ತಾತಗುಣಿ 220 ಕೆವಿ ವಿದ್ಯುತ್ ಸ್ವೀಕರಣಾ ಕೇಂದ್ರದಲ್ಲಿ ಸರ್ಕ್ಯೂಟ್ ಬ್ರೇಕರ್, ಕರೆಂಟ್ ಟ್ರಾನ್ಸ್ಫಾರ್ಮರ್ ಸ್ಥಾಪನೆ ಹಾಗೂ ಪರಿಶೀಲನೆ ನಡೆಯಲಿದೆ. ಈ ಹಿನ್ನೆಲೆ, ಸೆ.23 ರಂದು ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ ಆಗಲಿದೆ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲೂಎಸ್ಎಸ್ಬಿ) ತಿಳಿಸಿದೆ.
ಸೆ.23 ರ ಬೆಳಗ್ಗೆ 10 ರಿಂದ ಮಧ್ಯಾಹ್ನ 12ರವರೆಗೆ ಇಡೀ ಬೆಂಗಳೂರು ನಗರಕ್ಕೆ ಎರಡು ಗಂಟೆಗಳ ಕಾಲ ನೀರು ಪೂರೈಕೆಯಾಗುವುದಿಲ್ಲ ಎಂದು ಹೇಳಿದೆ.
ಕಾವೇರಿ ನೀರು ಸರಬರಾಜು ಯೋಜನೆಯ ಎಲ್ಲ 5 ಹಂತದ ಜಲರೇಚಕ ಯಂತ್ರಾಗಾರಗಳನ್ನು ಎರಡು ಗಂಟೆಗಳ ಕಾಲ ಸ್ಥಗಿತಗೊಳಿಸಲಾಗುತ್ತಿದೆ. ಹೀಗಾಗಿ, ಈ ಸಮಯದಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಬೆಂಗಳೂರಿನ ನಾಗರಿಕರು ಹಿಂದಿನ ದಿನವೇ ನೀರು ಸಂಗ್ರಹಿಸಿಟ್ಟುಕೊಳ್ಳುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದೆ. ಮಂಡಳಿಯೊಂದಿಗೆ ಸಹಕರಿಸುವಂತೆ ಜಲಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.