- ಸುಪ್ರೀಂ ಕೋರ್ಟ್ ಸೂಚನೆ ಬೆನ್ನಲ್ಲೇ ಸರ್ಕಾರಕ್ಕೆ ಕರವೇ ಎಚ್ಚರಿಕೆ
- ರಾಜ್ಯದ ಎಲ್ಲ ಸಂಸದರು ರಾಜೀನಾಮೆ ನೀಡಬೇಕು: ರೈತರ ಆಗ್ರಹ
ತಮಿಳುನಾಡಿಗೆ 15 ದಿನಗಳ ಕಾಲ ಪ್ರತಿನಿತ್ಯ 5 ಸಾವಿರ ಕ್ಯೂಸೆಕ್ ನೀರು ಹರಿಬಿಡಲು ಸುಪ್ರೀಂ ಕೋರ್ಟ್ ಸೂಚನೆ ನೀಡಿದ ಬೆನ್ನಲ್ಲೇ ಯಾವುದೇ ಕಾರಣಕ್ಕೂ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಬಾರದು ಎಂದು ರಾಜ್ಯ ಸರ್ಕಾರಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಎಚ್ಚರಿಕೆ ಕೊಟ್ಟಿದೆ.
ಕಾವೇರಿಗಾಗಿ ಬೆಂಗಳೂರಿನಲ್ಲಿ ಗುರುವಾರ ಬೃಹತ್ ಪ್ರತಿಭಟನೆ ನಡೆಸಲು ಕರವೇ ಅಧ್ಯಕ್ಷ ನಾರಾಯಣಗೌಡ ಮುಂದಾಗಿದ್ದಾರೆ. “ಯಾವುದೇ ಕಾರಣಕ್ಕೂ ಕಾವೇರಿ ನೀರನ್ನ ತಮಿಳುನಾಡಿಗೆ ಹರಿಸಬಾರದು. ಕಾವೇರಿ ನೀರು ಹರಿಸುವುದನ್ನ ಕೂಡಲೇ ನಿಲ್ಲಿಸಬೇಕು” ಎಂದು ಆಗ್ರಹಿಸಿ ಇಂದು ಕರವೇ ನಾರಾಯಣಗೌಡ ನೇತೃತ್ವದಲ್ಲಿ ವಿಧಾನಸೌಧ ಮುತ್ತಿಗೆ ಹಾಕಲು ನಿರ್ಧರಿಸಲಾಗಿದೆ.
ಬೆಂಗಳೂರು, ಮಂಡ್ಯ, ಚಾಮರಾಜನಗರ ಸೇರಿದಂತೆ ರಾಜ್ಯದ ಹಲವೆಡೆ ಆಕ್ರೋಶ ಕೂಡ ಭುಗಿಲೆದ್ದಿದೆ. ಸುಪ್ರೀಂ ಕೋರ್ಟ್ ಸೂಚನೆ ಹೊರ ಬೀಳುತ್ತಿದ್ದಂತೆ ರಾಜ್ಯದ ಅನೇಕ ಕಡೆಗಳಲ್ಲಿ ರೈತರು ಪ್ರತಿಭಟನೆಗೆ ಮುಂದಾಗಿದ್ದಾರೆ. ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಮುಂಭಾಗ ಬೃಹತ್ ಪ್ರತಿಭಟನೆ ನಡೆಸಲು ಕೆಆಸ್ಎಸ್ ಪಕ್ಷ ಕರೆ ಕೊಟ್ಟಿದೆ.
ಈ ಸುದ್ದಿ ಓದಿದ್ದೀರಾ? ಸುಪ್ರೀಂನಲ್ಲಿ ಕರ್ನಾಟಕಕ್ಕೆ ಹಿನ್ನಡೆ: 15 ದಿನ 5 ಸಾವಿರ ಕ್ಯೂಸೆಕ್ ನೀರು ಹರಿಸಲು ನಿರ್ದೇಶನ
ಕನ್ನಡ ಪರ ಹೋರಾಟಗಾರರು ಮಂಡ್ಯದಲ್ಲಿ ಮಹಿಳಾ ಹೋರಾಟಗಾರ್ತಿಯರು ಸುಪ್ರೀಂಕೋರ್ಟ್ ಸೂಚನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಸುಪ್ರೀಂ ಕೋರ್ಟ್ ಸೂಚನೆ ಮರಣ ಶಾಸನ ಎಂದು ಕಣ್ಣೀರಿಟ್ಟಿದ್ದು, ರಾಜ್ಯದ ಎಲ್ಲ ಸಂಸದರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.