- ಪ್ರಧಾನಿಯವರು ಮಧ್ಯಪ್ರವೇಶಿಸಲಿ ಅಂತ ನಾವು ಆಗ್ರಹಿಸುತ್ತಿದ್ದೇವೆ
- ಬಿಜೆಪಿಯವರಿಗೆ ಕನ್ನಡಿಗರ ಬಗ್ಗೆ ಕರ್ನಾಟಕದ ಬಗ್ಗೆ ಕಾಳಜಿ ಇಲ್ಲ
ಬಿಜೆಪಿ ಸಂಸದರು ಪ್ರಧಾನಿ ನರೇಂದ್ರ ಮೋದಿ ಮುಂದೆ ಬಾಯಿ ತೆಗೆಯಲು ಹೆದರುತ್ತಾರೆ. ಜೆಡಿಎಸ್ ಒಂದು ಪ್ರಾದೇಶಿಕ ಪಕ್ಷ. ಅವರು ಸಹಜವಾಗಿಯೇ ಕಾವೇರಿ ಬಗ್ಗೆ ಮಾತನಾಡುತ್ತಾರೆ. ಆದರೆ ಪ್ರಧಾನಿಯವರು ಮಧ್ಯಪ್ರವೇಶ ಮಾಡಲಿ ಅಂತ ನಾವು ಆಗ್ರಹಿಸುತ್ತಿದ್ದೇವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಶುಕ್ರವಾರ ಮಾತನಾಡಿದ ಅವರು, “ಕಾವೇರಿ ವಿವಾದದ ವಿಚಾರವಾಗಿ ನಮ್ಮ 25 ಮಂದಿ ಸಂಸದರು ಏಕೆ ಧ್ವನಿ ಎತ್ತುತ್ತಿಲ್ಲ? ಬಿಜೆಪಿಯವರಿಗೆ ಕನ್ನಡಿಗರ ಬಗ್ಗೆ ಕರ್ನಾಟಕದ ಬಗ್ಗೆ ಕಾಳಜಿ ಇಲ್ಲ. ಸರ್ವ ಪಕ್ಷಗಳ ಸಭೆಯಲ್ಲಿ ಬಿಜೆಪಿ ಒಗ್ಗಟ್ಟಾಗಿರಬೇಕು ಎನ್ನುತ್ತಾರೆ. ಹೊರಗಡೆ ಬಂದು ಬೇರೆ ತರಹವೇ ಮಾತನಾಡುವುದು ಬಿಜೆಪಿಯವರಿಗೆ ಚಾಳಿಯಾಗಿಬಿಟ್ಟಿದೆ” ಎಂದು ಟೀಕಿಸಿದರು.
“ಸಿಎಂ, ಡಿಸಿಎಂ ಹೋಗಿ ಜಲಸಂಪನ್ಮೂಲ ಸಚಿವರ ಭೇಟಿ ಮಾಡುವಾಗ ಬಿಜೆಪಿ ಸಂಸದರಿಗೆ ಏನಾಗಿತ್ತು? ಬಿಜೆಪಿ ವರಿಷ್ಠರಿಗೆ ಬೇರೆ ರಾಜಕೀಯ ವಿಷಯಕ್ಕೆ ಭೇಟಿ ಮಾಡಲು ಸಮಯ ಸಿಗುತ್ತದೆ. ಆದರೆ ನೀರಿನ ವಿಚಾರದಲ್ಲಿ ಭೇಟಿ ಮಾಡಲು ಸಮಯ ಸಿಗೋದಿಲ್ವಾ”ಎಂದು ಪ್ರಶ್ನಿಸಿದರು.
ಈ ಸುದ್ದಿ ಓದಿದ್ದೀರಾ? ಕರ್ನಾಟಕದಲ್ಲಿರುವುದು ಸ್ಟಾಲಿನ್‌ರ ಗುಲಾಮ ಸರ್ಕಾರ : ನೀರು ಬಿಟ್ಟಿದ್ದಕ್ಕೆ ಬಿಜೆಪಿ ಟೀಕೆ
“ಬಸವರಾಜ ಬೊಮ್ಮಾಯಿಯವರಿಗೆ ಕಾವೇರಿ ವಿವಾದದ ಸಾಧಕ ಬಾಧಕ ಎಲ್ಲವೂ ಗೊತ್ತಿದೆ. ಆದರೂ ರಾಜಕೀಯ ಕಾರಣಕ್ಕೆ ಹೇಳಿಕೆ ಕೊಡುತ್ತಾರೆ. ಕಾವೇರಿ ವಿಚಾರದಲ್ಲಿ ನಾವು ಕಾನೂನಾತ್ಮಕವಾಗಿಯೇ ನಡೆದುಕೊಳ್ಳಬೇಕಿದೆ” ಎಂದರು.
“ರಾಜ್ಯ ಬಿಜೆಪಿ ನಾಯಕರು ಹಾಗೂ ತಮಿಳುನಾಡು ಸ್ಟೇಟ್ ಬಿಜೆಪಿಯವರ ನಿಲುವೇನು ಎಂಬುದನ್ನು ಸ್ಪಷ್ಟಪಡಿಸಬೇಕು. ನಳಿನ್ ಕುಮಾರ್ ಕಟೀಲ್ ಹಾಗೂ ಅಣ್ಣಾಮಲೈ ಇಬ್ಬರೂ ಸೇರಿ ಪ್ರಧಾನಿ ಬಳಿ ಮಾತನಾಡಿ ಸಮಸ್ಯೆ ಬಗೆಹರಿಸಲಿ. ರಾಜ್ಯದ ಹಿತಾಸಕ್ತಿ ಕಾಪಾಡಲು ನಾವು ಸಿದ್ದವಾಗಿಯೇ ಇದ್ದೇವೆ” ಎಂದು ಹೇಳಿದರು.