ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸೋಮವಾರ ಸುಮಾರು 2 ಸೆಂಟಿಮೀಟರ್ ಮಳೆ ದಾಖಲಾಗಿದೆ. ಇದು ಸೆಪ್ಟೆಂಬರ್ ತಿಂಗಳ ಸಾಮಾನ್ಯ ಪ್ರಮಾಣದ ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಅಧಿಕಾರಿಗಳು ಹೇಳಿದ್ದಾರೆ. ಆದರೂ, ಕೂಡ ನಗರದ ಹಲವೆಡೆ ರಸ್ತೆಗಳು ಜಲಾವೃತಗೊಂಡು ಜನರು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ.
ಸೆಪ್ಟೆಂಬರ್ 18ರ ಸಂಜೆ ಸುರಿದ ಮಳೆಗೆ ಬೆಂಗಳೂರಿನ ಹಲವು ರಸ್ತೆಗಳು ಕೊಚ್ಚೆಗುಂಡಿಗಳಾಗಿ ಮಾರ್ಪಟ್ಟಿದ್ದರೆ, ಪಾಣತ್ತೂರಿನ ಎರಡು ಅಂಡರ್‌ಪಾಸ್‌ಗಳು ಮತ್ತು ಕ್ರೋಮಾ ರಸ್ತೆ ಜಲಾವೃತಗೊಂಡಿತ್ತು. ಇದರಿಂದ ವರ್ತೂರು ಮತ್ತು ವೈಟ್‌ಫೀಲ್ಡ್‌ನಲ್ಲಿ ಸಂಚಾರ ಸ್ಥಗಿತಗೊಂಡಿತ್ತು. ಕ್ರೋಮಾ ರಸ್ತೆಯ ಆರ್‌ಯುಬಿ ಬಳಿ ಐಟಿ ಉದ್ಯೋಗಿಯೊಬ್ಬರ ಕಾರು ಮುಳುಗಿದೆ ಎಂದು ವರದಿಯಾಗಿದೆ.
“ರಾಜಕಾಲುವೆ ಒತ್ತುವರಿಯಿಂದ ಆಗಿರುವ ಪ್ರವಾಹದ ಸಮಸ್ಯೆಯನ್ನು ಸರಿಪಡಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರು ಚುನಾವಣೆಗೂ ಮುನ್ನ ಸುಳ್ಳು ಆಶ್ವಾಸನೆ ನೀಡಿದ್ದು, ಬೇಸರ ತಂದಿದೆ” ಎಂದು ಇಲ್ಲಿನ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದುದು ಕೇಳಿಬಂದಿದೆ.
ಕೇವಲ 2 ಸೆಂ.ಮೀ ಮಳೆಯಿಂದ ಬೆಂಗಳೂರಿನಲ್ಲಿ ಉಂಟಾಗುವ ಸಮಸ್ಯೆಯ ಬಗ್ಗೆ ತಿಳಿಸಲು ಸ್ಥಳೀಯ ನಿವಾಸಿಗಳು ಸೆಪ್ಟೆಂಬರ್ 19 ರಂದು ಕ್ರೋಮಾ ರಸ್ತೆ ಆರ್‌ಯುಬಿಯನ್ನು ‘ಕನಕನ ಕಿಂಡಿ’ ಎಂದು ನಾಮಕರಣ ಮಾಡಿದರು.
“ಇಲ್ಲಿ ವಾಸಿಸುವ ನಿವಾಸಿಗಳು ನಗರದ ಆರ್ಥಿಕತೆಗೆ ದೊಡ್ಡ ಕೊಡುಗೆದಾರರಾಗಿದ್ದಾರೆ. ಆದರೆ, ಇಲ್ಲಿನ ಪರಿಸ್ಥಿತಿಗಳು ತುಂಬಾ ಕೆಟ್ಟದಾಗಿದೆ. ಮಳೆನೀರು ಚರಂಡಿಗಳು ತುಂಬಿ ಹರಿಯುತ್ತಿರುವುದರಿಂದ ತ್ಯಾಜ್ಯವೂ ರಸ್ತೆಯಲ್ಲಿ ತೇಲುತ್ತಿದೆ. ಕ್ರೋಮಾ ರೋಡ್ ಆರ್‌ಯುಬಿಯನ್ನು ಎಸ್‌ಡಬ್ಲೂಡಿಯಲ್ಲಿ ನಿರ್ಮಿಸಲಾಗಿದೆ. ಇದು ಕಾನೂನು ಬಾಹಿರವಾಗಿದೆ. ಆದರೆ, ಬೇರೆ ದಾರಿಯಿಲ್ಲದ ಕಾರಣ ನಾವು ಆ ರಸ್ತೆಯನ್ನೇ ಬಳಸಬೇಕಾಗಿದೆ” ಎಂದು ವರ್ತೂರಿನ ನಾಗರಿಕ ಹೋರಾಟಗಾರ ಜಗದೀಶ್ ರೆಡ್ಡಿ ಹೇಳಿದರು.
‘ರಸ್ತೆ ಸರಿಸುಮಾರು 15 ಅಡಿ ಅಗಲವಿದ್ದು, ಅಲ್ಲಿನ ಜನಸಂಖ್ಯೆ ಸುಮಾರು 1 ಲಕ್ಷ ಇದೆ. ಹಾಗಾಗಿ, ಕೂಡಲೇ ರಸ್ತೆ ವಿಸ್ತರಣೆಯಾಗಬೇಕು’ ಎಂದು ರೆಡ್ಡಿ ಹೇಳಿದರು. ಬೆಂಗಳೂರಿನಲ್ಲಿ ಯೋಜನೆಗಳಿಗೆ ಹಣ ನೀಡುವುದನ್ನು ನಿಲ್ಲಿಸಲಾಗಿದೆ, ಮುಖ್ಯಮಂತ್ರಿಗಳು ತಮ್ಮ ವಿವೇಚನಾ ಅಧಿಕಾರವನ್ನು ಬಳಸಬೇಕು. ಈ ಸಮಸ್ಯೆಗಳ ಬಗ್ಗೆ ತಕ್ಷಣ ಗಮನ ಹರಿಸಬೇಕು ಎಂದು ತಿಳಿಸಿದರು.
“ಅತಿ ಕಿರಿದಾಗಿರುವ ಪಾಣತ್ತೂರು ರಸ್ತೆಯನ್ನು ಅಗಲೀಕರಣಗೊಳಿಸಬೇಕು. ಇದರಿಂದ ಮಳೆ ಬಂದಾಗ ಸಂಚಾರ ದಟ್ಟಣೆಯನ್ನು ತಪ್ಪಿಸಬಹುದು. ಬಳಗೆರೆ ರಸ್ತೆ, ವೈಟ್‌ಫೀಲ್ಡ್ ಮುಖ್ಯರಸ್ತೆಗಳಲ್ಲಿಯೂ ಮಳೆಯಿಂದಾಗಿ ತೀವ್ರ ಜಲಾವೃತವಾಗಿದೆ” ಎಂದು ನಿವಾಸಿಗಳು ತಿಳಿಸಿದ್ದಾರೆ.
ಸೆಪ್ಟೆಂಬರ್ 18 ರಂದು ಬೆಂಗಳೂರಿನಲ್ಲಿ ಸುಮಾರು 2 ಸೆಂಟಿಮೀಟರ್ ಮಳೆ ದಾಖಲಾಗಿದೆ. ಸೆಪ್ಟೆಂಬರ್ ತಿಂಗಳ ಸಾಮಾನ್ಯ ಪ್ರಮಾಣದ ಮಳೆ ಇದಾಗಿದೆ” ಎಂದು ಭಾರತೀಯ ಹವಾಮಾನ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.
The heart of Trillion dollar economy with the most intellectually important population living in the inhumane conditions! The IT hub of India, that is Bharat is drowning in its own faeces(shit). IT folks will have to wade through such life threatening challenges to make us proud! pic.twitter.com/SdDEnXAISU
— Varthur Rising (@RisingVarthur) September 19, 2023
“ಸೆಪ್ಟೆಂಬರ್ 18ರ ಸಂಜೆ ಮಳೆಯು ಜೋರಾಗಿರಲಿಲ್ಲ. ಆದರೂ, ವೈಟ್‌ಫೀಲ್ಡ್ ಮುಖ್ಯರಸ್ತೆ ಮತ್ತು ವರ್ತೂರು ಕೋಡಿ ಜಲಾವೃತವಾಗಿದ್ದು, ಟ್ರಾಫಿಕ್ ಜಾಮ್‌ಗೆ ಕಾರಣವಾಯಿತು. ಸಣ್ಣ ಪ್ರಮಾಣದ ಮಳೆಯಾದರೂ, ಚರಂಡಿಗಳು ಮುಚ್ಚಿಹೋಗುತ್ತಿವೆ. ಪ್ರತಿ ವರ್ಷವೂ ಇಲ್ಲಿಯ ಪ್ರವಾಹದ ಸಮಸ್ಯೆಗಳನ್ನು ಸರಿಪಡಿಸಲು ಹಣ ಮಂಜೂರು ಮಾಡಲಾಗುತ್ತಿದೆ. ಆದರೆ, ಇಲ್ಲಿಯವರೆಗೆ ಯಾವುದೇ ಪ್ರಗತಿ ಕಾಣುತ್ತಿಲ್ಲ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳು ಮೂರು ವರ್ಷಗಳಿಂದ ಅತಿಕ್ರಮಣ ತೆರವುಗೊಳಿಸುವ ಮತ್ತು ಎಸ್‌ಡಬ್ಲ್ಯೂಡಿಗಳ ಹೂಳು ತೆಗೆಯುವ ಕೆಲಸ ಮಾಡುತ್ತಿದ್ದಾರೆ. ಹಾಗಾದರೆ ಈ ಪ್ರವಾಹ ಏಕೆ?” ಎಂದು ವೈಟ್‌ಫೀಲ್ಡ್ ನಿವಾಸಿಯೊಬ್ಬರು ಪ್ರಶ್ನಿಸಿದರು.
ಬೆಂಗಳೂರು ಟ್ರಾಫಿಕ್ ಪೊಲೀಸ್ (ಬಿಟಿಪಿ) ನೀಡಿರುವ ಮಾಹಿತಿ ಪ್ರಕಾರ, ಕೇವಲ ಐಟಿ ಕೇಂದ್ರ ಮಾತ್ರವಲ್ಲದೆ ಸ್ಯಾಂಕಿ ಟ್ಯಾಂಕ್ ರಸ್ತೆ, ಹಳೆ ಮದ್ರಾಸ್ ರಸ್ತೆ, ಜಯಮಹಲ್ ರಸ್ತೆ, ಕ್ವೀನ್ಸ್ ಜಂಕ್ಷನ್, ಅನಿಲ್ ಕುಂಬ್ಳೆ ವೃತ್ತ, ಶಿವಾನಂದ ಸರ್ಕಲ್ ಅಂಡರ್‌ಪಾಸ್, ಕಂಟೋನ್ಮೆಂಟ್ ಆರ್‌ಯುಬಿ, ಬಳ್ಳಾರಿ ರಸ್ತೆಯ ಬಿಡಿಎ ಜಂಕ್ಷನ್, ಬೈಯ್ಯಪ್ಪನಹಳ್ಳಿ ಜಂಕ್ಷನ್ ಮತ್ತು ಬನ್ನೇರುಘಟ್ಟ ರಸ್ತೆಯ ಕೆಲವು ಭಾಗಗಳು ಜಲಾವೃತಗೊಂಡಿದ್ದವು.
ಈ ಸುದ್ದಿ ಓದಿದ್ದೀರಾ? ಡೇಟಿಂಗ್ ಹಗರಣ | ₹1.05 ಕೋಟಿ ಕಳೆದುಕೊಂಡ ವ್ಯಕ್ತಿ
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾತನಾಡಿ, “ಬೆಂಗಳೂರಿನಾದ್ಯಂತ ಮಳೆಯ ನಡುವಿನ ದೀರ್ಘ ಅಂತರವು ಜಲಾವೃತವಾಗಲು ಕಾರಣವಾಗಿದೆ. ಪ್ರತಿ ಮಳೆಯ ನಡುವೆ ಅಂತರವಿದ್ದಾಗ, ಘನತ್ಯಾಜ್ಯವು ಸಂಗ್ರಹಗೊಳ್ಳುತ್ತದೆ. ಚರಂಡಿಗಳಲ್ಲಿ ತ್ಯಾಜ್ಯ ಇದ್ದಾಗ ನೀರು ಹೋಗಿ ಉಸಿರುಗಟ್ಟಿಸುತ್ತದೆ. ಮೊದಲ ಮಳೆಯ ನಂತರ, ತ್ಯಾಜ್ಯವು ಹೊರಬರುತ್ತದೆ. ನಾವು ಅದನ್ನು ಸ್ವಚ್ಛಗೊಳಿಸುತ್ತೇವೆ. ಬಳಿಕ, ಯಾವುದೇ ಜಲಾವೃತ ಆಗುವುದಿಲ್ಲ. ಮಳೆಯ ನಡುವೆ ಹೆಚ್ಚು ಅಂತರವಿದ್ದರೆ ಚರಂಡಿಗಳು ಮುಚ್ಚಿ ಹೋಗುತ್ತವೆ” ಎಂದು ವಿವರಿಸಿದರು.
Heavy rains in Bengaluru!
— Varthur Rising (@RisingVarthur) September 18, 2023
Croma road vent floods, a car stuck in the slushy waters.
Varthur in shambles continues…. pic.twitter.com/holLlR41aw
“ನಗರದಲ್ಲಿ ಇದುವರೆಗೆ ಸುಮಾರು 16 ಸೆಂಟಿಮೀಟರ್ ಮಳೆ ದಾಖಲಾಗಿದೆ, ಇದು ಈ ಅವಧಿಗೆ ಸಾಮಾನ್ಯವಾಗಿದೆ. ಮುಂದಿನ ನಾಲ್ಕು ದಿನಗಳವರೆಗೆ ಬೆಂಗಳೂರಿನಲ್ಲಿ ಸಂಜೆ ಮತ್ತು ರಾತ್ರಿ ಸಮಯದಲ್ಲಿ ಕೆಲವೊಮ್ಮೆ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ” ಎಂದು ಹವಾಮಾನ ಇಲಾಖೆ ತಿಳಿಸಿದೆ.