ಲೂ ಅತಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ವಾಣಿಜ್ಯ ಬೆಳೆಗಳನ್ನು ಬೆಳೆಯುವ ರೈತರೇ ಹೆಚ್ಚಾಗಿ ಸಾಲದ ಸುಳಿಗೆ ಸಿಲುಕಿ ನೇಣಿಗೆ ಕೊರಳೊಡ್ಡುತ್ತಿದ್ದಾರೆ.
ರಾಜ್ಯದಲ್ಲಿ ಅನ್ನದಾತರ ಸ್ಥಿತಿ ಆತಂಕಕಾರಿಯಾಗಿದ್ದರೂ ಕೆಲವು ಉದ್ಧಟ ಮಂತ್ರಿಗಳು ರೈತರ ಆತ್ಮಹತ್ಯೆ ಬಗ್ಗೆ ಅಸೂಕ್ಷ್ಮವಾದ ಮಾತುಗಳನ್ನು ಆಡುತ್ತಿದ್ದಾರೆ. ಇತ್ತೀಚೆಗೆ ತಾನೇ ಸಕ್ಕರೆ ಹಾಗೂ ಎಪಿಎಂಸಿ ಸಚಿವ ಶಿವಾನಂದ ಪಾಟೀಲ, ಪರಿಹಾರದ ಆಸೆಯಿಂದ ರೈತರ ಆತ್ಮಹತ್ಯೆಗಳು ಹೆಚ್ಚಾಗಿವೆ ಎಂದಿದ್ದರು. ಅದಕ್ಕೆ ಸೂಕ್ತ ಪ್ರತಿಕ್ರಿಯೆ ನೀಡಿದ್ದ ರೈತ ಮುಖಂಡರು, ನಾವು ಅವರಿಗೆ 10 ಲಕ್ಷ ರೂಪಾಯಿ ಪರಿಹಾರ ಕೊಡುತ್ತೇವೆ. ಶಿವಾನಂದ ಪಾಟೀಲರು ಆತ್ಮಹತ್ಯೆ ಮಾಡಿಕೊಳ್ಳಲಿ ಎಂದು ಸವಾಲು ಹಾಕಿದ್ದರು. ಅಂಥದ್ದೇ ಮಾತುಗಳನ್ನು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಕೂಡ ಹೇಳಿದ್ದರು. ಇದು ಈ ಮಂತ್ರಿಗಳ ಅಜ್ಞಾನ ಮತ್ತು ರೈತರ ಬಗೆಗಿನ ತಿರಸ್ಕಾರವನ್ನು ತೋರುತ್ತದೆಯಷ್ಟೇ ಹೊರತು ಬೇರೇನಲ್ಲ. ಇಂಥ ಸಚಿವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಕ್ತ ರೀತಿಯಲ್ಲಿ ಬುದ್ಧಿ ಹೇಳಬೇಕಾಗಿದೆ.
ಪ್ರತಿಯೊಂದು ಜೀವವೂ ಅಮೂಲ್ಯ. ಅದರಲ್ಲೂ ತಾವು ಅರೆಹೊಟ್ಟೆಯಲ್ಲಿದ್ದರೂ ದೇಶದ ಕಣಜ ತುಂಬುವ ರೈತರು ಬದುಕಲಾಗದೇ ಆತ್ಮಹತ್ಯೆ ಮಾಡಿಕೊಳ್ಳುವುದು ಅತ್ಯಂತ ದಾರುಣವಾದ ಸಂಗತಿ. ರೈತರ ಆತ್ಮಹತ್ಯೆಗಳ ಬಗ್ಗೆ ಸಿದ್ದರಾಮಯ್ಯ ಸರ್ಕಾರವು ತುರ್ತು ಗಮನ ಹರಿಸಬೇಕಾಗಿದೆ. ರೈತರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು. ಅದು ಸರಿಯಾಗಿ ರೈತರನ್ನು ತಲುಪುವಂತೆ ನೋಡಿಕೊಳ್ಳಬೇಕು. ಅದಕ್ಕಿಂತ ಮುಖ್ಯವಾಗಿ, ಬದುಕಿನ ಮೇಲೆ ಭರವಸೆ ಕಳೆದುಕೊಳ್ಳುತ್ತಿರುವ ರೈತರಿಗೆ ಒಂದಿಷ್ಟು ಜೀವನ ಪ್ರೀತಿ ಹಂಚುವ ಕಾರ್ಯವಾಗಬೇಕಿದೆ. ಈ ವಿಚಾರದಲ್ಲಿ ಸಂಘ ಸಂಸ್ಥೆಗಳು ಕೂಡ ಸರ್ಕಾರದೊಂದಿಗೆ ಕೈ ಜೋಡಿಸಬೇಕಿದೆ.