ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ನೆಲೋಗಿ ಗ್ರಾಮದ ಅಮೀನಾ ಬಿ ಎಂಬುವವರ ಜಮೀನಿನಲ್ಲಿ 1 ಎಕರೆ 37 ಗುಂಟೆಯಲ್ಲಿ ಎಳ್ಳು, ತೊಗರಿ ಬೆಳೆಯಲು ಬೀಜ, ಗೊಬ್ಬರ, ಕಳೆ ತೆಗಿಸಲು ಸೇರಿದಂತೆ ಇತರೆ ಕಾರ್ಯಗಳಿಗೆ ₹2 ಲಕ್ಷ ರೂ. ಖರ್ಚು ಮಾಡಿ ಬೆಳೆ ಬೆಳೆದಿದ್ದರು. ಜಮೀನಿನಲ್ಲಿ ಬೆಳೆದು ನಿಂತ ಬೆಳೆಯನ್ನು ಕಿಡಿಗೇಡಿಗಳು ಸಂಪೂರ್ಣ ನಾಶ ಮಾಡಿದ್ದಾರೆ. ಇದರಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಅಮೀನಾ ಬಿ ತಂದೆಗೆ ಒಬ್ಬಳೆ ಮಗಳು ಇದ್ದು, ಅವರ ತಂದೆ 1 ಎಕರೆ 37 ಗುಂಟೆ ಜಮೀನು ನೀಡಿದ್ದರು. ಜಮೀನು ಅಮೀನಾ ಬಿ ಅವರ ಹೆಸರಿನಲ್ಲಿದ್ದರೂ ಅವರ ದೊಡ್ಡಪ್ಪನ ಸೊಸೆ, ಮಕ್ಕಳು ರಸೂಲ್ ಬಿ, ಗಂಡ ಬಾಬುಮಿಯ್ಯ ಜಮೀನು ವಿಚಾರದಲ್ಲಿ ಮೊದಲಿನಿಂದಲು ತಕರಾರು ಇತ್ತು. ಹಳೆಯ ದ್ವೇಷ ಇಟ್ಟುಕೊಂಡು ಅಮೀನಾ ಬಿ ಅವರ ಪತಿ ಖಾಜಾ ಹುಸೇನ್ ತೀರಿಕೊಂಡ ಬಳಿಕ ಮತ್ತೆ ಅದೇ ಹಗೆ ಸಾಧಿಸಲು ದೊಡ್ಡಪ್ಪನ ಸೊಸೆ ಮಕ್ಕಳು ಸೇರಿಕೊಂಡು 1 ಎಕರೆ 37 ಗುಂಟೆಯಲ್ಲಿ ಬೆಳೆದು ನಿಂತಿದ್ದ ಬೆಳೆಯನ್ನು ಸಂಪೂರ್ಣ ನಾಶ ಪಡಿಸಿದ್ದಾರೆ. ಇದರಿಂದ ಅಮೀನಾ ಬಿ ಅವರು ಊಟ ನೀರು ಇಲ್ಲದೆ ಹಾಸಿಗೆ ಹಿಡಿದ್ದಾರೆ.
ಅಮೀನಾ. ಬಿ. ಇವರಿಗೆ ಮೂರು ಮಂದಿ ಹೆಣ್ಣು ಮಕ್ಕಳು 3 ಮಂದಿ ಗಂಡು ಮಕ್ಕಳು. ಹೆಣ್ಣು ಮಕ್ಕಳು ತಮ್ಮ ಗಂಡನ ಮನೆಯಲ್ಲಿದ್ದಾರೆ. ಇಬ್ಬರು ಗಂಡು ಮಕ್ಕಳು ಯಡ್ರಾಮಿ ತಾಲೂಕು ಮಳಿಯಲ್ಲಿ ವಾಸವಾಗಿದ್ದಾರೆ. ಇನ್ನೊಬ ಮಗನ ಜೊತೆಗೆ ಅಮೀನಾ. ಬಿ ನೆಲೋಗಿ ಅವರ ತವರಿನಲ್ಲಿ ವಾಸವಾಗಿದ್ದಾರೆ.
ಅಮೀನಾ ಬಿ ಕುಟುಂಬಸ್ಥರು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ನಮಗೆ ಬೆಂಬಲವಾಗಿ ಹಿಂದೆ ಮುಂದೆ ಯಾರೂ ಇಲ್ಲವೆಂದು ತಿಳಿದು ನಮ್ಮ ಮೇಲೆ ದ್ವೇಷ ಸಾಧಿಸುತ್ತಾರೆ. ಇದೀಗ ಇಂಥ ಬರಗಾಲದಲ್ಲಿಯೂ ಕಷ್ಟಪಟ್ಟು ಬೆಳೆದ ಬೆಳೆಯನ್ನು ನಾಶ ಮಾಡಿದ್ದಾರೆ. ಈ ವಿಚಾರವಾಗಿ ನೆಲೋಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇವೆ” ಎಂದು ಅವಲತ್ತುಕೊಂಡರು.
ಈ ಸುದ್ದಿ ಓದಿದ್ದೀರಾ? ಕಂದಾಯ ಕರ್ಮಕಾಂಡ-1 | ರೈತರನ್ನು ಹೆಜ್ಜೆ ಹೆಜ್ಜೆಗೂ ಹಿಂಸಿಸುವ ಇಲಾಖೆ
ಪಿಎಸ್‌ಐ ಅಶೋಕ್ ಪಾಟೀಲ್ ಮಾತನಾಡಿ, “ಸಂತ್ರಸ್ತರು ದೂರು ನೀಡಿದ್ದಾರೆ. ಇನ್ನೂ ದೂರು ದಾಖಲಿಸಿಕೊಂಡಿಲ್ಲ. ದಾಖಲಿಸಿಕೊಳ್ಳುವಂತೆ ತಿಳಿಸಿದ್ದೇನೆ” ಎಂದು ತಿಳಿಸಿದರು.