ಪೊಲೀಸರ ಬಲೆಗೆ ಬಿದ್ದಿರುವ ಚೈತ್ರಾ ಕುಂದಾಪುರ ಗ್ಯಾಂಗಿನ ಹಾಲಶ್ರೀ ವಿರುದ್ಧ ಮತ್ತೊಂದು ವಂಚನೆ ಪ್ರಕರಣ ಕೇಳಿ ಬಂದಿದ್ದು, ಗದಗ ಜಿಲ್ಲೆಯ ಮುಂಡರಗಿ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.
“ಹಾಲಶ್ರೀಯವರು ಬಿಜೆಪಿ ಟಿಕೆಟ್ ಕೊಡಿಸುವದಾಗಿ ಹೇಳಿ ನನಗೆ ಒಂದು ಕೋಟಿ ರೂಪಾಯಿ ವಂಚನೆ ಮಾಡಿದ್ದಾರೆ” ಎಂದು ಶಿರಹಟ್ಟಿ ಮೀಸಲು ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಸಂಜಯ್ ಚವಡಾಳ ಎಂಬುವವರು, ಮುಂಡರಗಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದೂರು ದಾಖಲಿಸಿಕೊಂಡಿರುವ ಮುಂಡರಗಿ ಠಾಣೆ ಪೊಲೀಸರು ಹಣ ಕೊಟ್ಟಿರುವುದರ ಬಗ್ಗೆ ದಾಖಲೆ ಸಲ್ಲಿಸುವಂತೆ ಹೇಳಿದ್ದು, ಸಂಜಯ್ ಎಂಬುವವರು ಈವರೆಗೆ ದಾಖಲೆ ನೀಡಿಲ್ಲ ಎನ್ನಲಾಗಿದೆ.
ಸಂಜಯ್ ಬಿಜೆಪಿ ಹಾಗೂ ಸಂಜಯ್ ಆರ್‌ಎಸ್‌ಎಸ್ ಸಂಘಟನೆಯಲ್ಲಿಯೂ ಕಾಣಿಸಿಕೊಂಡಿದ್ದ ಇವರು, “ಮೂರು ಹಂತಗಳಲ್ಲಿ ನನ್ನಿಂದ ಒಂದು ಕೋಟಿ ರೂಪಾಯಿಗಳನ್ನು ಪಡೆದು ಹಾಲಶ್ರೀ ವಂಚಿಸಿದ್ದಾರೆ” ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ವಂಚನೆ ಪ್ರಕರಣ | ಚೈತ್ರಾ ಹೆಸರಿನೊಂದಿಗೆ ‘ಕುಂದಾಪುರ’ ಬಳಕೆಗೆ ಆಕ್ಷೇಪ; ಕೋರ್ಟ್‌ನಲ್ಲಿ ದಾವೆ
ಚೈತ್ರಾ ಬಂಧನವಾದ ಬಳಿಕ ತಲೆಮರೆಸಿಕೊಂಡಿದ್ದ ಹಾಲಶ್ರೀ ಜೊತೆ ಸಂಜಯ್ ಸಂಪರ್ಕದಲ್ಲಿದ್ದರು ಎನ್ನಲಾಗಿದೆ. ಹಾಲಶ್ರೀ ಮೊಬೈಲ್‌ನಲ್ಲಿ ಸಂಜಯ್ ಚವಡಾಳ ನಂಬರ್ ಇದ್ದ ಕಾರಣ, ಸಿಸಿಬಿ ಪೊಲೀಸರು ಸಂಜಯ್‌ನನ್ನು ವಿಚಾರಣೆಗೆ ಕರೆಸಿಕೊಂಡಿದ್ದರು ಎನ್ನಲಾಗಿದ್ದು, ಚೈತ್ರಾ ಕುಂದಾಪುರ ಗ್ಯಾಂಗಿನ ವಂಚನೆಗಳು ಕೆದಕಿದಷ್ಟು ಹೊರ ಬೀಳುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ.