ಗದಗ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿರುವ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಬಸ್ ಪಾಸ್ಗೆ ಅರ್ಜಿ ಸಲ್ಲಿಸಿ ಒಂದು ತಿಂಗಳು ಕಳೆದರೂ ಪಾಸ್ ವಿತರಿಸಿಲ್ಲ. ಬಸ್ ಡಿಪೋದ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ತಳೆದಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿಗಳು ಡಿಪೋದ ಎದುರು ಪ್ರತಿಭಟನೆ ನಡೆಸಿದ್ದಾರೆ.
“ದಿನನಿತ್ಯ ಪ್ರಯಾಣದ ದರ ಭರಿಸಿ ಶಾಲಾ-ಕಾಲೇಜಿಗೆ ಪ್ರಯಾಣಿಸುತ್ತಿದ್ದೇವೆ. ದಿನ ಬಸ್ ಟಿಕೆಟ್ ಖರೀದಿಸಲು ಹಣವಿಲ್ಲದೆ ಪರದಾಡುತ್ತಿದ್ದೇವೆ. ಅಧಿಕಾರಿಗಳನ್ನು ಕೇಳಿದರೆ, ಮತ್ತೊಮ್ಮೆ ಅರ್ಜಿ ಹಾಕಿ ಎಂದು ಹೇಳಿ ಕಳಿಸುತ್ತಿದ್ದಾರೆ” ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
“ವಿದ್ಯಾರ್ಥಿಗಳು ಆನ್ಲೈನ್ ಅರ್ಜಿ ಸಲ್ಲಿಸಿದರೆ, ಅರ್ಜಿ ಸ್ವೀಕರಿಸುತ್ತಿಲ್ಲ. ಇದಕ್ಕೆ ಲಕ್ಷ್ಮೇಶ್ವರ ಸಾರಿಗೆ ಸಂಸ್ಥೆಯ ನಿರ್ಲಕ್ಷ್ಯ ಧೋರಣೆಯೇ ಕಾರಣ. ಸುಮಾರು ಐವತ್ತು ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ” ಎಂದು ಎಂದು ಜಯ ಕರ್ನಾಟಕ ಸಂಘಟನೆಯ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ತಾಂತ್ರಿಕ ದೋಷದಿಂದ ಸಮಸ್ಯೆ ಆಗಿದೆ. ಇನ್ನು ನಾಲ್ಕು ದಿನಗಳಲ್ಲಿ ಸಮಸ್ಯೆ ಪರಿಹರಿಸುತ್ತೇವೆ. ವಿದ್ಯಾರ್ಥಿಗಳಿಗೆ ಪಾಸ್ ವಿತರಿಸುತ್ತೇವೆ” ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.
ಪ್ರತಿಭಟನೆಯಲ್ಲಿ ಸಂಘಟನೆಯ ರಮೇಶ್ ಹಂಗನಕಟ್ಟಿ, ಇಸಾಕ್ ಬಸ್ಯಾ ಹರಪನಹಳ್ಳಿ, ಹಾಲಪ್ಪ ಭಂಡಾರಿ, ಬಸಣ್ಣ ಮೇಲ್ಮುರಿ, ಖಾದರ್ ಭಾಷಾ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.