ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಉದ್ಯಮಿ ಪೂಜಾರಿಗೆ ₹5 ಕೋಟಿ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಅಭಿನವ ಹಾಲಶ್ರೀ ಕಾರು ಚಾಲಕನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸ್ವಾಮೀಜಿ ಎಲ್ಲಿರಬಹುದು ಎಂಬ ಸುಳಿವು ಕಾರು ಚಾಲಕನಿಂದ ಸಿಗುವ ಸಾಧ್ಯತೆಯಿದೆ. ಈ ಹಿನ್ನೆಲೆ, ಕಾರು ಚಾಲಕನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
ಬೈಂದೂರು ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಉದ್ಯಮಿ ಗೋವಿಂದ ಬಾಬು ಎಂಬುವವರಿಗೆ ಚೈತ್ರಾ ಕುಂದಾಪುರ ಹಾಗೂ ಗ್ಯಾಂಗ್ ಬರೋಬ್ಬರಿ ₹5 ಕೋಟಿ ವಂಚಿಸಿತ್ತು.
ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರನ್ನು ನಂಬಿಸಲು ಈ ಗ್ಯಾಂಗ್ ಕಬಾಬ್ ಮಾರುವ ವ್ಯಕ್ತಿ, ಸಲೂನ್ ಮೇಕಪ್ ಮ್ಯಾನ್ ಹಾಗೂ ಆರ್.ಎಸ್.ಎಸ್ ಮುಖಂಡನ ವೇಷ, ಬಿಜೆಪಿ ಕೇಂದ್ರ ನಾಯಕರ ವೇಷ ತೊಡಿಸಿ ನಾಟಕವಾಡಿಸಿ ಉದ್ಯಮಿಯನ್ನು ವಂಚಿಸಿದ್ದರು ಎಂದು ತಿಳಿದುಬಂದಿದೆ.
ಈ ಸುದ್ದಿ ಓದಿದ್ದೀರಾ? ಚೈತ್ರಾ ವಂಚನೆ ಪ್ರಕರಣ | ದೂರವಾಣಿ ಸಂಭಾಷಣೆಯಲ್ಲಿ ಸುನೀಲ್ ಕುಮಾರ್ ಹೆಸರು ಪ್ರಸ್ತಾಪ
ಮನೆ ಮಾರಾಟ ಮಾಡಿ ಪರಾರಿಯಾದ ಸ್ವಾಮೀಜಿ
ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಸದ್ಯ ಸಿಸಿಬಿ ಪೊಲೀಸರು ಆರೋಪಿಗಳ ವಿಚಾರಣೆ ನಡೆಸುತ್ತಿದ್ದಾರೆ. ಕೆಲವೆಡೆ ಡೀಲ್ ಮಾಡಿದಲ್ಲಿ ಸ್ಥಳ ಮಹಜರು ಮಾಡುತ್ತಿದ್ದಾರೆ. ಹಾಗೆಯೇ ನಾಪತ್ತೆಯಾದ ಆರೋಪಿ ಅಭಿನವ ಹಾಲಶ್ರೀ ಸ್ವಾಮೀಜಿ ಬಂಧನಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಅಭಿನವ ಹಾಲಶ್ರೀ ಸ್ವಾಮೀಜಿ ಅವರಿಗೆ ಸೇರಿದ ಗೋವಿಂದರಾಜನಗರದಲ್ಲಿರುವ ಮನೆಯಲ್ಲಿ ಆರೋಪಿ ಚೈತ್ರಾ ಕುಂದಾಪುರ ಸೇರಿದಂತೆ ಇನ್ನಿತರ ಆರೋಪಿಗಳು ₹1.5 ಕೋಟಿ ಪಡೆದಿದ್ದರು ಎಂದು ಹೇಳಲಾಗುತ್ತಿದೆ.
ಮಂಗಳವಾರ ಆರೋಪಿ ಚೈತ್ರಾ ಕುಂದಾಪುರ ಬಂಧನವಾಗುತ್ತಿದ್ದಂತೆಯೇ, ಸಿಸಿಬಿ ಪೊಲೀಸರು ಮನೆಯನ್ನು ಮುಟ್ಟುಗೋಲು ಹಾಕಿಕೊಳ್ಳಬಹುದು ಎಂಬ ಸಂಶಯದಿಂದ ಸ್ವಾಮೀಜಿ ಮನೆಯನ್ನು ಮಾರಾಟ ಮಾಡಿ ತಲೆಮರೆಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಅಸಲಿಗೆ ಈ ಮನೆಯನ್ನು ಸ್ವಾಮೀಜಿ ಒಬ್ಬ ವೃದ್ಧೆಯಿಂದ ಖರೀದಿಸಿದ್ದರು ಎಂದು ಹೇಳಲಾಗಿದೆ.
ಈ ಮನೆಯ ಮುಂದೆ ನೀಲಿ ಬಣ್ಣದ ನಾಮಫಲಕ ಇಡಲಾಗಿದೆ. ಫಲಕದಲ್ಲಿ ‘ಶ್ರೀಮದ್ ವಿಭೂತಿಪುರ ವೀರಸಿಂಹಾಸನ ಸಂಸ್ಥಾನಕ್ಕೆ ಸೇರಿದ ಮನೆ’ ಎಂದು ಬರೆಯಲಾಗಿದೆ.