ಮಹಿಳಾ ಮೀಸಲಾತಿಯ ಚರ್ಚೆ ಮತ್ತೆ ಮುನ್ನೆಲೆಯಲ್ಲಿದೆ. ಸಂಸತ್‌ನಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡನೆ ಮಾಡಬೇಕೆಂದು ವಿಪಕ್ಷಗಳು ಪಟ್ಟು ಹಿಡಿದಿವೆ. ಕೇಂದ್ರ ಸಚಿವ ಸಂಪುಟವೂ ಚರ್ಚೆ ನಡೆಸಿ, ಮಸೂದೆ ಮಂಡನೆಗೆ ಅನುಮೋದನೆ ನೀಡಿದೆ. ಈಗ ನಡೆಯುತ್ತಿರುವ ಸಂಸತ್ ವಿಶೇಷ ಅಧಿವೇಶನದಲ್ಲಿ ಮಸೂದೆ ಮಂಡನೆಯಾಗುತ್ತಿದೆ.
ಅಂದಹಾಗೆ, ಸಂಸತ್‌ನಲ್ಲಿ ಮಹಿಳೆಯರಿಗೆ 33% ಮೀಸಲಾತಿ ನೀಡುವ ಮಸೂದೆಯು 2008ರಲ್ಲಿಯೇ ರಚನೆಯಾಗಿತ್ತು. ಆ ಮಸೂದೆ ಸಿದ್ದಗೊಂಡು ಬರೋಬ್ಬರಿ 15 ವರ್ಷಗಳು ಕಳೆದಿವೆ. ಆದರೆ, ಮಸೂದೆಯನ್ನು ರಚಿಸಿದ ಅಂದಿನ ಯುಪಿಎ ಸರ್ಕಾರವಾಗಲೀ, ಆ ನಂತರ 10 ವರ್ಷ ಅಧಿಕಾರ ನಡೆಸಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವಾಗಲೀ ಮಸೂದೆಯನ್ನು ಅಂಗೀಕರಿಸಿ, ಜಾರಿಗೆ ತಂದಿಲ್ಲ.
ಸರ್ಕಾರಗಳ ನಿರಾಸಕ್ತಿಯ ಕಾರಣದಿಂದಾಗಿ ಈಗಲೂ ಸಂಸತ್‌ನಲ್ಲಿ ಪುರುಷರ ಸಂಖ್ಯೆ ಹೇರಳವಾಗಿದೆ. ಲೋಕಸಭೆಯಲ್ಲಿ 543 ಸಂಸದರಿದ್ದು, ಕೇವಲ 82 ಮಹಿಳಾ ಸಂಸದರಿದ್ದಾರೆ. ಅಂತೆಯೇ, 245 ರಾಜ್ಯಸಭಾ ಸದಸ್ಯರ ಪೈಕಿ, ಬರೀ 31 ಮಹಿಳಾ ಸದಸ್ಯರಿದ್ದಾರೆ.
ಮಹಿಳೆಯರು ಗಂಡಿನ ಅಧೀನರು ಎನ್ನುವ ಮನುಸ್ಮೃತಿಯನ್ನೇ ತಮ್ಮ ಜೀವಾಳವಾಗಿಸಿಕೊಂಡಿರುವ ಬಿಜೆಪಿ 2014ರ ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ‘ಮಹಿಳಾ ಮೀಸಲಾತಿ ಮಸೂದೆ’ಯನ್ನು ಜಾರಿಗೆ ತರುವುದಾಗಿ ಬರೆದುಕೊಂಡಿತ್ತು. ಆದರೆ, ಇದುವರೆಗೂ, ಆ ಮಸೂದೆಯ ಬಗ್ಗೆ ಬಿಜೆಪಿ ಸರ್ಕಾರ ಚಕಾರ ಎತ್ತಿರಲಿಲ್ಲ. ಈಗ ವಿಪಕ್ಷಗಳ ಒತ್ತಡದ ಕಾರಣಕ್ಕಿಂತ ಹೆಚ್ಚಾಗಿ 2024ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಮುಖವೊಂದೇ ಸಾಲದು ಎಂಬುದು ಮನವರಿಕೆಯಾಗಿ, ಮಹಿಳಾ ಮಸೂದೆ ಮುನ್ನಲೆಗೆ ಬಂದಿದೆ.
ಮಹಿಳಾ ಮೀಸಲಾತಿ ಮತ್ತು ಮಹಿಳಾ ಪ್ರಾತಿನಿಧ್ಯತೆ
ಭಾರತದ ಚುನಾವಣಾ ಆಯೋಗದ ಪ್ರಕಾರ, ಭಾರತೀಯ ಮತದಾರರಲ್ಲಿ 49% ರಷ್ಟು ಮಹಿಳೆಯರಿದ್ದಾರೆ. ಆದರೂ, ಮಹಿಳಾ ಸಂಸದರ ಸಂಖ್ಯೆ ತೀರಾ ಕಡಿಮೆ ಇದೆ. ಅಲ್ಲದೆ, ಸ್ವಾತಂತ್ರ್ಯದ ನಂತರ ಮಹಿಳೆಯರ ಪ್ರಾತಿನಿಧ್ಯವು ಸ್ವಲ್ಪಮಟ್ಟಿಗೆ ಹೆಚ್ಚಾಗಿದೆ – ಮೊದಲ ಬಾರಿಗೆ ಚುನಾವಣೆ ನಡೆದಾಗ (1952) ಮಹಿಳಾ ಪ್ರಾತಿನಿಧ್ಯವು 4.4% ಇತ್ತು. ಈಗ ಅದು 15%ಗೆ ಏರಿಕೆಯಾಗಿದೆ (ಇದೇ ಹೊತ್ತಿನಲ್ಲಿ, ಮಹಿಳಾ ಪ್ರಾತಿನಿಧ್ಯದ ಜಾಗತಿಕ ಸರಾಸರಿ 23.4% ಇದೆ). ಇದೇ ಪ್ರಮಾಣದಲ್ಲಿ ಮುಂದುವರೆದರೆ, ಭಾರತದಲ್ಲಿ ಅಪೇಕ್ಷಿತ ಲಿಂಗ ಸಮತೋಲನ ತಲುಪಬೇಕಾದರೆ 180 ವರ್ಷಗಳು ಬೇಕಾಗುತ್ತವೆ ಎಂದು ಹೇಳಲಾಗಿದೆ.
1957 ಮತ್ತು 2015ರ ನಡುವೆ ಒಟ್ಟು ಮಹಿಳಾ ಸ್ಪರ್ಧಿಗಳ ಸಂಖ್ಯೆ 45,668ಕ್ಕೆ ಏರಿದೆ. ಸ್ಪರ್ಧಿಸುತ್ತಿರುವ ಮಹಿಳೆಯರ ಸಂಖ್ಯೆಯಲ್ಲಿ 15 ಪಟ್ಟು ಹೆಚ್ಚಳವಾಗಿದೆ. ಅಂದರೆ, ರಾಜಕೀಯದಲ್ಲಿ ಮಹಿಳೆಯರು ಆಸಕ್ತಿ ಹೊಂದಿದ್ದಾರೆ. ರಾಜಕೀಯ ನಿರ್ಧಾರಗಳನ್ನು ರೂಪಿಸುವಲ್ಲಿ ಅವರೂ ಭಾಗಿಯಾಗಲು ಇಚ್ಛಿಸುತ್ತಿದ್ದಾರೆ. ಆದಾಗ್ಯೂ, ಮಹಿಳಾ ಮೀಸಲಾತಿ ಮಸೂದೆಯ ಅಗತ್ಯವನ್ನು ಸಮರ್ಥಿಸಲು ಅಥವಾ ರಾಜಕೀಯ ನಿರ್ಧಾರಗಳಲ್ಲಿ ಪ್ರಭಾವ ಬೀರಲು ಸಂಸತ್‌ನಲ್ಲಿ ಮಹಿಳೆಯರ ಸಂಖ್ಯೆ ಸಾಕಷ್ಟಿಲ್ಲ.
ಅಂದಹಾಗೆ, ಎಚ್.ಡಿ ದೇವೇಗೌಡರು ಪ್ರಧಾನಿಯಾಗಿದ್ದಾಗ 1996 ಸೆಪ್ಟೆಂಬರ್ 12ರಂದು ರಾಜ್ಯಸಭೆಯಲ್ಲಿ ಮಹಿಳಾ ಮೀಸಲಾತಿಯ ಮಸೂದೆಯನ್ನು ಮಂಡಿಸಿದ್ದರು. ಆದರೆ, ಅಂದಿನ ಜನತಾ ಮೈತ್ರಿಕೂಟವೇ ಮಸೂದೆಯನ್ನು ವಿರೋಧಿಸಿತ್ತು. ಮಸೂದೆಯು ಸಂಸತ್‌ನಲ್ಲಿ ಅಂಗೀಕಾರವಾಗದೇ ಉಳಿದುಹೋಗಿತ್ತು.
2008ರ ಮಸೂದೆ ಏನನ್ನು ಪ್ರಸ್ತಾಪಿಸುತ್ತದೆ?
ಸಾಮಾನ್ಯವಾಗಿ ‘ಮಹಿಳಾ ಮೀಸಲಾತಿ ಮಸೂದೆ’ ಎಂದೇ ವ್ಯಾಖ್ಯಾನಗೊಂಡಿರುವ ಮಸೂದೆಯು 2008ರಲ್ಲಿ ಸಂವಿಧಾನಕ್ಕೆ 108ನೇ ತಿದ್ದುಪಡಿಯನ್ನು ಪ್ರಸ್ತಾಪಿಸಿತ್ತು. ಅದರಂತೆ,
- ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಒಟ್ಟು ಸ್ಥಾನಗಳಲ್ಲಿ ಮೂರನೇ ಒಂದು ಭಾಗವು (33%) ಮಹಿಳೆಯರಿಗೆ ಮೀಸಲಾತಿ.
- ಈ ನಿಗದಿತ ಸ್ಥಾನಗಳ ಹಂಚಿಕೆಯನ್ನು ಸಂಸತ್ತು ಸೂಚಿಸಿದ ಪ್ರಾಧಿಕಾರದಿಂದ ಮಾಡಬೇಕು.
- ಮಹಿಳೆಯರಿಗೆ ಮೀಸಲಾದ ಸ್ಥಾನಗಳಲ್ಲಿ ಮೂರನೇ ಒಂದು ಭಾಗವನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಿಡಬೇಕು.
- ಲೋಕಸಭೆ ಅಥವಾ ರಾಜ್ಯ/ಕೇಂದ್ರಾಡಳಿತ ಪ್ರದೇಶದ ವಿಧಾನಸಭೆಗಳಲ್ಲಿ ವಿವಿಧ ಕ್ಷೇತ್ರಗಳಿಗೆ ಸರದಿಯ ಮೂಲಕ ಮೀಸಲು ಸ್ಥಾನಗಳನ್ನು ಹಂಚಬೇಕು.
- ಈ 33% ಮೀಸಲಾತಿಯು ಕಾನೂನು ಪ್ರಾರಂಭವಾದ ಹದಿನೈದು ವರ್ಷಗಳ ನಂತರ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆ.
ಮಸೂದೆಯ ವಿರುದ್ಧ ವಾದಗಳೇನು?
ಮಹಿಳೆಯರಿಗೆ 33% ಮೀಸಲಾತಿ ನೀಡಬೇಕೆಂದು ಕಳೆದ 15 ವರ್ಷಗಳ ಹಿಂದೆಯೇ ಮಸೂದೆ ರಚನೆಯಾದರೂ, ಅದು ಜಾರಿಗೆ ಬಂದಿಲ್ಲ. ಅಲ್ಲದೆ, ಮಸೂದೆ ರಚನೆಯಾದಾಗಿನಿಂದ ಪ್ರತಿ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮಹಿಳಾ ಮೀಸಲಾತಿ ವಿಚಾರ ಮುನ್ನೆಲೆಗೆ ಬರುತ್ತದೆ. 33% ಮೀಸಲಾತಿ ನೀಡಬೇಕೆಂಬ ಒತ್ತಾಯಗಳು ಎಲ್ಲೆಡೆ ಕೇಳಿಬರುತ್ತವೆ. ಅದೇ ಹೊತ್ತಿನಲ್ಲಿ ಕೆಲವು ವಿರೋದಾಭಾಸಗಳೂ ವ್ಯಕ್ತವಾಗುತ್ತವೆ.
- ಮಹಿಳೆಯರಿಗೆ ಕ್ಷೇತ್ರವನ್ನು ಮೀಸಲಿಡುವುದರಿಂದ ಕ್ಷೇತ್ರದ ಎಲ್ಲ ಪುರುಷರು ಆ ಕ್ಷೇತ್ರವನ್ನು ಪ್ರತಿನಿಧಿಸುವ ಅವಕಾಶವನ್ನು ಕಳೆದುಕೊಳ್ಳುತ್ತಾರೆ. ಇದು ಮೂಲಭೂತವಾಗಿ ಲಿಂಗದ ಆಧಾರದ ಮೇಲೆ ಪ್ರಜಾಪ್ರಭುತ್ವದ ಹಕ್ಕನ್ನು ನಿರಾಕರಿಸುತ್ತದೆ.
- ಇದು ಪುರುಷ ಅಭ್ಯರ್ಥಿಗೆ ಮತ ಹಾಕಲಿಚ್ಛಿಸುವ ಮತದಾರರ ಆಯ್ಕೆಯನ್ನು ಮಿತಿಗೊಳಿಸುತ್ತದೆ. ಇದು ಮತದಾರರ ಆಯ್ಕೆಯನ್ನು ಕಡೆಗಣಿಸುತ್ತದೆ.
- 543 ಲೋಕಸಭಾ ಸ್ಥಾನಗಳಲ್ಲಿ 131 ಸ್ಥಾನಗಳನ್ನು ಈಗಾಗಲೇ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ಮೀಸಲಿಡಲಾಗಿದೆ. ಈಗ ಹೆಚ್ಚುವರಿ 33% ಮೀಸಲಾತಿಯು ಜನರ ಆಶಯಗಳನ್ನು ಪ್ರತಿಬಿಂಬಿಸುವುದಿಲ್ಲ ಎಂದು ವಿರೋಧಿಗಳು ವಾದಿಸುತ್ತಾರೆ. (ಆದರೆ, ಮಹಿಳಾ ಮೀಸಲಾತಿಯು ಎಲ್ಲ ಮೀಸಲಾತಿಗಳನ್ನೂ ಒಳಗೊಂಡಿರುತ್ತದೆ. ಅಂದರೆ, ಎಸ್‌ಸಿ/ಎಸ್‌ಟಿ ಮೀಸಲು ಸ್ಥಾನಗಳಲ್ಲಿ 33%, ಒಬಿಸಿ ಮೀಸಲು ಸ್ಥಾನಗಳಲ್ಲಿ 33% – ಈ ರೀತಿ ಎಲ್ಲ ಸಮುದಾಯಗಳ ಮೀಸಲಾತಿಗಳನ್ನೂ ಮಹಿಳಾ ಮೀಸಲಾತಿ ಒಳಗೊಳ್ಳುತ್ತದೆ ಎಂದು ಹೇಳಲಾಗಿದೆ)
- ಮಹಿಳಾ ಮೀಸಲಾತಿ ಮಸೂದೆಯು ಸಂಸತ್ತಿನಲ್ಲಿ ಏಕೆ ಕಡಿಮೆ ಮಹಿಳೆಯರಿದ್ದಾರೆ ಎಂಬುದಕ್ಕೆ ಮೂಲ ಕಾರಣವನ್ನು ತಿಳಿಸುವುದಿಲ್ಲ. ಸಕ್ರಿಯ ರಾಜಕಾರಣದಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಉತ್ತೇಜಿಸುವ ಪರಿಣಾಮಕಾರಿ ಮಾರ್ಗವೆಂದರೆ, ರಾಜಕೀಯ ಪಕ್ಷಗಳು ತಮ್ಮ ಆಂತರಿಕ ಕಾರ್ಯಕಾರಿ ಸಮಿತಿಗಳಲ್ಲಿ ಹೆಚ್ಚಿನ ಮಹಿಳೆಯರನ್ನು ನಾಮನಿರ್ದೇಶನ ಮಾಡಬೇಕು. ಚುನಾವಣೆಗಳಲ್ಲಿ ಹೆಚ್ಚಿನ ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಬೇಕು ಎಂದು ಮಸೂದೆ ವಿರೋಧಿಗಳು ಹೇಳುತ್ತಾರೆ.
- ಪ್ರಸ್ತಾವಿತ ಮಸೂದೆಯು, 33% ಮೀಸಲಾತಿ ಜಾರಿಯಾದ 15 ವರ್ಷಗಳ ನಂತರ ಅಸ್ತಿತ್ವದಲ್ಲಿರುವುದಿಲ್ಲ ಎಂದು ಹೇಳುತ್ತದೆ. ಆದರೆ, ಪ್ರಸ್ತುತ ರಾಜಕೀಯ ಧೋರಣೆಗಳನ್ನು ಗಮನಿಸಿದರೆ, ಈ ಷರತ್ತು ಅಸಂಬದ್ಧವಾಗಿದೆ.
ಮಸೂದೆಯ ಪರ ಮತ್ತು ವಿರುದ್ಧ ಯಾರು?
2008ರಲ್ಲಿ ಮಸೂದೆಯನ್ನು ಯುಪಿಎ ಸರ್ಕಾರ ಸಿದ್ದಪಡಿಸಿತ್ತು. ರಾಜ್ಯಸಭೆಯು ಮಸೂದೆಯನ್ನು ಅಂಗೀಕರಿಸಿತ್ತು. ಆದರೆ, ಲೋಕಸಭೆಯಲ್ಲಿ ಮಸೂದೆ ಮೇಲೆ ಮತದಾನ ನಡೆಯಲಿಲ್ಲ. ನಂತರ, 2014ರ ಚುನಾವಣೆಯಲ್ಲಿ ಯುಪಿಎ ಮೈತ್ರಿಕೂಟ ಅಧಿಕಾರ ಕಳೆದುಕೊಂಡಿತು.
ಆ ಸಮಯದಲ್ಲಿ, ಮಸೂದೆಯನ್ನು ರಾಷ್ಟ್ರೀಯ ಜನತಾ ದಳ, ತೃಣಮೂಲ ಕಾಂಗ್ರೆಸ್, ಬಹುಜನ ಸಮಾಜ ಪಕ್ಷ ಮತ್ತು ಸಮಾಜವಾದಿ ಪಕ್ಷದಂತಹ ಪ್ರಾದೇಶಿಕ ಪಕ್ಷಗಳು ವಿರೋಧಿಸಿದ್ದವು. ವಿಪರ್ಯಾಸವೆಂದರೆ, ಈ ಎಲ್ಲ ಪಕ್ಷಗಳೂ ಈಗ ಕಾಂಗ್ರೆಸ್ ಜೊತೆಗಿವೆ.
ಈ ಸುದ್ದಿ ಓದಿದ್ದೀರಾ?: ʼಒಂದು ರಾಷ್ಟ್ರ,ಒಂದು ಚುನಾವಣೆ’ ಪರಿಕಲ್ಪನೆಯ ಆಳದಲ್ಲಿ ಚುನಾವಣಾ ಪ್ರಜಾಪ್ರಭುತ್ವದ ಬಗೆಗಿನ ತಿರಸ್ಕಾರ ಭಾವ ಅಡಗಿದೆ
ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದರೂ, ಮಸೂದೆ ಇನ್ನೂ ಅಂಗೀಕರಿಸಿಲ್ಲ. 2018 ಜುಲೈನಲ್ಲಿ, ಅಂದಿನ ಮುಂಗಾರು ಅಧಿವೇಶನಕ್ಕೂ ಮೊದಲು, ಪ್ರಧಾನಿ ಮೋದಿಗೆ ಪತ್ರ ಬರೆದಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, “ಮಹಿಳೆಯರ ವಿಚಾರದಲ್ಲಿ ತಮ್ಮ ಬದ್ಧತೆಯನ್ನು ಪ್ರದರ್ಶಿಸಿ – ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸಿ” ಎಂದು ಒತ್ತಾಯಿಸಿದ್ದರು.
ಆದರೆ, ಪ್ರಾಸಂಗಿಕವಾಗಿ, ರಾಹುಲ್ ಗಾಂಧಿ ಅವರು ಪ್ರಧಾನಿಗೆ ಪತ್ರ ಬರೆದ ಸಮಯದಲ್ಲೇ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯನ್ನು ಘೋಷಿಸಲಾಯಿತು. ಆ ಸಮಿತಿಯ ಒಟ್ಟು 51 ಸದಸ್ಯರಲ್ಲಿ ಕೇವಲ 7 ಮಂದಿ ಮಹಿಳೆಯರಿದ್ದರು.
ಹೀಗೆ, ಮಹಿಳಾ ಮೀಸಲಾತಿ ಮತ್ತು ಮಹಿಳಾ ಪ್ರಾತಿನಿಧ್ಯತೆಯಲ್ಲಿ ಸಮಾನತೆ ಅಥವಾ ಹೆಚ್ಚು ಅವಕಾಶಗಳನ್ನು ನೀಡುವಲ್ಲಿ ಎಲ್ಲ ಪಕ್ಷಗಳು ವಿಫಲವಾಗಿವೆ. ಇದೀಗ, ಹೊಸ ಸಂಸತ್ ಭವನದಲ್ಲಿ ಹಳೆಯ ಮಸೂದೆ ಮಂಡನೆಯಾಗುತ್ತಿದೆ. ಹಳೆಯ ಮಸೂದೆಯಲ್ಲಿ ಬಿಜೆಪಿ ಸರ್ಕಾರ ಏನೆಲ್ಲ ತಿದ್ದುಪಡಿಗಳನ್ನು ಮಾಡಿದೆ. ಈಗ ಮಂಡನೆಯಾಗುವ ಮಸೂದೆಯಲ್ಲಿ ಯಾವ ಅಂಶಗಳು ಇರಲಿವೆ. ವಿಪಕ್ಷಗಳ ಪ್ರತಿಕ್ರಿಯೆ ಏನಿರಲಿದೆ – ಇಂತಹ ಸಾಕಷ್ಟು ಪ್ರಶ್ನೆಗಳು ದೇಶದ ಮುಂದಿವೆ. ಉತ್ತರಕ್ಕಾಗಿ ದೇಶದ ಮಹಿಳೆಯರು ಕಾಯುತ್ತಿದ್ದಾರೆ.