ಯುವಜನರಲ್ಲಿ ಸಾಮಾಜಿಕ ಅರಿವು, ಸರ್ವತೋಮುಖ ಸಬಲೀಕರಣಕ್ಕೆ ತೊಡಗಿಸಿಕೊಂಡಿರುವ ಸಂವಾದ ಸಂಸ್ಥೆ ಸ್ಥಾಪನೆಗೊಂಡು 30 ವರ್ಷ ಕಳೆದಿದೆ. ಈ ಹಿನ್ನೆಲೆಯಲ್ಲಿ ಸಂವಾದ ಬಳಗದಿಂದ ಸೆಪ್ಟೆಂಬರ್ 15ರಂದು ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ ಅರಮನೆ ರಸ್ತೆಯ ಭಾರತ್ ಸೈಟ್ಸ್ ಅಂಡ್ ಗೈಡ್ಸ್ ಸಭಾಂಗಣದಲ್ಲಿ 30 ವರ್ಷದ ಸಂವಾದ ಸಂಭ್ರಮಾಚರಣೆಯ, ‘ಯುವನಡೆ’ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದೆ.
ಸಂವಾದವು 1992ರಲ್ಲಿ ಟ್ರಸ್ಟ್ ಆಗಿ ನೋಂದಣಿಯಾಗಿ ಹಲವು ಕಾರ್ಯಕ್ರಮಗಳ ಮೂಲಕ ಕಾರ್ಯನಿರ್ವಹಿಸುತ್ತಿರುವ ಈ ಸಂಸ್ಥೆಯು ಯುವಜನರಲ್ಲಿ ಸಾಮಾಜಿಕ ಸಂವೇದನಾಶೀಲತೆಯನ್ನು ಬೆಳೆಸಿ, ಅವರನ್ನು ಸಾಮಾಜಿಕ ಬದಲಾವಣೆಯ ಕಡೆಗೆ ಕ್ರಿಯಾಶೀಲರನ್ನಾಗಿಸುತ್ತಿರುವ, ಯುವ ಸಬಲೀಕರಣದಲ್ಲಿ ತೊಡಗಿಸಿಕೊಂಡಿರುವ ಹಾಗೂ ಸ್ವಯಂ ಸೇವಾ ನೆಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಣ ಸಂಸ್ಥೆಯಾಗಿದೆ.
“ಕಾರ್ಯಕ್ರಮದಲ್ಲಿ ಯುವಜನ ಸಬಲೀಕರಣ ಸಚಿವ ಬಿ ನಾಗೇಂದ್ರ, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಡಾ ಉಮಾಮಹಾದೇವನ್, ಮಾನವ ಹಕ್ಕುಗಳ ಹೋರಾಟಗಾರ ಬೆಜವಾಡ ವಿಲ್ಸನ್, ಡಾ ಸಬೀಹಾ ಭೂಮಿಗೌಡ, ಅಂಬಣ್ಣ ಅರೋಲಿಕರ್, ಶಾರದಾ ಗೋಪಾಲ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಯುವಜನ ಹಕ್ಕುಗಳು ಮತ್ತು ಜೀವನೋಪಾಯ ವಿಚಾರಗಳ ಬಗ್ಗೆ ಯುವಾಧಿವೇಶನ, ಗಣ್ಯರಿಂದ ಸ್ಪಂದನೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ‘ಯುವಜನ ಆಯೋಗ ಸ್ಥಾಪನೆ, ರಾಜ್ಯ ಯುವನೀತಿ ಪರಿಷ್ಕರಣೆ- ಅನುಷ್ಠಾನ, ಉದ್ಯೋಗ ಸೃಷ್ಟಿ ವಿಚಾರಗಳನ್ನು ಸಂವಾದ-ಯುವ ಮುನ್ನಡೆಯ ಕಾರ್ಯಕರ್ತರು ಮುನ್ನೆಲೆಗೆ ತರಲಿದ್ದಾರೆ” ಎಂದು ಸಂವಾದ ಬಳಗ ತಿಳಿಸಿದೆ.
ಸಂಸ್ಥೆ ಹಿನ್ನೆಲೆ: ರಾಜ್ಯದ 5 ಜಿಲ್ಲೆಗಳಲ್ಲಿ ಯುವ ಸಂಪನ್ಮೂಲ ಕೇಂದ್ರಗಳ ಮೂಲಕ ಯುವ ಸಬಲೀಕರಣಕ್ಕೆ ಕೊಡುಗೆ ನೀಡುತ್ತಿದೆ. ಕನಕಪುರ ರಸ್ತೆಯ ಬಂಜಾರಪಾಳ್ಯದಲ್ಲಿರುವ ಸಂವಾದ-ಬದುಕು ಕ್ಯಾಂಪಸ್‌ನಲ್ಲಿ ಜೀವನೋಪಾಯ ಕಲಿಕಾ ಕೇಂದ್ರದ ಮೂಲಕ ರಾಜ್ಯ ಮತ್ತು ಹೊರ ರಾಜ್ಯಗಳ ಯುವಜನರಿಗೆ, ಯುವಜನ ಕಾರ್ಯಕರ್ತರಿಗೆ ಅರಿವು, ತರಬೇತಿ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿವೆ.
ಸಹಯಾನ: ಇದು ಕರ್ನಾಟಕದ ಐದು ಜಿಲ್ಲೆಗಳಲ್ಲಿರುವ ಯುವ ಸಂಪನ್ಮೂಲ ಕೇಂದ್ರಗಳ ಮೂಲಕ ಯುವಜನ ಅರಿವು ಮತ್ತು ನಾಯಕತ್ವ ತರಬೇತಿ ನೀಡುವ, ಯುವಜನರನ್ನು ನಾಗರಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅನುವು ಮಾಡಿಕೊಡುವ ಸಂವಾದದ ಒಂದು ಕಾರ್ಯಕ್ರಮ.
ಈ ಸುದ್ದಿ ಓದಿದ್ದೀರಾ? ದಕ್ಷಿಣ ಕನ್ನಡ | ಬಸ್ ಮಾಲೀಕರಿಂದ ಜಾಗೃತಿ ಅಭಿಯಾನ; ಮೆಟ್ಟಿಲುಗಳ ಮೇಲೆ ನಿಲ್ಲದಂತೆ ಸಲಹೆ
ಬದುಕು ಸೆಂಟರ್ ಫಾರ್ ಲೈವ್ಲಿಹುಡ್ಸ್ ಲರ್ನಿಂಗ್: ಸಾಮಾಜಿಕ ಅಗತ್ಯತೆಗಳನ್ನು ಮತ್ತು ಸುಸ್ಥಿರತೆಯನ್ನು ಗಮನದಲ್ಲಿರಿಸಿಕೊಂಡು ನಾನಾ ಕೋರ್ಸುಗಳ ಮುಖೇನ ಪರಿಸರ ಮತ್ತು ಜನಪರವಾದ ವೃತ್ತಿ-ಜೀವನೋಪಾಯ ಕೌಶಲ್ಯಗಳನ್ನು ಕಲಿಸುತ್ತಿರುವ ಸಂವಾದದ ಜೀವನೋಪಾಯ ಕಲಿಕಾ ಕೇಂದ್ರ. ಕಣಜ ಸಂಶೋಧನೆ ಮತ್ತು ಯುವಜನ ಹಕ್ಕುಗಳ ವಕಾಲತ್ತಿನ ಕೇಂದ್ರವು ಯುವಜನ ಸಂಬಂಧಿತ ಸಂಶೋಧನೆ ಕೈಗೊಳ್ಳುವ ಹಾಗೂ ಯುವಜನ ಹಕ್ಕುಗಳ ಅರಿವು ಮೂಡಿಸಿ ವಕಾಲತ್ತು ವಹಿಸುವ ಕಾರ್ಯದಲ್ಲಿ ನಿರತವಾಗಿದೆ.
ಯುವ್ಯಾನ್ ಕೇಂದ್ರ: ಕರ್ನಾಟಕ ಮತ್ತು ಭಾರತದ ಯುವಜನ ಕೇಂದ್ರಿತ ಸಂಸ್ಥೆಗಳು ಮತ್ತು ಕಾರ್ಯಕರ್ತರಿಗೆ ವೃತ್ತಿಪರ ಯುವಜನ ಕಾರ್ಯದ ತರಬೇತಿ ಕೋರ್ಸ್‌ಗಳ ಮೂಲಕ ತರಬೇತಿ ನೀಡಿ ಯುವಜನ ಕಾರ್ಯ ಸಹಯೋಗದ ಮೂಲಕ ಯುವಜನ ಕಾರ್ಯ ವಿಸ್ತರಣೆಗಾಗಿ ಕೆಲಸ ಮಾಡುತ್ತಿದೆ.