ಬರ ಪೀಡಿತ ಪ್ರದೇಶಗಳ ಪಟ್ಟಿಯಿಂದ ಬೆಳಗಾವಿ ಜಿಲ್ಲೆಯ ಎರಡು ತಾಲೂಕುಗಳನ್ನು ರಾಜ್ಯ ಸರ್ಕಾರ ಕೈಬಿಟ್ಟಿದೆ. ಸರ್ಕಾರದ ನಿರ್ಧಾರದಿಂದ ಬೆಳಗಾವಿ ಮತ್ತು ಖಾನಾಪುರ ತಾಲೂಕಿನ ರೈತರು ನಿರಾಶೆ ವ್ಯಕ್ತಪಡಿಸಿದ್ದಾರೆ. ಬರ ಪೀಡಿತ ಪ್ರದೇಶಗಳ ಪಟ್ಟಿಗೆ ಸೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.
ರಾಜ್ಯದಲ್ಲಿ ಬರ ಘೋಷಣೆಯಾದ ನಂತರ ಬೆಳೆ ಸಮೀಕ್ಷೆಯಲ್ಲಿ ತಾರತಮ್ಯವಾಗಿದೆ. ಮಳೆ ಕೊರತೆಯಿಂದ ಜಿಲ್ಲೆಯಾದ್ಯಂತ ಮಳೆಯಾಶ್ರಿತ ಬೆಳೆಗಳ ಬಿತ್ತನೆ ಕಾರ್ಯ ವಿಳಂಬವಾಗಿದೆ. ಬೆಳೆಗಳ ಬೆಳವಣಿಗೆ ಕುಂಠಿತವಾಗಿದೆ. ಇಳುವರಿಯೂ ಕಡಿಮೆಯಾಲಿದೆ. ಆದರೂ, ಬರ ಪೀಡಿತ ಪ್ರದೇಶಗಳ ಪಟ್ಟಿಗೆ ಸೇರಿಸದೇ ಇರುವುದು ರೈತ ವಿರೋಧಿ ನಡೆಯಲಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಮತ್ತು ಜಿಲ್ಲಾಡಳಿತದ ವಿರುದ್ಧ ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಭತ್ತ ಬೆಳೆಯುವ ಪ್ರದೇಶಗಳಿಗೆ ನಿರಂತರ ಮಳೆಯ ಅಗತ್ಯವಿದೆ. ಭತ್ತದ ಬೆಳೆ ನಾಟಿ ಹಂತದಿಂದ ಕೊಯ್ಲು ಮಾಡುವವರೆಗೂ ನೀರು ಬೇಕು. ಆದರೆ, ಈ ವರ್ಷ ಸಮರ್ಪಕವಾಗಿ ಮಳೆಯಾಗಿಲ್ಲ. ಅಗತ್ಯವಿರುವ ನೀರಿನ ಪ್ರಮಾಣ ಮತ್ತು ಹವಾಮಾನ ಪರಿಸ್ಥಿತಿಯನ್ನು ಪರಿಗಣಿಸದೆ ರೈತರಿಗೆ ಅನ್ಯಾಯ ಮಾಡಲಾಗುತ್ತಿದೆ” ಎಂದು ಬೆಳಗಾವಿ ತಾಲೂಕಿನ ರೈತರು ಆರೋಪಿಸಿದ್ದಾರೆ.
ಬೆಳಗಾವಿ ಮತ್ತು ಖಾನಾಪುರ ತಾಲೂಕಿನಲ್ಲಿ ಮಳೆ ಕೊರತೆಯಿಂದ ಭತ್ತದ ಬೆಳೆ ನೆಲಕಚ್ಚಿದೆ. ಆದರೆ, ಸರ್ಕಾರ ಈ ತಾಲೂಕುಗಳನ್ನು ಬರಪೀಡಿತ ಎಂದು ಪರಿಗಣಿಸಿಲ್ಲ. ಸರ್ಕಾರದ ನಡೆ ಖಂಡಿಸಿ ಪ್ರತಿಭಟನೆ ನಡೆಸುತ್ತೇವೆ” ಎಂದು ಕಂಗ್ರಾಳಿಯ ರೈತ ಶಿವಾಜಿ ಹೇಳಿದ್ದಾರೆ.
“ಜಿಲ್ಲೆಯ 13 ತಾಲೂಕುಗಳಲ್ಲಿ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಸರ್ಕಾರ ಸೂಚಿಸಿದೆ. ಆಯಾ ತಾಲೂಕುಗಳಲ್ಲಿ ಎರಡು ಪ್ರಮುಖ ಬೆಳೆಗಳ ಸ್ಥಿತಿಗತಿ ಕುರಿತು ಐದು ವಿವಿಧ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಿದ್ದೇವೆ. ಬಹುತೇಕ ತಾಲೂಕುಗಳಲ್ಲಿ ಮಳೆ ಕೊರತೆಯಿಂದ ಬೆಳೆಗಳ ಬೆಳವಣಿಗೆ ಕುಂಠಿತವಾಗಿದೆ. ಸವದತ್ತಿ, ಬೈಲಹೊಂಗಲ, ಕಿತ್ತೂರು, ರಾಮದುರ್ಗ, ಅಥಣಿ, ಮೂಡಲಗಿ, ಗೋಕಾಕ, ಯರಗಟ್ಟಿ, ಚಿಕ್ಕೋಡಿ, ಕಾಗವಾಡ, ನಿಪ್ಪಾಣಿ, ರಾಯಬಾಗ ತಾಲೂಕುಗಳಲ್ಲಿ ಸೋಯಾಬಿನ್, ಕಾಳು ಸೇರಿದಂತೆ ಪ್ರಮುಖ ಬೆಳೆಗಳು ನಿರೀಕ್ಷಿತ ಪ್ರಮಾಣದಲ್ಲಿ ಬೆಳೆದಿಲ್ಲ. ಅಂತರ್ಜಲ ಮಟ್ಟ ಮತ್ತು ತೇವಾಂಶದ ಕೊರತೆಯನ್ನು ಸಹ ಪರಿಗಣಿಸಲಾಗಿದೆ” ಎಂದು ಕೃಷಿ ಅಧಿಕಾರಿಯೊಬ್ಬರು ಹೇಳಿದ್ದಾರೆ.