ಶಿಕ್ಷಕರ ವರ್ಗಾವಣೆಯಿಂದ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಿಗೆ ಸಮಸ್ಯೆಯಾಗಿದ್ದು, ಶೀಘ್ರದಲ್ಲಿ ಪರಿಹರಿಸುವ ಕೆಲಸ ಮಾಡಲಾಗುತ್ತದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ರಾಯಚೂರು ಜಿಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದಿಂದ ಆಯೋಜಿಸಲಾಗಿದ್ದ ಶಿಕ್ಷಕರ ದಿನಾಚರಣೆ ಹಾಗೂ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
“ಬಹು ದಿನದಿಂದ ನೆನೆಗುದಿಗೆ ಬಿದ್ದಿದ್ದ ಶಿಕ್ಷಕರ ವರ್ಗಾವಣೆಯಿಂದ ಕೆಲ ಜಿಲ್ಲೆಗಳಿಗೆ ಸಮಸ್ಯೆಯಾಗಿರುವುದು ಗಮನಕ್ಕೆ ಬಂದಿದೆ. ತಾತ್ಕಾಲಿಕವಾಗಿ ಆತಿಥಿ ಶಿಕ್ಷಕರ ನೇಮಕಾತಿಗೆ ಹೆಚ್ಚುವರಿ ನೇಮಕಾತಿ ಮಾಡಲು ಅವಕಾಶ ನೀಡಲಾಗಿದೆ. ಅಲ್ಲದೆ ಶಿಕ್ಷಕರ ನೇಮಕಾತಿ ಕುರಿತಾಗಿ ಪ್ರಕರಣವೊಂದು ನ್ಯಾಯಾಲಯದಲ್ಲಿದೆ. ವಿಚಾರಣೆ ಪೂರ್ಣಗೊಂಡು ತೀರ್ಪು ಕಾಯ್ದಿರಿಸಲಾಗಿದೆ. ಶೀಘ್ರದಲ್ಲಿ ನ್ಯಾಯಲಯ ಅನುಮತಿ ನೀಡುತ್ತಲೇ 13 ಸಾವಿರ ಮಂದಿ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ನಡೆಸಲಾಗುತ್ತದೆ” ಎಂದರು.
“ರಾಜ್ಯದಲ್ಲಿ ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದು ಮೂರು ತಿಂಗಳು ಕಳೆದಿದೆಯಷ್ಟೆ. ಸರ್ಕಾರಿ ಪ್ರೌಢಶಾಲೆಗಳ 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಮೊಟ್ಟೆ ವಿತರಿಸುವ ಯೋಜನೆ ಜಾರಿಗೊಳಿಸಲಾಗಿದೆ. ಮಕ್ಕಳಿಗೆ ಪರೀಕ್ಷೆ ಹೊರೆ, ಭಯಪಡುವದನ್ನು ನಿವಾರಿಸಲು ಮುಂದಿನ ವರ್ಷದಿಂದ ಎಸ್ಎಸ್ಎಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ವರ್ಷದಲ್ಲಿ ಮೂರು ಬಾರಿ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ. ಪ್ರಾಯೋಗಿಕವಾಗಿ ಈ ವರ್ಷವೇ ಪರೀಕ್ಷೆ ನಡೆಸಿ 42 ಸಾವಿರ ವಿದ್ಯಾರ್ಥಿಗಳಿಗೆ ಇದೇ ವರ್ಷದಲ್ಲಿ ಪ್ರವೇಶ ನೀಡುವ ವ್ಯವಸ್ಥೆ ಮಾಡಲಾಗಿದೆ. ಕಲ್ಯಾಣ ಕರ್ನಾಟಕ ಅಭಿವೃದ್ದಿ ಮಂಡಳಿಗೆ ಮೀಸಲಾದ ಅನುದಾನದಲ್ಲಿ ಶೇ.25ರಷ್ಟು ಅನುದಾನವನ್ನು ಶಿಕ್ಷಣಕ್ಕೆ ನೀಡುವುದಾಗಿ ಅಧ್ಯಕ್ಷರು ಭರವಸೆ ನೀಡಿದ್ದಾರೆ. ಅಲ್ಲದೆ ಖಾಸಗಿ ಶಾಲಾ ಕಾಲೇಜುಗಳು ನಿವೇಶನ ಅಸ್ತಿ ತೆರಿಗೆ ವಿನಾಯಿತಿ ನೀಡುವುದನ್ನು ಸಚಿವ ಸಂಪುಟದಲ್ಲಿ ಚರ್ಚಿಸಿ ನಿರ್ಧರಿಸಬೇಕಾಗುತ್ತದೆ. ಮುಖ್ಯಮಂತ್ರಿಗಳ ಗಮನಕ್ಕೆ ತಂದು ಮುಂದಿನ ದಿನಗಳಲ್ಲಿ ವಿನಾಯಿತಿ ನೀಡಲು ಕ್ರಮವಹಿಸಲಾಗುವುದು” ಎಂದು ಹೇಳಿದರು.
“ಖಾಸಗಿ ಶಾಲೆ ಕಾಲೇಜುಗಳಿಗೆ ಪಠ್ಯ ಪುಸ್ತಕ ಕೊರತೆ ನೀಗಿಸಲು ಅಧಿಕಾರಿಗಳಿಗೆ ಸೂಚಿಸಲಾಗುತ್ತದೆ. ಪಠ್ಯಪುಸ್ತಕದ ಹೊರೆಯನ್ನು ಇಳಿಕೆ ಮಾಡಲು ಚಿಂತನೆ ನಡೆದಿದ್ದು, ಮೂರನೇ ಒಂದು ಭಾಗ ಮಾತ್ರ ಪುಸ್ತಕ ನಿಗದಿಪಡಿಸಿ ಮುಂದಿನ ವರ್ಷದಿಂದ ಜಾರಿಗೊಳಿಸಲಾಗುತ್ತದೆ. ರಾಜ್ಯದಲ್ಲಿ ಮಾನ್ಯತೆ ಇಲ್ಲದೆ ಇರುವ ಶಾಲೆಗಳಿದ್ದು, ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ. ಕೆಲ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಅಗ್ನಿಶಾಮಕ ದಳದ ಪರವಾನಿಗೆ ಸೇರಿದಂತೆ ಕೆಲ ನಿಯಮಗಳನ್ನು ಪಾಲಿಸಲೇ ಬೇಕಿದೆ. ಹೊಸ ಶಾಲೆಗಳಿಗೆ ಅನುಮತಿ ಸೇರಿದಂತೆ ಎಲ್ಲವನ್ನು ಆನ್ಲೈನ್ ಮೂಲಕ ಪರವಾನಿಗೆ ನೀಡುವ ವ್ಯವಸ್ಥೆ ಜಾರಿಗೊಳಿಸಿ ತೊಂದರೆ ನಿವಾರಿಸಲಾಗುವುದು” ಎಂದು ಹೇಳಿದರು.
ರಾಜ್ಯದ 42 ಸಾವಿರ ಸರ್ಕಾರಿ ಶಾಲೆಗಳಿಗೆ ಮೂಲ ಸೌಕರ್ಯ ಒದಗಿಸಲು ಹಣಕಾಸಿನ ಕೊರತೆಯಿದೆ. ಖಾಸಗಿ ಶಾಲೆ-ಕಾಲೇಜುಗಳಿಗೆ, ಅನುದಾನ ರಹಿತ ಶಾಲೆಗಳಿಗೆ ಅನುದಾನ ನೀಡುವ ಕುರಿತು ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಲಾಗುವುದು” ಎಂದು ಭರವಸೆ ನೀಡಿದರು.
ಸಣ್ಣ ನೀರಾವರಿ ಸಚಿವ ಎನ್ ಎಸ್ ಬೋಸರಾಜು ಮಾತನಾಡಿ, “ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ಕಾರ್ಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಗ್ಯಾರಂಟಿ ಯೋಜನೆಗಳ ಜೊತೆಗೆ ಶಿಕ್ಷಣ ಅಭಿವೃದ್ಧಿಗೆ ಬೇಕಿರುವ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತದೆ. ಶಾಲೆಗಳ ಮೂಲ ಸೌಕರ್ಯ, ಶಿಕ್ಷಕರ ನೇಮಕಾತಿ ಸೇರಿದಂತೆ ಅನೇಕ ಯೋಜನೆಗಳನ್ನು ಸರ್ಕಾರ ಮುಂದಿನ ದಿನದಲ್ಲಿ ಜಾರಿಗೊಳಿಸಲಾಗುತ್ತದೆ” ಎಂದರು.
ಈ ಸುದ್ದಿ ಓದಿದ್ದೀರಾ? 100 ದಿನಗಳ ಉದ್ಯೋಗ ಅವಧಿ 150 ದಿನಗಳಿಗೆ ಏರಿಸಿ: ಕೇಂದ್ರ ಸಚಿವರಿಗೆ ಪ್ರಿಯಾಂಕ್ ಖರ್ಗೆ ಮನವಿ
ಒಕ್ಕೂಟದ ಅಧ್ಯಕ್ಷ ಹಾಗೂ ಸಿಂಧನೂರು ಶಾಸಕ ಪ್ರಾಸ್ತಾವಿಕವಾಗಿ ಮಾತನಾಡಿ, “ಸರ್ಕಾರಿ ಶಾಲೆಗಳಂತೆ ಖಾಸಗಿ ಶಾಲೆ-ಕಾಲೇಜುಗಳು ಗುಣಮಟ್ಟದ ಶಿಕ್ಷಣ ಒದಗಿಸಲು ಶ್ರಮಿಸುತ್ತಿವೆ. ಸರ್ಕಾರಿ ಮತ್ತು ಖಾಸಗಿ ಶಾಲೆಗಳೆಂದು ತಾರತಮ್ಯ ಮಾಡದೆ ಖಾಸಗಿ ಶಾಲೆಗಳಿಗೂ ಸಮಾನ ಅಭಿವೃದ್ದಿ, ನೇಮಕಾತಿ, ಸುಧಾರಣೆಗೆ ಸರ್ಕಾರ ಸಹಕರಿಸಬೇಕು” ಎಂದರು.
ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯ ಶಶಿಲ್ ಜಿ.ನಮೋಶಿ, ಈಶಾನ್ಯ ಶಿಕ್ಷಣ ಇಲಾಖೆ ಆಯುಕ್ತ ಆಕಾಶ, ಅಪರ ಜಿಲ್ಲಾಧಿಕಾರಿ ದುರಗೇಶ, ಒಕ್ಕೂಟದ ಉಪಾಧ್ಯಕ್ಷ ದೊಡ್ಡ ಬಡವರಾಜ, ಎಸ್ ಎಲ್ ಕೇಶವರೆಡ್ಡಿ ಇದ್ದರು.
ಸಿಟಿಜನ್ ಜರ್ನಲಿಸ್ಟ್ : ಹಫೀಜುಲ್ಲ