ಸಂವಿಧಾನವನ್ನು ಗೌರವಿಸುವ ನಾಟಕವಾಡುತ್ತಲೇ ದೇಶ ಒಪ್ಪಿಕೊಂಡಿರುವ ಸಂವಿಧಾನದ ಮೌಲ್ಯಗಳನ್ನು ಮತ್ತು ದೇಶ ಸಾಧಿಸಬೇಕೆಂದುಕೊಂಡಿರುವ ಸಂವಿಧಾನದ ಆಶಯಗಳನ್ನು ನಾಶ ಮಾಡುತ್ತಿರುವ ಈ ಬ್ರಾಹ್ಮಣ-ಬನಿಯಾಗಳು ತಮ್ಮ ಹಿತ ಕಾಪಾಡಿಕೊಳ್ಳಲು ದೇಶದ ಬಹುಸಂಖ್ಯಾತರ ಬದುಕನ್ನು ರೂಪಿಸಬೇಕಾದ ಸಂವಿಧಾನವನ್ನೇ ಬುಡಮೇಲು ಮಾಡಲು ಪ್ರಯತ್ನ ಮಾಡುತ್ತಿರುವ ನಿಜವಾದ ದೇಶದ್ರೋಹಿಗಳು
ಕೇಂದ್ರ ಸರ್ಕಾರ ನೂತನ ಸಂಸತ್ ಭವನದಲ್ಲಿ ಆರಂಭವಾಗಿರುವ ಮೊದಲ ಅಧಿವೇಶನದ ನೆನಪಿಗಾಗಿ ಸಂಸದರಿಗೆ ನೀಡಿರುವ ಸಂವಿಧಾನದ ಪ್ರತಿಯ ಪ್ರಸ್ತಾವನೆಯಿಂದ ‘ಜಾತ್ಯತೀತ’ ಮತ್ತು ‘ಸಮಾಜವಾದ’ ಪದಗಳನ್ನು ತೆಗೆದು ಹಾಕಿರುವುದು ವಿವಾದಕ್ಕಿಡಾಗಿದೆ. ಸಂವಿಧಾನದ ಆಶಯಗಳಾಗಿರುವ ‘ಜಾತ್ಯತೀತ ಮತ್ತು ಸಮಾಜವಾದ’ ಪ್ರಸ್ತಾವನೆಯಿಂದ ಈ ಎರಡೂ ಪದಗಳನ್ನು ಕಿತ್ತು ಹಾಕಿರುವುದಕ್ಕೆ ಬರುತ್ತಿರುವ ವಿಮರ್ಶೆಗೆ ಉತ್ತರವಾಗಿ ಕೇಂದ್ರ ಸರ್ಕಾರ, 1949ರಲ್ಲಿ ಅಂಗೀಕರಿಸಲಾದ ಸಂವಿಧಾನದ ಮೂಲ ಪ್ರತಿಯಲ್ಲಿ ‘ಸಮಾಜವಾದ, ಜಾತ್ಯತೀತ ಮತ್ತು ಸಮಗ್ರತೆ’ ಎನ್ನುವ ಪದಗಳು ಇರಲಿಲ್ಲ ಎನ್ನುವ ಬಾಲಿಶ ಉತ್ತರವನ್ನೂ ನೀಡಿದೆ.
ಹೌದು ಈ ಪದಗಳನ್ನು ಸಂವಿಧಾನದ ಪ್ರಸ್ತಾವನೆಗೆ ಸೇರಿಸಿದ್ದು 1972ರಲ್ಲಿ, ಸಂವಿಧಾನಕ್ಕೆ ಮಾಡಿದ 42ನೆಯ ತಿದ್ದುಪಡಿಯ ಮೂಲಕವೇ. ಸರ್ಕಾರ ಒಪ್ಪಿ, ಅನುಸರಿಸಬೇಕಿರುವುದು ತಿದ್ದುಪಡಿಗೆ ಒಳಗಾಗಿರುವ ಸಂವಿಧಾನವನ್ನೆ ಹೊರತು ತನಗಿಷ್ಟ ಬಂದ ಸಂವಿಧಾನವನ್ನಲ್ಲ.
ಸಂವಿಧಾನದ ಪ್ರಸ್ತಾವನೆಯಲ್ಲಿರುವ ‘ಸಾರ್ವಭೌಮ, ಸಮಾಜವಾದಿ, ಜಾತ್ಯತೀತ, ಪ್ರಜಾಸತ್ತಾತ್ಮಕ ಗಣರಾಜ್ಯ’ ಪದಗಳು ನಮ್ಮ ದೇಶದ ಸ್ವರೂಪವನ್ನು ಮತ್ತು ಅಂತಿಮವಾಗಿ ದೇಶ ತಲುಪಬೇಕಾದ ಸ್ಥಿತಿಯನ್ನು ವ್ಯಾಖ್ಯಾನ ಮಾಡುವ ಆಶಯಾತ್ಮಕ ಮೌಲ್ಯಗಳು.
ಈಗ ಮೂಲ ಸಂವಿಧಾನದಲ್ಲಿ ಇಲ್ಲ ಎನ್ನುವ ನೆಪದಲ್ಲಿ ಕೈಬಿಟ್ಟಿರುವ ‘ಸಮಾಜವಾದ’ ಎನ್ನುವ ಪದ ದೇಶದ ಸಂಪತ್ತಿನ ಮೇಲೆ ಎಲ್ಲ ನಾಗರಿಕರಿಗೂ ಸಮಾನ ಹಕ್ಕು ಇರಬೇಕು, ಸಂಪತ್ತಿನ ಸಮಾನ ಹಂಚಿಕೆಯಾಗಬೇಕು ಹಾಗೆ ಆಗಬೇಕಾದರೆ ದೇಶದ ಸಂಪತ್ತು ಪ್ರಭುತ್ವದ ಒಡೆತನದಲ್ಲಿರಬೇಕು ಎನ್ನುವ ಆಶಯವನ್ನು ಹೊಂದಿದ್ದರೆ; ‘ಜಾತ್ಯತೀತ’ ಎನ್ನುವ ಪದ ದೇಶದ ನಾಗರಿಕರು ತಮಗೆ ಇಷ್ಟ ಬಂದ ಧರ್ಮವನ್ನು ನಂಬುವ, ಆಚರಿಸುವ, ಆರಾಧಿಸುವ ಸ್ವಾತಂತ್ರ್ಯವನ್ನು ಸಂವಿಧಾನದ ಅಡಿಯಲ್ಲಿ ನೀಡುವ ಆಶಯವನ್ನು ಹೊಂದಿದೆ.
ಸಂವಿಧಾನ ಎಷ್ಟೇ ಉದಾತ್ತ ಮೌಲ್ಯಗಳನ್ನು ಹೊಂದಿದ್ದರೂ ಅದನ್ನ ಜಾರಿಗೊಳಿಸುವವರು ಸಾಂವಿಧಾನಿಕ ನೈತಿಕತೆಯನ್ನು ಹೊಂದಿರದಿದ್ದರೆ ಸಂವಿಧಾನ ಜಾರಿಯಾಗುವುದಿಲ್ಲ. ಹಾಗಾಗಿಯೇ ಸ್ವಾತಂತ್ರ್ಯದ ನಂತರ ಸಂವಿಧಾನ ಯತಾವತ್ತಾಗಿ ಜಾರಿಯಾಗಲಿಲ್ಲ.
ಸ್ವಾತಂತ್ರ್ಯದ ನಂತರ ಬಂದ ಹಲವು ಸರ್ಕಾರಗಳು ಸಂವಿಧಾನದ ಆಶಯಗಳನ್ನು ಜಾರಿ ಮಾಡಲು ಪ್ರಾಮಾಣಿಕವಾಗಿ ಪ್ರಯತ್ನ ಪಡೆದಿದ್ದರೂ ಸಂವಿಧಾನದ ಆಶಯಗಳಿಗೆ ಧಕ್ಕೆ ಮಾಡುವ, ಸಂವಿಧಾನವನ್ನು ಬದಲು ಮಾಡುವ ಧೈರ್ಯ ತೋರಲಿಲ್ಲ. ಆದರೆ ಕಳೆದ ಹತ್ತು ವರ್ಷಗಳಿಂದ ಈಚೆಗೆ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರ ಮತ್ತು ಸಂಘಪರಿವಾರ ಸಂವಿಧಾನದ ಆಶಯಗಳನ್ನು ಬುಡಮೇಲು ಮಾಡುವ ನೀಚತನವನ್ನು ಪ್ರದರ್ಶಿಸುತ್ತಾ ಬಂದಿದೆ.
ಸರ್ಕಾರ ದೇಶದ ಸಂಪತ್ತಿನ ಒಡತನದಲ್ಲಿರುವ ಅಸಮಾನತೆಯನ್ನು ಕಡಿಮೆ ಮಾಡುವ ಕೆಲಸ ಮಾಡದೆ ಕೆಲವೇ ಕೆಲವು ವ್ಯಕ್ತಿಗಳ ಒಡೆತನಕ್ಕೆ ಇಡಿ ದೇಶ ಒಳಗಾಗುವ ಪ್ರಕ್ರಿಯೆಯನ್ನು ಚಾಲ್ತಿಯಲ್ಲಿಟ್ಟಿದೆ. ಇದು ಸಂವಿಧಾನ ಪ್ರತಿಪಾದಿಸುವ ಸಮಾಜವಾದಿ ಮೌಲ್ಯದ ಅಪಮೌಲ್ಯೀಕರಣ.
ಇನ್ನು ಹಲವು ಧರ್ಮ- ಜಾತಿಗಳನ್ನು ಹೊಂದಿರುವ ನಮ್ಮ ಸಮಾಜ ಜಾತ್ಯತೀತವಾಗಿರಬೇಕು ಆ ಮೂಲಕ ಯಾವುದೇ ಧರ್ಮ, ಜಾತಿಯ ಮೌಲ್ಯಗಳು, ನಂಬಿಕೆಗಳು ಇತರರ ಮೇಲೆ ಹೇರಲ್ಪಡಬಾರದು ಎನ್ನುವ ಆಶಯವನ್ನು ‘ಜಾತ್ಯತೀತ’ ಪದ ಆಶಿಸುತ್ತದೆ. ಆದರೆ ಈ ಮೌಲ್ಯಕ್ಕೆ ವಿರುದ್ಧವಾದುದನ್ನೇ ಕೇಂದ್ರ ಸರ್ಕಾರದ ತನ್ನ ಸಂಸ್ಥೆಗಳ ಮೂಲಕ ಮಾಡಿಕೊಂಡು ಬರುತ್ತಿದೆ.
ಸಂವಿಧಾನಕ್ಕೆ ವಿರುದ್ಧವಾಗಿ ಹಿಂದೂ ಧರ್ಮವೇ ಭಾರತದ ಧರ್ಮ ಎಂದು ಪ್ರತಿಪಾದಿಸುತ್ತಾ ಇಡಿ ದೇಶವನ್ನು ಹಿಂದುತ್ವೀಕರಣಗೊಳಿಸಲು ಪ್ರಯತ್ನಿಸುತ್ತಿದೆ. ಇದಕ್ಕೆ ಕೇಂದ್ರ ಸರ್ಕಾರ ನೇರವಾಗಿ ಹೆಗಲು ಕೊಟ್ಟಿದ್ದರೆ, ಸಂಘಪರಿವಾರ ಸಮಾಜವನ್ನು ದೇವರು-ಧರ್ಮದ ಹೆಸರಿನಲ್ಲಿ ವಿಭಜನೆ ಮಾಡಿ ನಾಗರಿಕ ಸಮಾಜ ಕೂಡ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುವಂತೆ ಮಾಡುತ್ತಿದೆ. ಸಂವಿಧಾನದ ಮೌಲ್ಯಗಳಿಗೆ ವಿರುದ್ಧವಾದ ಮನುಧರ್ಮಶಾಸ್ತ್ರದ ಮೌಲ್ಯಗಳನ್ನು ಜಾರಿ ಮಾಡುವ ಹಲವು ಪ್ರಯತ್ನಗಳನ್ನು ಸರ್ಕಾರದ ಸಂಸ್ಥೆಗಳು ಮಾಡುತ್ತಿವೆ.
ಹಿಂದೂ ರಾಷ್ಟ್ರದ ಹೆಸರಿನಲ್ಲಿ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯವನ್ನು exclude ಮಾಡುತ್ತಾ, ದಲಿತ ಮತ್ತು ಅತಿ ಹಿಂದುಳಿದ ಸಮುದಾಯಗಳನ್ನು appropriate ಮಾಡುತ್ತಾ ಅಧಿಕಾರದಲ್ಲಿದ್ದುಕೊಂಡು ಇಡಿ ದೇಶವನ್ನು ತಪ್ಪು ದಾರಿಯಲ್ಲಿ ತೆಗೆದುಕೊಂಡು ಹೋಗುತ್ತಿದೆ.
ಹಾಗಾಗಿ ಈಗ ಕೇಂದ್ರ ಸರ್ಕಾರ ಸಂವಿಧಾನದ ಪ್ರಸ್ತಾವನೆಯಿಂದ ತೆಗೆದಿರುವ ‘ಸಮಾಜವಾದ ಮತ್ತು ಜಾತ್ಯತೀತ’ ಪದಗಳು ಸಂವಿಧಾನದ ಮೇಲೆ ಕೇಂದ್ರ ಸರ್ಕಾರ ನಡೆಸುತ್ತಿರುವ ಪರೋಕ್ಷ ದಾಳಿ ಅಲ್ಲ, ನೇರವಾದ ದಾಳಿ. ಸಂವಿಧಾನದ ಅಡಿಪಾಯವನ್ನೇ ಅಲುಗಾಡಿಸಿ ಶಿಥಿಲಗೊಳಿಸುತ್ತಿರುವ ಅಪಾಯಕಾರಿ ನಡೆ.
ಎಲ್ಲರಿಗೂ ಸಂಪತ್ತಿನ ಸಮಾನ ಹಂಚಿಕೆ ಆಗಬೇಕು ಎನ್ನುವ ಆಶಯದ ‘ಸಮಾಜವಾದ’ ಎಲ್ಲ ಸಂಪತ್ತು ತಮಗೆ ಇರಲಿ ಅಂತ ಬಯಸುವ ಬನಿಯಾಗಳಿಗೆ ಅಪಾಯಕಾರಿ, ಎಲ್ಲ ಜಾತಿ-ಧರ್ಮಗಳಿಗೂ ಸಮಾನ ಧಾರ್ಮಿಕ-ಆಧ್ಯಾತ್ಮಿಕ ಸ್ವಾತಂತ್ರ್ಯ, ಸಮಾನತೆ ಇರಬೇಕು ಆಶಯದ ‘ಜಾತ್ಯತೀತ’ ಪದ ವರ್ಣವ್ಯವಸ್ಥೆ ಪ್ರತಿಪಾದಿಸಿ ತಾವು ಶ್ರೇಷ್ಠರು ಅನ್ನುವ ಮಿಥ್ಯೆಯನ್ನು ಜನ ಒಪ್ಪಿ ಅನುಸರಿಸುವಂತೆ ಮಾಡುವ ಬ್ರಾಹ್ಮಣಶಾಹಿಗೆ ಅಪಾಯಕಾರಿ.
ಸಂವಿಧಾನವನ್ನು ಗೌರವಿಸುವ ನಾಟಕವಾಡುತ್ತಲೇ ದೇಶ ಒಪ್ಪಿಕೊಂಡಿರುವ ಸಂವಿಧಾನದ ಮೌಲ್ಯಗಳನ್ನು ಮತ್ತು ದೇಶ ಸಾಧಿಸಬೇಕೆಂದುಕೊಂಡಿರುವ ಸಂವಿಧಾನದ ಆಶಯಗಳನ್ನು ನಾಶ ಮಾಡುತ್ತಿರುವ ಈ ಬ್ರಾಹ್ಮಣ–ಬನಿಯಾಗಳು ತಮ್ಮ ಹಿತ ಕಾಪಾಡಿಕೊಳ್ಳಲು ದೇಶದ ಬಹುಸಂಖ್ಯಾತರ ಬದುಕನ್ನು ರೂಪಿಸಬೇಕಾದ ಸಂವಿಧಾನವನ್ನೇ ಬುಡಮೇಲು ಮಾಡಲು ಪ್ರಯತ್ನ ಮಾಡುತ್ತಿರುವ ನಿಜವಾದ ದೇಶದ್ರೋಹಿಗಳು.

Narendra modi is OBC.
WHY YOU ARE WRITING WITHOUT KNOWING THE FACTS AND MISLEADING.
AND SPREADING HATRED REFERRING TO CASTE. Write articles without naming caste, if you really intend to be JATHYATEETHA.