ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಡ್ರಗ್ಸ್ ಹಾವಳಿ ಹೆಚ್ಚಳವಾಗುತ್ತಿದೆ. ನಗರದಲ್ಲಿ ₹7.83 ಕೋಟಿ ಮೌಲ್ಯದ ಡ್ರಗ್ಸ್ ಅನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜತೆಗೆ ಮೂವರು ವಿದೇಶಿಯರು ಸೇರಿದಂತೆ 14 ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳು ಮುಂಬೈ ಸೇರಿದಂತೆ ವಿದೇಶದಿಂದ ಡ್ರಗ್ಸ್ ತರಿಸಿಕೊಂಡು ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದರು. ಪೊಲೀಸರು ನಾನಾ ಮಾದರಿಯ ಡ್ರಗ್ಸ್ ಜಪ್ತಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್, “ಬಂಧಿತರಿಂದ ವಶಪಡಿಸಿಕೊಂಡ ಡ್ರಗ್ಸ್ ಸೇರಿದಂತೆ ಇನ್ನಿತರ ಮಾದಕ ವಸ್ತುಗಳನ್ನು ನಾಶ ಪಡಿಸಲಾಗುವುದು. ವಿದ್ಯಾರಣ್ಯಪುರ, ಬನಶಂಕರಿ, ಕಾಟನ್ ಪೇಟೆ ಸೇರಿ 7 ಪ್ರಕರಣ ದಾಖಲಿಸಲಾಗಿದೆ. 14 ಜನ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಿಂದ ಒಟ್ಟು ಎಂಟು ಮಾದರಿಯ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ. ಒಟ್ಟು ₹7.83 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನ ವಶ ಪಡಿಸಿಕೊಳ್ಳಲಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಚೈತ್ರಾ ವಂಚನೆ ಪ್ರಕರಣ | ಉದ್ಯಮಿ ಪೂಜಾರಿ ವಿರುದ್ಧ ದೂರು ನೀಡಿದ್ದ ಅಭಿನವ ಹಾಲಶ್ರೀ
“ಡ್ರಗ್ಸ್ ಇದೊಂದು ಅಪಾಯಕಾರಿ ಹಾಗೂ ಕಳವಳಕಾರಿ ಅಂಶವಾಗಿದೆ. ಸಿಸಿಬಿ ಪೊಲೀಸರಿಂದ ಉತ್ತಮ ಕಾರ್ಯಾಚರಣೆ ನಡೆದಿದೆ. ನಗರದಲ್ಲಿ ಮೊದಲ ಬಾರಿಗೆ 1ಕೆಜಿ 800 ಗ್ರಾಂ ಮೆಫೆಡ್ರೌನ್ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ. ಮೆಫೆಡ್ರೌನ್ ಡ್ರಗ್ಸ್ ಅನ್ನು ಒಂದು ಗ್ರಾಂಗೆ ₹15,000ಕ್ಕೆ ಆರೋಪಿಗಳು ಮಾರಾಟ ಮಾಡುತ್ತಿದ್ದರು” ಎಂದು ತಿಳಿಸಿದರು.
“ಈ ಪ್ರಕರಣದಲ್ಲಿ ಬಂಧಿತರಾಗಿರುವ ನೈಜೀರಿಯಾ ಮೂಲದ ಫ್ರಾನ್ಸಿಸ್ ಎಂಬ ಆರೋಪಿ 2012ರಲ್ಲಿ ಭಾರತಕ್ಕೆ ಬಂದಿದ್ದನು. ಈ ವ್ಯಕ್ತಿಯ ಬಳಿ ಮೆಫೆಡ್ರೌನ್ ಜತೆಗೆ ಕೊಕೇನ್ ಮತ್ತು ಎಂಡಿಎಂಎ ಎಕ್ಸೆಟಸಿ ಪೌಡರ್ ಪತ್ತೆಯಾಗಿದೆ. ಈ ಒಬ್ಬ ಆರೋಪಿ ಬಳಿಯೇ ಮೂರು ಕೋಟಿ ಎಂಬತ್ತು ಲಕ್ಷ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ” ಎಂದು ಪೊಲೀಸ್ ಮೂಲಗಳು ತಿಳಿಸಿವೆ.