ಬೆಂಗಳೂರು | ಪ್ರತಿಭಟನೆಗಳು ಫ್ರೀಡಂ ಪಾರ್ಕ್‌ಗೆ ಸೀಮಿತ; ನಿಯಮ ಹಿಂಪಡೆಯದಿದ್ದರೆ ಪ್ರತಿಭಟನೆಯ ಹಕ್ಕಿಗಾಗಿ ಹೋರಾಟ

Date:

Advertisements

ರಾಜಧಾನಿ ಬೆಂಗಳೂರಿನಲ್ಲಿ ನಡೆಯುವ ಪ್ರತಿಯೊಂದು ಪ್ರತಿಭಟನೆಗಳು ಕೇವಲ ಫ್ರೀಡಂ ಪಾರ್ಕ್‌ಗೆ ಸೀಮಿತವಾಗಿದ್ದು, ಇದು ಪ್ರತಿಭಟಿಸುವ ಹಕ್ಕಿಗೆ ಧಕ್ಕೆಯಾಗಿದೆ. ಈ ಮೂಲಭೂತ ಹಕ್ಕನ್ನು ಎತ್ತಿಹಿಡಿಯಬೇಕಾಗಿದೆ. ಎಲ್ಲ ಪ್ರತಿಭಟನೆಗಳನ್ನು ಫ್ರೀಡಂ ಪಾರ್ಕ್‌ಗೆ ಮಾತ್ರ ಸೀಮಿತಗೊಳಿಸದಿರಿ. ಸರ್ಕಾರ ಈ ನಿಯಮವನ್ನು ಹಿಂಪಡೆಯದಿದ್ದರೆ, ಅದನ್ನು ಉಲ್ಲಂಘಿಸಿ ಪ್ರತಿಭಟಿಸುತ್ತೇವೆ ಎಂದು ಹೋರಾಟದ ಹಕ್ಕಿಗಾಗಿ ಜನಾಂದೋಲನ ತಿಳಿಸಿದೆ.

ಪ್ರತಿಭಟನೆಯ ಹಕ್ಕನ್ನು ರಕ್ಷಿಸಲು, ಎತ್ತಿಹಿಡಿಯಲು ಹಲವಾರು ಪ್ರಗತಿಪರ ಮತ್ತು ಪ್ರಜಾಸತ್ತಾತ್ಮಕ ಗುಂಪುಗಳು ಹಾಗೂ ವ್ಯಕ್ತಿಗಳು ಸೇರಿ ಹೋರಾಟದ ಹಕ್ಕಿಗಾಗಿ ಜನಾಂದೋಲನವನ್ನು ಪ್ರಾರಂಭಿಸಿದ್ದಾರೆ.

“ರಾಜ್ಯ ಸರ್ಕಾರ ಹಿಂದಿನ ಬಿಜೆಪಿ ಸರ್ಕಾರ ಆಡಳಿತದಿಂದ ತರಲಾದ ‘ಪ್ರತಿಭಟನೆಗಳು, ಪ್ರದರ್ಶನಗಳು ಮತ್ತು ಪ್ರತಿಭಟನಾ ಮೆರವಣಿಗೆಗಳ ಪರವಾನಗಿ ಮತ್ತು ನಿಯಂತ್ರಣ (ಬೆಂಗಳೂರು ನಗರ) ಆದೇಶ, 2021’ (Licensing and Regulation of Protests, Demonstrations and Protest Marches (Bengaluru City) Order, 2021) ಅನ್ನು ತಕ್ಷಣವೇ ಹಿಂಪಡೆಯಬೇಕು ಹಾಗೂ ಪ್ರತಿಭಟನೆಯ ಮೂಲಭೂತ ಹಕ್ಕನ್ನು ಚಲಾಯಿಸಿದ ಕಾರ್ಮಿಕರು, ರೈತರು, ದಲಿತ ಸಂಘಟನೆ ಕಾರ್ಯಕರ್ತರು ಮಹಿಳೆಯರು ಮತ್ತು ಇತರ ಶೋಷಿತ ಸಮುದಾಯಗಳಿಗೆ ಸೇರಿದವರ ಮೇಲೆ, ಪ್ರತಿಭಟನೆ ನಡೆಸಿದ ಕಾರಣಕ್ಕೆ ದಾಖಲಿಸಲಾದ ಎಲ್ಲ ಪ್ರಕರಣಗಳನ್ನು ತಕ್ಷಣವೇ ಹಿಂಪಡೆಯಬೇಕು” ಎಂದು ಜನಾಂದೋಲನ ಸರ್ಕಾರಕ್ಕೆ ಒತ್ತಾಯಿಸಿದೆ.

Advertisements

“ಅಕ್ಟೋಬರ್ 2 ರೊಳಗೆ ಈ ನಿಯಮವನ್ನು ಹಿಂತೆಗೆದುಕೊಳ್ಳದಿದ್ದರೆ, ಅಕ್ಟೋಬರ್ 2 ರಂದು, ಕಾರ್ಮಿಕ ಸಂಘಗಳು, ರೈತ ಸಂಘಟನೆಗಳು, ದಲಿತ ಸಂಘಟನೆಗಳು, ಮಹಿಳಾ ಸಂಘಟನೆಗಳು, ಎಲ್‌ಜಿಬಿಟಿಕ್ಯೂಐಎ (LGBTQIA) ಸಂಘಟನೆಗಳು ಸೇರಿದಂತೆ ನಾನಾ ಪ್ರಗತಿಪರ ಸಂಘಟನೆಗಳು ಎಂ.ಜಿ. ರಸ್ತೆಯಲ್ಲಿನ ಗಾಂಧೀಜಿ ಪ್ರತಿಮೆಯಿಂದ ವಿಧಾನಸೌಧದ ಬಾಬಾಸಾಹೇಬ ಡಾ.ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಪ್ರತಿಭಟನೆಯ ಹಕ್ಕಿಗಾಗಿ ಹೋರಾಡುತ್ತೇವೆ” ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.

“ಹಿಂದಿನ ಬಿಜೆಪಿ ಆಡಳಿತದಲ್ಲಿ ತೆಗೆದುಕೊಂಡ ನಿರ್ಧಾರದಿಂದಾಗಿ ಬೆಂಗಳೂರು ಪ್ರತಿಭಟನೆಯ ಹಕ್ಕನ್ನು ಕಳೆದುಕೊಂಡಿದೆ. ಈ ಮೂಲಭೂತ ಹಕ್ಕನ್ನು ಬೆಂಗಳೂರು ನಗರ ಪೊಲೀಸರು ಜನವರಿ 2022ರಲ್ಲಿ ತರಲಾದ ಪ್ರತಿಭಟನೆಗಳು, ಪ್ರದರ್ಶನಗಳು ಹಾಗೂ ಪ್ರತಿಭಟನಾ ಮೆರವಣಿಗೆಗಳ (ಬೆಂಗಳೂರು ನಗರ) ಆದೇಶ, 2021 ರ ಪರವಾನಗಿ ಮತ್ತು ನಿಯಂತ್ರಣದ ಮೂಲಕ ಟೊಳ್ಳು ಮಾಡಿದ್ದಾರೆ” ಎಂದು ಹೇಳಿದೆ.

“ಒಂದೂವರೆ ವರ್ಷದಿಂದ ಪೊಲೀಸರು ಫ್ರೀಡಂ ಪಾರ್ಕ್‌ ಹೊರತುಪಡಿಸಿ ಬೇರೆ ಯಾವುದೇ ಸ್ಥಳದಲ್ಲಿ ಪ್ರತಿಭಟನೆ, ಸಾರ್ವಜನಿಕ ಸಭೆಗಳನ್ನು ನಿರ್ಬಂಧಿಸಿದ್ದಾರೆ. ಮೆರವಣಿಗೆಗಳಿಗೆ ಅನುಮತಿ ನಿರಾಕರಿಸಿದ್ದಾರೆ. ಇದು ತಮ್ಮ ಮೂಲಭೂತ ಹಕ್ಕುಗಳ ಉಲ್ಲಂಘನೆಯನ್ನು ಪ್ರತಿಭಟಿಸಲು ಬಯಸುವ ಎಲ್ಲರಿಗೂ ಅಗಾಧವಾದ ಸಂಕಷ್ಟವನ್ನು ಉಂಟುಮಾಡಿದೆ” ಎಂದು ತಿಳಿಸಿದೆ.

“ಹೈಕೋರ್ಟ್‌ ಆದೇಶದ ಮೇರೆಗೆ ಈ ನಿರ್ಬಂಧವನ್ನು ತರಲಾಗಿದೆ ಎಂದು ಪೊಲೀಸರು ಹೇಳುತ್ತಾರೆ. ಆದರೆ ಅದು ಸರಿಯಲ್ಲ. 2022ರಲ್ಲಿ ಪ್ರತಿಭಟನೆಗಳ ಮೇಲೆ ನಿರ್ಬಂಧಗಳನ್ನು ಕೋರುತ್ತಿರುವ ಸುಮೋಟೋ ಪಿಐಎಲ್‌ (Suo-moto PIL)ನ ವಿಚಾರಣೆಯನ್ನು ನ್ಯಾಯಾಲಯ ನಡೆಸುತ್ತಿತ್ತು. ಅದರ ತೀರ್ಪು ಹೊರಬೀಳುವ ಮುನ್ನವೇ ಬೆಂಗಳೂರಿನ ಪೊಲೀಸ್‌ ಆಯುಕ್ತರು ಪ್ರತಿಭಟನೆಗಳನ್ನು ನಿಯಂತ್ರಿಸುವ ಪುಜಾಪ್ರಭುತ್ವ ವಿರೋಧಿ ಆದೇಶವನ್ನು ಹೊರಡಿಸಿದರು. 2021ರ ಆದೇಶ ಎಲ್ಲ ಪ್ರತಿಭಟನೆಗಳನ್ನು ಫ್ರೀಡಂ ಪಾರ್ಕ್‌ಗೆ ಮಾತ್ರ ನಿರ್ಬಂಧಿಸಿದೆ. ಈ 2021 ರ ಆದೇಶವನ್ನು ಹೊರಡಿಸಿದ ನಂತರ, ಹೈಕೋರ್ಟ್ ಪಿಐಎಲ್‌ ಅನ್ನು ಮುಕ್ತಾಯಗೊಳಿಸಿತು. ಹಾಗಾಗಿ, ಬೆಂಗಳೂರಿಗರು ಮತ್ತು ಪ್ರತಿಭಟಿಸುವ ಹಕ್ಕಿನ ನಡುವೆ ನಿಂತಿರುವುದು ಮಾಜಿ ಪೊಲೀಸ್ ಆಯುಕ್ತರು ಜಾರಿಗೊಳಿಸಿದ ಈ ಅಸಂವಿಧಾನಿಕ ಆದೇಶವೇ ಹೊರತು ನ್ಯಾಯಾಲಯದ ತೀರ್ಪಲ್ಲ. ಈ ಆದೇಶದಿಂದಾಗಿ ಫ್ರೀಡಂ ಪಾರ್ಕ್‌ನಲ್ಲಿ ಮಾತ್ರ ಪ್ರತಿಭಟನೆಗೆ ಅನುಮತಿ ನೀಡಲಾಗಿದೆ” ಎಂದು ಹೇಳಿದೆ.

ಮೂಲಭೂತ ಹಕ್ಕನ್ನು ಚಲಾಯಿಸಿದ್ದಕ್ಕಾಗಿ ಕೆಲವರ ವಿರುದ್ಧ ಪ್ರಕರಣ ದಾಖಲು

ದೇವನಹಳ್ಳಿಯಲ್ಲಿ ಭೂಸ್ವಾಧೀನಕ್ಕೆ ಪ್ರತಿಭಟನೆ ನಡೆಸುತ್ತಿರುವ ರೈತರು, ಒಳಮೀಸಲಾತಿ ಕೋರಿ ದಲಿತ ಸಂಘಟನೆ ಕಾರ್ಯಕರ್ತರು, ಹಕ್ಕುಗಳಿಗಾಗಿ ಪ್ರತಿಭಟನೆ ನಡೆಸುತ್ತಿರುವ ಪೌರಕಾರ್ಮಿಕರು, ಸ್ಯಾಂಕಿ ಸೇತುವೆ ಸಮಸ್ಯೆ ವಿರೋಧಿಸಿ ಮಲ್ಲೇಶ್ವರಂ ನಿವಾಸಿಗಳು, ಪ್ರೈಡ್ ಮಾರ್ಚ್ ಆಯೋಜಿಸಲು ಬಯಸಿದ್ದ ಎಲ್‌ಜಿಬಿಟಿಕ್ಯೂಐ ಸಮುದಾಯದವರಿಗೆ ಪ್ರತಿಭಟನೆಯ, ಮೆರವಣಿಗೆಯ ಹಕ್ಕನ್ನು ನಿರಾಕರಿಸಲಾಗಿದೆ. ಈ ಮೂಲಭೂತ ಹಕ್ಕನ್ನು ಚಲಾಯಿಸಿದ್ದಕ್ಕಾಗಿ ಕೆಲವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಪ್ರತಿಭಟನೆಗಳ ಫಲ

ಬಾಬಾಸಾಹೇಬ್ ಅಂಬೇಡ್ಕರ್ ಅವರು ನೀಡಿರುವ ಸಂವಿಧಾನದಲ್ಲಿ, ಪ್ರತಿಭಟನೆಗಳು ಅಭಿವ್ಯಕ್ತಿ ಸ್ವಾತಂತ್ರ್ಯದ ಸಾಂವಿಧಾನಿಕ ಹಕ್ಕಿನ ಒಂದು ಭಾಗವಾಗಿದೆ. ಈ ಹಕ್ಕಿನಿಂದಲೇ ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವಾಗಿದೆ.

  • 2012ರ ದೆಹಲಿ ಸಾಮೂಹಿಕ ಅತ್ಯಾಚಾರದ ನಂತರದ ಪ್ರತಿಭಟನೆಗಳ ಫಲವಾಗಿ ಅತ್ಯಾಚಾರ-ವಿರೋಧಿ ಕಾನೂನುಗಳು ಬಲವಾದವು.
  • ಗಾರ್ಮೆಂಟ್ಸ್ ಕಾರ್ಮಿಕರ ಪ್ರತಿಭಟನೆಗಳು ಕಾರ್ಮಿಕ ವಿರೋಧಿ ಪಿಎಫ್ ನಿಯಮಗಳನ್ನು ರದ್ದುಗೊಳಿಸಿದವು.
  • ಪ್ರತಿಭಟನೆಯ ನಂತರವೇ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೆ ವೇತನ ಹೆಚ್ಚಳವಾಗಿದೆ.
  • ರೈತರ ಪ್ರತಿಭಟನೆಗಳು ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳಲು ಕಾರಣವಾಯಿತು.
  • ಮರಗಳನ್ನು ಅನಿಯಂತ್ರಿತವಾಗಿ ಕಡಿಯುವುದನ್ನು ಪ್ರತಿಭಟಿಸಿದ್ದರಿಂದ ಬೆಂಗಳೂರಿನಲ್ಲಿ ಬಹಳಷ್ಟು ಮರಗಳು ಇನ್ನೂ ಉಳಿದಿವೆ.
  • ದೇಶಾದ್ಯಂತ ಪ್ರತಿಭಟನೆಗಳ ಕಾರಣ ಸಂವಿಧಾನ ವಿರೋಧಿ ಎನ್‌ಆರ್‌ಸಿ-ಸಿಎಎ ಅನ್ನು ಜಾರಿ ಮಾಡಲಾಗಿಲ್ಲ.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಯಶವಂತಪುರ ರೈಲ್ವೆ ನಿಲ್ದಾಣ ಪುನರಾಭಿವೃದ್ಧಿ; 2025ಕ್ಕೆ ಪೂರ್ಣ

“ಬಾಬಾಸಾಹೇಬ್ ಅಂಬೇಡ್ಕರ್ ನಮಗೆ ನೀಡಿರುವ ಸಂವಿಧಾನದ ಆರ್ಟಿಕಲ್ 19 (1) ವಾಕ್ ಸ್ವಾತಂತ್ರ್ಯದ ಹಕ್ಕನ್ನು ರಕ್ಷಿಸುತ್ತದೆ. ಶಸ್ತ್ರಾಸ್ತ್ರಗಳಿಲ್ಲದೆ ಮುಕ್ತವಾಗಿ ಸಭೆ ಸೇರುವ ಹಕ್ಕನ್ನು ರಕ್ಷಿಸುತ್ತದೆ. ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆಗಳನ್ನು ನಿರ್ಬಂಧಿಸುವ ಆದೇಶವು ಈ ನಿಯಮಗಳನ್ನು ಉಲ್ಲಂಘಿಸಿದೆ. ಆದ್ದರಿಂದ ಈ ಅಪ್ರಜಾಸತ್ತಾತ್ಮಕ ನಿಯಮವನ್ನು ಸರ್ಕಾರ ಹಿಂಪಡೆಯಬೇಕು” ಎಂದು ಆಗ್ರಹಿಸಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೆವಿನ್ ಕಾರ್ಟರ್, ಸಂಗೊಳ್ಳಿಯ ಸಂಗವ್ವ ಇಬ್ಬರೂ ಫೋಟೋ ಜರ್ನಲಿಸಂನ ರೂಪಕಗಳಾಗಿಬಿಟ್ಟರು: ಕೆ ವಿ ಪ್ರಭಾಕರ್

ಕೆವಿನ್ ಕಾರ್ಟರ್, ಸಂಗೊಳ್ಳಿಯ ಸಂಗವ್ವ ಇಬ್ಬರೂ ಫೋಟೋ ಜರ್ನಲಿಸಂನ ರೂಪಕಗಳಾಗಿಬಿಟ್ಟರು. ನೋಟಕ್ಕೆ...

ಬೆಂಗಳೂರು | ಹವಾಮಾನ ಕ್ರಿಯೆಗೆ ಪರಿಣಾಮಕಾರಿ ಕೊಡುಗೆ ನೀಡಲು ಅದರ ಮಹತ್ವ ತಿಳಿಯುವುದು ಅಗತ್ಯ: ಪ್ರೀತಿ ಗೆಹ್ಲೋಟ್

ಹವಾಮಾನ ಕ್ರಿಯೆಗೆ ಪರಿಣಾಮಕಾರಿಯಾಗಿ ಕೊಡುಗೆ ನೀಡಲು, ಮಕ್ಕಳು ಅದರ ಮಹತ್ವ ಮತ್ತು...

ಅರ್ಧದಲ್ಲಿ ನಿಲ್ಲಿಸಿರುವ ರಸ್ತೆ ಕಾಮಗಾರಿಗಳನ್ನು ಶೀಘ್ರದಲ್ಲೇ ಮುಗಿಸಿ: ಬಿಬಿಎಂಪಿ ಕಮಿಷನರ್ ಮಹೇಶ್ವರ್ ರಾವ್

ಬೆಂಗಳೂರು ನಗರದಲ್ಲಿ ಅರ್ಧದಲ್ಲೇ ನಿಲ್ಲಿಸಿರುವ ರಸ್ತೆ ಕಾಮಗಾರಿಗಳನ್ನು ಹಾಗೂ ರಸ್ತೆ ಕತ್ತರಿಸಿರುವ...

Download Eedina App Android / iOS

X