ಅಗಸ್ಟ್ 28ರಂದು ನನ್ನನ್ನು ಕೊಲೆ ಮಾಡಲು ದುಷ್ಕರ್ಮಿಗಳು ಯತ್ನಿಸಿದ್ದರು, ನನ್ನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಕೂದಲೆಳೆಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದೇನೆ. ನನ್ನ ಮೇಲೆ ದಾಳಿ ಮಾಡಿದ ದುಷ್ಕರ್ಮಿಗಳನ್ನು ಬಂಧಿಸಬೇಕೆಂದು ಒತ್ಥಾಯಿಸಿ ರೈತ ಸಂಘಟನೆಗಳು, ಕಾರ್ಮಿಕರು, ಪ್ರಜ್ಞಾವಂತ ನಾಗರಿಕರು ಪ್ರತಿಭಟನೆ ನಡೆಸಿದ್ದಾರೆ. ನನ್ನ ಬೆಂಬಲಕ್ಕೆ ನಿಂತಿದ್ದಾರೆ. ಅವರೆಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ರೈತ ಹೋರಾಟಗಾರ ಯಲ್ಲಪ್ಪ ಹೆಗಡೆ ಹೇಳಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆ ಸಮಯದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಿರುದ್ಧ ಮಾನಹಾನಿಕರ ಪೋಸ್ಟ್ ಹಾಕಿದ್ದಾರೆ ಎಂದು ಆರೋಪಿಸಿ ಮಾಜಿ ಸಚಿವ ಮುರುಗೇಶ್ ನಿರಾಣಿ ಅವರು ಯಲ್ಲಪ್ಪ ಹೆಗಡೆ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು. 5 ಕೋಟಿ ರೂಪಾಯಿ ಪರಿಹಾರ ಕೋರಿ ಲೀಗಲ್ ನೋಟಿಸ್ ಕಳಿಸಿದ್ದರು. ನಿರಾಣಿ ಅವರಿಗೆ ಪರಿಹಾರ ನೀಡಲು ಯಲ್ಲಪ್ಪ ಅವರು ಭಿಕ್ಷಾಟನೆ ಮೂಲಕ ಹಣ ಸಂಗ್ರಹಿಸುತ್ತಿದ್ದರು. ಈ ವೇಳೆ, ಅವರ ಮೇಲೆ ದುಷ್ಕರ್ಮಿಗಳ ಗುಂಪೊಂದು ಹಲ್ಲೆ ನಡೆಸಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಆರೋಗ್ಯ ಚೇತರಿಕೆಯಾದ ಬಳಿಕ ಯಲ್ಲಪ್ಪ ಅವರು ಬಾಗಲಕೋಟೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ.
“ನನ್ನ ಮೇಲೆ ಹಲ್ಲೆ ನಡೆದ ತಕ್ಷಣ, ಬಾಗಲಕೋಟೆ ಸೇರಿದಂತೆ ರಾಜ್ಯದ ನಾನಾ ಭಾಗಗಳಲ್ಲಿ ಹಲವರು ಪ್ರತಿಭಟನೆ ನಡೆಸಿದ್ದಾರೆ. ಮುಧೋಳದ ವಕೀಲರ ಸಂಘದ ಹಿರಿಯ ನಾಯ್ಯವಾದಿಗಳು, ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಎಲ್ಲ ಸಹೋದರ ನ್ಯಾಯವಾದಿಗಳು ಪ್ರತಿಭಟಿಸಿದ್ದಾರೆ. ನನಗೆ ಮುಧೋಳದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ವೈದ್ಯರು, ಬಾಗಲಕೋಟೆಯಲ್ಲಿ ಚಿಕಿತ್ಸೆ ನೀಡಿದ ಸರ್ಕಾರಿ ವೈದ್ಯರಿಗ ವೈದ್ಯರಿಗೂ ಕೃತಜ್ಞನಾಗಿದ್ಧೇನೆ” ಎಂದು ಅವರು ಹೇಳಿದ್ದಾರೆ.
“ಪ್ರಾಣ ಬೆದರಿಕೆ, ಆಸೆ-ಆಮಿಷಗಳಿಗೆ ಹಾಗೂ ಇವರ ಪ್ರಭಾವಕ್ಕೆ ನಾನು ಯಾವತ್ತೂ ಅಂಜುವುದಿಲ್ಲ. ನನ್ನ ಸಾಮಾಜಿಕ ಚಿಂತನೆಗಳನ್ನು, ಭ್ರಷ್ಟರ ವಿರುದ್ಧ ಹೋರಾಟವನ್ನು ಮುಂದುವರಿಸಿಕೊಂಡು ಹೋಗುತ್ತೇನೆ” ಎಂದಿದ್ದಾರೆ.
“ನನ್ನ ಕೊಲೆ ಮಾಡಲು ಸಂಚು ರೂಪಿಸಿದ ಪ್ರಮುಖ ಆರೋಪಿಗಳು ರಾಜಾರೋಷವಾಗಿ ಹುಟ್ಟು ಹಬ್ಬ ಮತ್ತು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ಅವರನ್ನು ವಿಚಾರಣೆ ಮಾಡಲಾಗಿದೆಯೇ? ತನಿಖೆಯು ಸರಿಯಾದ ಮಾರ್ಗದಲ್ಲಿ ನಡೆಯುತ್ತಿದೆಯೇ? ಸಾರ್ವಜನಿಕರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ಜನರು ಅವರಿಗೆ ತಕ್ಕ ಪಾಠ ಕಲಿಸುತ್ತಾರೆ” ಎಂದು ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಬಸವರಾಜ ಧರ್ಮಂತಿ, ಸಿದ್ದಪ್ಪ ಬಳಗಾನೂರ, ಹಣಮಂತ ಶಿಂಧೆ, ಪರಶುರಾಮ ಮಂಟೂರ, ಯಮನಪ್ಪ ಯಳ್ಳಿಗುತ್ತಿ ಇದ್ದರು.