- ಸೂರತ್ – ಚೆನೈ ಮಧ್ಯೆ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ
- ಅಂಡರ್ ಪಾಸ್ ರಸ್ತೆ ನಿರ್ಮಿಸಿ ರೈತರ ಜಮೀನುಗಳಿಗೆ ತೆರಳಲು ಅನುಕೂಲ ಮಾಡಿಕೊಡಬೇಕು.
ಗ್ರಾಮೀಣ ಭಾಗದಲ್ಲಿ ಹಾದು ಹೋಗುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು, ರೈತರ ಜಮೀನುಗಳಿಗೆ ರಸ್ತೆ ಬಂದ್ ಮಾಡಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಚಿಕ್ಕಸೂಗೂರು ಬಳಿ ರೈತರು ಪ್ರತಿಭಟನೆ ನಡೆಸಿದರು.
“ಸೂರತ್ – ಚೆನೈ ಮಧ್ಯೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಮಾಡುತ್ತಿರುವ ಅಶೋಕ್ ಬುಲ್ಡಿಕಾನ್ ಲಿಮಿಟೆಡ್ ಮತ್ತು ಭಾರತ ವಾಣಿಜ್ಯ ಈಸ್ಟರ್ನ್ ಪ್ರೈವೇಟ್ ಲಿಮಿಟೆಡ್ ಗುತ್ತಿಗೆದಾರರು ಸ್ಥಳಿಯ ರೈತರ ಜಮೀನುಗಳಿಗೆ ಹೋಗುವ ರಸ್ತೆಯನ್ನು ಬಂದ್ ಮಾಡಿದ್ದರಿಂದ ರೈತರು ತಮ್ಮ ಜಮೀನುಗಳಿಗೆ ಹೋಗಲು ತೊಂದರೆ ಅನುಭವಿಸುತ್ತಿದ್ದಾರೆ” ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
“ಮುಂಗಾರು ಬಿತ್ತನೆ ಮಾಡಬೇಕಾದ ರೈತರು ಇವರ ದಬ್ಬಾಳಿಕೆಯಿಂದ ಕೈಕಟ್ಟಿ ಕುಳಿತಿದ್ದಾರೆ, ಹೆದ್ದಾರಿ ರಸ್ತೆ ಹಾದು ಹೋಗಿದ್ದು, ಕೆಳ ಭಾಗದಲ್ಲಿ ಕೆಲವು ಕಡೆ ಅಂಡರ್ ಪಾಸ್ ರಸ್ತೆ ನಿರ್ಮಾಣ ಮಾಡಿದ್ದು ಅವೈಜ್ಞಾನಿಕವಾಗಿದೆ” ಎಂದು ಆರೋಪಿಸಿದರು.
“ರಾಷ್ಟ್ರೀಯ ಹೆದ್ದಾರಿಯ ಎರಡು ಬದಿಯಲ್ಲಿ ಅಂಡರ್ ಪಾಸ್ ರಸ್ತೆ ನಿರ್ಮಾಣ ಮಾಡಬೇಕು, ಆದರೆ ಕಾಂಪೌಂಡ್ ಗೋಡೆ ನಿರ್ಮಾಣ ಮಾಡಿದ್ದಾರೆ. ಇದರಿಂದ ರೈತರು ಓಡಾಡಲು ತೊಂದರೆಗೆ ಸಿಲುಕಿದ್ದಾರೆ. ಕೂಡಲೇ ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ಎರಡು ಬದಿಯಲ್ಲಿ ಅಂಡರ್ ಪಾಸ್ ರಸ್ತೆ ಮಾಡಬೇಕು, ರೈತರು ತಮ್ಮ ಜಮೀನಿಗೆ ಹೋಗಲು ಅನುಕೂಲ ಮಾಡಿಕೊಡಬೇಕು, ಇಲ್ಲದಿದ್ದರೆ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲಾಗುವುದು” ಎಂದು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಮನೆಯ ಮೇಲಿಂದ ಬಿದ್ದು ಮಹಿಳೆ ಸಾವು; ಕೊಲೆ ಶಂಕೆ
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲೀ ಪಾಟೀಲ್, ಜಿಲ್ಲಾಧ್ಯಕ್ಷ ಪ್ರಭಾಕರ ಪಾಟೀಲ್, ಬೂದಯ್ಯಸ್ವಾಮಿ, ಲಿಂಗಾರೆಡ್ಡಿ, ಬಸವರಾಜ ಪಾಟೀಲ್, ಗೋವಿಂದಪ್ಪ ನಾಯಕ, ಸಿದ್ದಯ್ಯ ಸ್ವಾಮಿ, ದೇವರಾಜ ನಾಯಕ, ಶಂಕ್ರಪ್ಪ ಗೌಡ, ತಿಮ್ಮಣ್ಣ ನಾಯಕ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು