ದೇಶವು ‘ಗಂಭೀರ ಆಂತರಿಕ ಸವಾಲುಗಳನ್ನು’ ಎದುರಿಸುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ
ಹೈದರಾಬಾದ್‌ನಲ್ಲಿ ಪುನರ್ರಚಿಸಲಾದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ)ಯ ಮೊದಲ ಸಭೆಯಲ್ಲಿ ಮಾತನಾಡಿದ ಅವರು, “ಹಿಂಸಾಚಾರದ ಘಟನೆಗಳು ಪ್ರಗತಿಪರ ಮತ್ತು ಜಾತ್ಯತೀತ ಭಾರತದ ಪ್ರತಿಷ್ಠೆಗೆ ಕಳಂಕ ತರುತ್ತಿವೆ. ಬಿಜೆಪಿಯು ಇದಕ್ಕೆ ‘ಬೆಂಕಿಗೆ ಇಂಧನ’ ಸೇರಿಸುತ್ತಿದೆ” ಎಂದು ಆರೋಪಿಸಿದ್ದಾರೆ.
“ಸಮಾಜದ ವಂಚಿತ ವರ್ಗಗಳಿಗೆ ಆರೋಗ್ಯ, ಶಿಕ್ಷಣ, ಉದ್ಯೋಗ ಮತ್ತು ಆಹಾರ ಭದ್ರತೆಯ ಹಕ್ಕನ್ನು ನೀಡಲು ಜಾತಿ ಸಮೀಕ್ಷೆಯೊಂದಿಗೆ ಜನಗಣತಿ ಪ್ರಕ್ರಿಯೆಯನ್ನು ತಕ್ಷಣವೇ ಪ್ರಾರಂಭಿಸಲು ಪಕ್ಷವು ಒತ್ತಾಯಿಸುತ್ತದೆ. ಈ ವಿಚಾರದಲ್ಲಿ ಇಂಡಿಯಾ ಒಕ್ಕೂಟದ ಪಕ್ಷಗಳ ನಿಲುವು ಸ್ಪಷ್ಟವಾಗಿವೆ” ಎಂದು ಹೇಳಿದರು.
“ಮೂರು ಯಶಸ್ವಿ ಸಭೆಗಳ ನಂತರ, ಪ್ರತಿಪಕ್ಷಗಳ ಮೈತ್ರಿಯು ‘ಜನ ವಿರೋಧಿ ಮತ್ತು ಪ್ರಜಾಪ್ರಭುತ್ವ ವಿರೋಧಿ ಬಿಜೆಪಿ ಸರ್ಕಾರದ’ ವಿರುದ್ಧ ಹೋರಾಡಲು ಮುಂದಾಗುತ್ತಿದೆ. ಈ ಬೆಳವಣಿಗೆಯಿಂದ ವಿಚಲಿತರಾಗಿರುವ ಬಿಜೆಪಿಯು ವಿರೋಧ ಪಕ್ಷಗಳ ವಿರುದ್ಧ ಸೇಡಿನ ಕ್ರಮಕ್ಕೆ ಮುಂದಾಗಿದೆ” ಎಂದು ಕಾಂಗ್ರೆಸ್ ಮುಖ್ಯಸ್ಥರಾದ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ನಾವು ಯಾರನ್ನೂ ನಿಷೇಧಿಸಿಲ್ಲ, ಬಹಿಷ್ಕರಿಸಿಲ್ಲ: ‘ಇಂಡಿಯಾ’ ಒಕ್ಕೂಟದ ಮಾಧ್ಯಮ ನೀತಿ ಕುರಿತು ಕಾಂಗ್ರೆಸ್ ಸ್ಪಷ್ಟನೆ
“ಸಂಸತ್ತಿನಲ್ಲಿ ಪ್ರತಿಪಕ್ಷಗಳನ್ನು ಬಗ್ಗುಬಡಿಯಲು ಮತ್ತು ಸಾರ್ವಜನಿಕ ಪರಿಶೀಲನೆಯನ್ನು ಮೊಟಕುಗೊಳಿಸುವ ಸರ್ಕಾರದ ಪ್ರಯತ್ನಗಳನ್ನು ಪ್ರತಿಪಕ್ಷಗಳ ಇಂಡಿಯಾ ಒಕ್ಕೂಟ ತೀವ್ರವಾಗಿ ಖಂಡಿಸುತ್ತೇವೆ. ಸಂಸತ್ತಿನ ಮುಂಬರುವ ವಿಶೇಷ ಅಧಿವೇಶನವು ಆಡಳಿತ ಪಕ್ಷದ ಉದ್ದೇಶಗಳ ಬಗ್ಗೆ ಕಳವಳವನ್ನು ಉಂಟುಮಾಡುತ್ತದೆ” ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.
“ದೇಶವು ಇಂದು ಅನೇಕ ಗಂಭೀರ ಆಂತರಿಕ ಸವಾಲುಗಳನ್ನು ಎದುರಿಸುತ್ತಿದೆ. ಹಣದುಬ್ಬರ, ನಿರುದ್ಯೋಗ, ಮಣಿಪುರದಲ್ಲಿ ಉಲ್ಬಣಗೊಳ್ಳುತ್ತಿರುವ ಹಿಂಸಾಚಾರ, ಅಸಮಾನತೆಯನ್ನು ನಿಯಂತ್ರಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಸಂಪೂರ್ಣ ವಿಫಲವಾಗಿದೆ. ಇಡೀ ರಾಷ್ಟ್ರವು ಮಣಿಪುರದಲ್ಲಿ ಇನ್ನೂ ತೆರೆದುಕೊಳ್ಳುತ್ತಿರುವ ದುರಂತ ಘಟನೆಗಳಿಗೆ ಸಾಕ್ಷಿಯಾಗಿದೆ. ನರೇಂದ್ರ ಮೋದಿ ಸರ್ಕಾರವು ಮಣಿಪುರದ ಬೆಂಕಿಯು ಹರಿಯಾಣದ ನುಹ್ ಅನ್ನು ತಲುಪಲು ಅವಕಾಶ ಮಾಡಿಕೊಟ್ಟಿತು” ಎಂದು ಖರ್ಗೆ ಆರೋಪಿಸಿದರು.
“ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಸಾಮಾನ್ಯ ಜನರ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಮೂಲಕ ದೇಶದ ಆರ್ಥಿಕತೆಯು ಗಂಭೀರ ಅಪಾಯದಲ್ಲಿದೆ” ಎಂದು ಹೇಳಿದರು.