ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕನ್ನು ಬರಪೀಡಿತವೆಂದು ಘೋಷಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಕರೆಗೆ ₹50,000 ಬರಗಾಲ ಪರಿಹಾರ ನೀಡಬೇಕು ಹಾಗೂ ರೈತರ ಹಲವು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಕರ್ನಾಟಕ ರೈತ ಸಂಘ ಸೇರಿದಂತೆ ಹಲವು ಸಂಘಟನೆಗಳ ಕಾರ್ಯಕರ್ತರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಕುಂದಗೋಳವನ್ನು ಸಂಪೂರ್ಣ ಬಂದ್ ಮಾಡುವ ಮೂಲಕ ಪಟ್ಟಣದ ಗಾಳಿಕರೆಮ್ಮ ದೇವಸ್ಥಾನದ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. “2019 ರಿಂದ 2023 ನೇ ಸಾಲಿನ ಬೆಳೆವಿಮೆ ಬರುವಂತೆ ಮಾಡಬೇಕು. ರೈತರ ಕೃಷಿ ಪಂಪಸೆಟ್‌ಗಳಿಗೆ ಹಗಲಿನಲ್ಲಿ 10 ತಾಸು ಸಮರ್ಪಕ ವಿದ್ಯುತ್ ಪೂರೈಸಬೇಕು. ರಾಷ್ಟ್ರೀಕೃತ ಬ್ಯಾಂಕ್, ಸಹಕಾರಿ ಸಂಘ, ರೈತರ ಬ್ಯಾಂಕ್ ಸಾಲಮನ್ನಾ, ಮದ್ಯಂತರ ಬೆಳೆವಿಮೆ ಘೋಷಣೆ, ರೈತರು, ಕೂಲಿ ಕಾರ್ಮಿಕರು ಅಪಘಾತಕ್ಕೀಡಾದರೆ 25 ಲಕ್ಷ ರೂ. ಪರಿಹಾರ ಧನ ಕೊಡಬೇಕು” ಎಂದು ಒತ್ತಾಯಿಸಿದರು.
“ನಮ್ಮ ಹೊಲ-ನಮ್ಮ ದಾರಿ ಯೋಜನೆಯಲ್ಲಿ ಅನುದಾನ ನೀಡಿ ದುರಸ್ತಿ ಮಾಡಬೇಕು. ಕುಂದಗೋಳ ತಾಲೂಕಿನ ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿ ಮಾಡಿ ಚಾಲನೆ ನೀಡಬೇಕು. ಬೆಣ್ಣೆಹಳ್ಳದ ಹೂಳೆತ್ತುವುದು ಮತ್ತು ತಡೆಗೋಡೆ ನಿರ್ಮಾಣ ಮಾಡಬೇಕು. ಕುಂದಗೋಳ ತಾಲೂಕಿನ ಸಂಶಿ ಗ್ರಾಮದ ಕೃಷಿ ಉತ್ಪನ್ನ ಮಾರುಕಟ್ಟೆ ಉಗ್ರಾಣವನ್ನು ರೈತರಿಗೆ ದಾಸ್ತಾನು ಸಂಗ್ರಹಿಸಿಟ್ಟುಕೊಳ್ಳಲು ಅನುವು ಮಾಡಿಕೊಡಬೇಕು. ವಿವಿಧ ಇಲಾಖೆಗಳಲ್ಲಿ ಭ್ರಷ್ಟಾಚಾರವು ಎಗ್ಗಿಲ್ಲದಂತೆ ನಡೆಯುತ್ತಿದೆ. ಅದನ್ನು ನಿರ್ಮೂಲನೆ ಮಾಡಿ ಅಧಿಕಾರಿಗಳ ಮೇಲೆ ಸೂಕ್ತ ಕ್ರಮಕೈಗೊಳ್ಳಬೇಕು” ಎಂದು ಪ್ರತಿಭಟನೆಯ ಮೂಲಕ ಸರ್ಕಾರಕ್ಕೆ ಆಗ್ರಹಿಸಿದರು.
ಕುಂದಗೋಳ ತಾಲೂಕ ಬರಪೀಡಿತವೆಂದು ಘೋಷಿಸಿ ಕೇಂದ್ರ/ರಾಜ್ಯ ಸರ್ಕಾರ ಎಕರೆಗೆ 50 ಸಾವಿರ ರೂ. ಬರಗಾಲ ಪರಿಹಾರ ಕೊಡಬೇಕು. ರೈತರು ಸಾಲ-ಸೋಲ ಮಾಡಿ ಬೀಜ ಗೊಬ್ಬರವನ್ನು ಭೂಮಿಗೆ ಹಾಕಿ ಮುಂಗಾರು ಮಳೆ ಬಾರದೆ ಇರುವ ಕಾರಣ ಮೊಳಕೆಯೊಡೆದ ಬೀಜ ಬೆಳೆಯದೆ ಭೂಮಿಯಲ್ಲೇ ಕಮರಿಹೋಗಿದೆ. ಹಾಗಾಗಿ ರೈತನ ಬದುಕು ಚಿಂತಾಜನಕವಾಗಿದೆ. ಮಾಡಿದ ಸಾಲ ತೀರಿಸದೆ ರೈತ ರೋಸಿ ಹೋಗಿದ್ದಾನೆ. ಮುಂಗಾರಿನ ಬೆಳೆವಿಮೆ ಕಟ್ಟಿದರೂ, ಬೆಳೆ ನಾಶವಾದರೂ ಮಧ್ಯಂತರ ಬೆಳೆವಿಮೆ ಬಂದಿಲ್ಲ. ತಕ್ಷಣ ಬೆಳೆವಿಮೆ ಜಾರಿಗೊಳಿಸಬೇಕು” ಎಂದು ಒತ್ತಾಯಿಸಿದರು.
“ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಹಗಲಿನಲ್ಲಿ 10 ತಾಸು ಸಮರ್ಪಕ ತ್ರೀಫ್ಯೂಸ್ ವಿದ್ಯುತ್ ಪೂರೈಸಬೇಕು. ರಾಜ್ಯ ಸರ್ಕಾರ ರೈತರ ಪಂಪ್‌ಸೆಟ್‌ಗೆ ಮೀಟರ್ ಅಳವಡಿಕೆಯ ನಿರ್ಣಯವನ್ನು ಕೂಡಲೇ ಕೈಬಿಡಬೇಕು. ವಿದ್ಯುತ್ ಕಂಬಗಳು ಹೊಲ-ಗದ್ದೆಗಳಲ್ಲಿ ಬಾಗಿ ಬೀಳುವಂತಾಗಿದ್ದು, ಹೆಸ್ಕಾಂ ಅಧಿಕಾರಿಗಳು ಇತ್ತ ಗಮನಕೊಟ್ಟು ವಿದ್ಯುತ್ ಕಂಬಗಳನ್ನು ಸರಿಪಡಿಸಬೇಕು” ಎಂದರು.
“ರಾಷ್ಟ್ರೀಕೃತ ಬ್ಯಾಂಕ್, ಸಹಕಾರಿ ಸಂಘ ರೈತರ ಬ್ಯಾಂಕ್ ಸಾಲ ಮನ್ನಾ, ರೈತರು ಬ್ಯಾಂಕಿನಲ್ಲಿ ಸಾಲ ತೆಗೆದುಕೊಂಡು ಸರಿಯಾಗಿ ಬೆಳೆ ಬಾರದೆ ಬ್ಯಾಂಕಿನ ಸಾಲ ಕಟ್ಟಲಾಗದೆ ರೈತರಿಗೆ ಬ್ಯಾಂಕಿನವರು ನೊಟೀಸ್ ಕಳಿಸುತ್ತಿದ್ದಾರೆ. ಅಲ್ಲಿ ಇಲ್ಲಿ ಸಾಲ-ಸೋಲ ಮಾಡಿ ರೈತರು ಬ್ಯಾಂಕಿಗೆ ಕಟ್ಟಲು ಹೋದರೆ ಓಟಿಎಸ್ ಮಾಡಿರುತ್ತೇವೆ ನಿಗದಿ ಮಾಡಿದ ಮೊತ್ತವನ್ನು ಕಟ್ಟಿ ಮರು ಸಾಲ ಕೇಳಬೇಡಿ ಅಂತ ರೈತರಿಗೆ ಹೇಳುತ್ತಾರೆ. ಖಾತೆ ಬದಲಾವಣೆ ಮಾಡಿಕೊಂಡು ಬನ್ನಿ ಅಂತ ಹಾರಿಕೆ ಉತ್ತರ ಬ್ಯಾಂಕಿನ ಅಧಿಕಾರಿಗಳು ಹೇಳುತ್ತಿದ್ದಾರೆ. ಖಾತೆಗೆ ಬಂದಂತಹ ಸಹಾಯಧನವನ್ನು ಖಾತೆಯನ್ನು ಬ್ಲಾಕ್ ಮಾಡುತ್ತಿದ್ದಾರೆ. ಅಂತಹ ಬ್ಯಾಂಕ್ ಅಧಿಕಾರಿಗಳನ್ನು ಅಮಾನತು ಮಾಡಬೇಕು. ಬಂದಂತಹ ಹಣವನ್ನು ಖಾತೆದಾರರಿಗೆ ಕೋಡಬೇಕು. ಆದ ಕಾರಣ ಕೇಂದ್ರ/ರಾಜ್ಯ ಸರ್ಕಾರ ಈ ನಾಡಿನ ಒಡೆಯ ಮಣ್ಣಿನ ಮಗ ಸಾಲಕ್ಕಾಗಿ ಕಣ್ಣೀರಿಡುತ್ತಿದ್ದು ಕೇಂದ್ರ/ರಾಜ್ಯದಲ್ಲಿ ರೈತನ ಕಂಬನಿಗೆ ಬೆಲೆ ಕೊಟ್ಟು ರೈತನ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು” ಎಂದು ಒತ್ತಾಯಿಸಿದರು.
“ನಮ್ಮ ಹೊಲ-ನಮ್ಮದಾರಿ ಯೋಜನೆಯಲ್ಲಿ ಅನುದಾನ ನೀಡಿ ರಸ್ತೆ ದುರಸ್ತಿ ಮಾಡಬೇಕು. ರೈತರು ತಮ್ಮ ತಮ್ಮ ಎತ್ತಿನಬಂಡಿ ತೆಗೆದುಕೊಂಡು ಹೋಲಕ್ಕೆ ಹೋಗಲು ಹೊಲದ ದಾರಿ ತಗ್ಗು ದಿಣ್ಣೆಗಳಿಂದ ಕೂಡಿದ್ದು ಹೊಲದಲ್ಲಿನ ಪೀಕುಗಳನ್ನು ಮನೆಗೆ ತರಲು ರೈತರಿಗೆ ತೊಂದರೆ ಆಗುತ್ತಿದೆ. ಸರ್ಕಾರದ ಈ ಯೋಜನೆ ಜಾರಿಯಲ್ಲಿದ್ದರೂ ಕೂಡ ಸರಿಯಾದ ಅನುದಾನ ಕೊಡದೆ ರಸ್ತೆ ದುರಸ್ತಿ ಮಾಡಿರುವುದಿಲ್ಲ. ಈ ಕೂಡಲೇ ಅನುದಾನ ನೀಡಿ ದುರಸ್ತಿಮಾಡಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ತಮಿಳುನಾಡಿಗೆ ನೀರು ಹರಿಸಲು ಸಾಧ್ಯವಿಲ್ಲ; ಕೇಂದ್ರ ಜಲಶಕ್ತಿ ಸಚಿವರಿಗೆ ಪತ್ರ ಬರೆದು ಸಿಎಂ ಮನವರಿಕೆ
“ಹಲವು ಇಲಾಖೆಯ ಅಧಿಕಾರಿಗಳು ದಾಖಲೆಗಳ ಕುರಿತು ರೈತರಿಗೆ ಸರಿಯಾಗಿ ಮಾಹಿತಿ ಕೊಡದೆ ಮನಬಂದಂತೆ ವರ್ತಿಸುತ್ತಿದ್ದು, ರೈತರನ್ನು ಅಲೆದಾಡಿಸುತ್ತಿದ್ದಾರೆ. ನಿಯೋಜನೆಗೊಂಡ ಇಲಾಖೆ ಅಧಿಕಾರಿಗಳನ್ನು ಆಯಾ ಕ್ಷೇತ್ರಕ್ಕೆ ಕಳಿಸಬೇಕು. ಖಾಲಿ ಇರುವ ಹುದ್ದೆಯನ್ನು ಭರ್ತಿಮಾಡಬೇಕು. ಕೂಡಲೇ ಮೇಲಧಿಕಾರಿಗಳು ಸರಿಪಡಿಸಿ ಭ್ರಷ್ಟ ಅಧಿಕಾರಿಗಳನ್ನು ಅಮಾನತು ಮಾಡಬೇಕು” ಎಂದು ಆಗ್ರಹಿಸಿದರು.
ಈ ವೇಳೆ ಕರ್ನಾಟಕ ರೈತ ಸಂಘ, ರೈತ ಸಂಘಟನೆಗಳ ಒಕ್ಕೂಟ, ಕರ್ನಾಟಕ ರಕ್ಷಣಾ ವೇದಿಕೆಯ ಬಹುತೇಕ ಕಾರ್ಯಕರ್ತರು ಇದ್ದರು.