ದರೋಡೆ, ಮನೆ ಕಳ್ಳತನ, ವಾಹನ ಮತ್ತು ಜಾನುವಾರು ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಗೋಕಾಕ್ ಪೊಲೀಸರು ಒಂಬತ್ತು ಮಂದಿ ಡಕಾಯಿತರನ್ನು ಬಂಧಿಸಿದ್ದು, ಬಂಧಿತರಿಂದ 7.9 ಲಕ್ಷ ರೂ.ಮೌಲ್ಯದ ಚಿನ್ನಾಭರಣ, ನಗದು ಮತ್ತು ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ್ ಗುಳೇದ್ ತಿಳಿಸಿದ್ದಾರೆ.
ಕಿತ್ತೂರು ತಾಲೂಕಿನ ತಿಗಡೊಳ್ಳಿಯಲ್ಲಿ ನಡೆದ ಯುವಕನ ಕೊಲೆ ಪ್ರಕರಣವನ್ನೂ ಕಿತ್ತೂರು ಪೊಲೀಸರು ಭೇದಿಸಿದ್ದು, ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ ಎಂದರು.
“ಸೆಪ್ಟಂಬರ್ 14ರಂದು ಗೋಕಾಕ್ ತಾಲೂಕಿನ ಕಣಸಗೇರಿ ಗ್ರಾಮದ ಗುರುನಾಥ ಬಡಿಗೇರ್ ಎಂಬುವರು ಗೋಕಾಕ್‌ನಿಂದ ಕಣಸಗೇರಿಗೆ ತೆರಳುತ್ತಿದ್ದಾಗ ಡಕಾಯಿತರು ತಮ್ಮ ದ್ವಿಚಕ್ರ ವಾಹನವನ್ನು ಅಡ್ಡಗಟ್ಟಿ ಚಿನ್ನಾಭರಣಗಳನ್ನು ದೋಚಿದ್ದಾರೆಂದು ದೂರು ನೀಡಿದ್ದು, ಅಲ್ಲದೆ ಗೋಕಾಕ್ ನಗರ, ಅಂಕಲಗಿ ಠಾಣೆ ಮತ್ತು ಗೋಕಾಕ್ ಗ್ರಾಮೀಣ ಗ್ರಾಮಗಳಲ್ಲಿ ದರೋಡೆ, ಸುಲಿಗೆ, ದ್ವಿಚಕ್ರ ವಾಹನ ಕಳ್ಳತನ ಮತ್ತು ಜಾನುವಾರು ಕಳ್ಳತನ ಪ್ರಕರಣಗಳು ದಾಖಲಾಗಿವೆ” ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.
ಹೆಚ್ಚುವರಿ ಎಸ್‌ಪಿ ವೇಣುಗೋಪಾಲ್, ಗೋಕಾಕ್ ಡಿಎಸ್‌ಪಿ ದಾದಾಪೀರ್ ಮುಲ್ಲಾ ಮಾರ್ಗದರ್ಶನದಲ್ಲಿ ಗೋಕಾಕ್ ಸಿಪಿಐ ಗೋಪಾಲ ರಾಥೋಡ್ ನೇತೃತ್ವದಲ್ಲಿ ತನಿಖಾ ತಂಡ ರಚಿಸಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ತಂಡವು ಸೆಪ್ಟೆಂಬರ್ 18ರಂದು ಬೆನಚಿನಮರಡಿ ಖಿಲಾರಿ ಗ್ಯಾಂಗ್ ಮತ್ತು ಗೋಕಾಕ್‌ನ ಎಸ್‌ಪಿ (ಶಂಕರ-ಪರಶುರಾಮ) ಸರ್ಕಾರ್ ಗ್ಯಾಂಗ್‌ನ ಒಂಬತ್ತು ಆರೋಪಿಗಳನ್ನು ಬಂಧಿಸಿತ್ತು. ಈ ಒಂಬತ್ತು ಆರೋಪಿಗಳು ಗೋಕಾಕ್ ಪಟ್ಟಣ, ಸಂಕೇಶ್ವರ, ಯಮಕನಮರಡಿ, ಅಂಕಲಗಿ, ಚಿಕ್ಕೋಡಿ, ಉಪ್ಪಾರಟ್ಟಿ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ದರೋಡೆ-ಸುಲಿಗೆ, ವಾಹನ ಕಳ್ಳತನ, ಜಾನುವಾರು ಕಳ್ಳತನ ಮತ್ತು ಹನಿಟ್ರ್ಯಾಪ್ಗಳಂತಹ ಅಪರಾಧಗಳನ್ನು ಒಪ್ಪಿಕೊಂಡಿದ್ದಾರೆ.
ಬಂಧಿತರಿಂದ ಚಿನ್ನಾಭರಣ, ನಗದು, 9 ಮೊಬೈಲ್ ಫೋನ್, 7 ದ್ವಿಚಕ್ರ ವಾಹನ, 1 ಅಶೋಕ್ ಲೇಲ್ಯಾಂಡ್, 1 ಟಾಟಾ ಏಸ್, ಕೃತ್ಯಕ್ಕೆ ಬಳಸಿದ 4 ಚಾಕು ಹಾಗೂ ಖಡ್ಗಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಸುದ್ದಿ ಓದಿದ್ದೀರಾ? ಚೈತ್ರಾ ಕುಂದಾಪುರ ತಂಡದಿಂದ ₹185 ಕೋಟಿ ವ್ಯವಹಾರ: ಕಾಂಗ್ರೆಸ್ ವಕ್ತಾರ ಎಂ ಲಕ್ಷ್ಮಣ್ ಆರೋಪ
ಗೋಕಾಕ್ ತಾಲೂಕಿನ ಬೆನಚಿನಮರಡಿ ಗ್ರಾಮದ ದುರ್ಗಪ್ಪ ವಡ್ಡರ್, ನಾಗಪ್ಪ ಮಾದರ, ಯಲ್ಲಪ್ಪ ಗೀಸನಿಂಗವ್ವಗೋಳ, ಕೃಷ್ಣ ಪೂಜೇರಿ, ರಾಮಸಿದ್ದ ತಪಸಿ, ಬೀರಸಿದ್ದ ಗುಂಡಿ, ಉದ್ದಪ್ಪ ಖಿಲಾರಿ, ಪರಶುರಾಮ ಗೊಂಡಾಲಿ, ಆಕಾಶ ತಳವಾರ ಬಂಧಿತ ಆರೋಪಿಗಳು.
ಕೊಲೆ ಪ್ರಕರಣ
“ಕಿತ್ತೂರು ತಾಲೂಕಿನ ತಿಗಡೊಳ್ಳಿಯಲ್ಲಿ ಭಾನುವಾರ ರಾತ್ರಿ ವಿಜಯ ಅರೈರ್ (32) ಎಂಬುವರ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಅದೇ ಗ್ರಾಮದ ಕಲ್ಲಪ್ಪ ಕ್ಯಾತನವರ್ (48) ಅವರನ್ನು ಚಿಕಿತ್ಸೆಗಾಗಿ ಧಾರವಾಡದ ಆಸ್ಪತ್ರೆಗೆ ದಾಖಲಿಸಲಾಗಿದೆ. ಕ್ಷುಲ್ಲಕ ಕಾರಣಕ್ಕಾಗಿ ಅವರನ್ನು ಕೊಲ್ಲಲಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ತನಿಖೆ ಪ್ರಗತಿಯಲ್ಲಿದೆ” ಎಂದು ಎಸ್‌ಪಿ ಭೀಮಾಶಂಕರ್ ಗುಳೇದ್ ಹೇಳಿದರು.