- ತಮಿಳುನಾಡು ಕೇಳುವ ಮೊದಲೇ ನೀರು ಬಿಟ್ಟ ಸರ್ಕಾರ
- ತಮಿಳುನಾಡಿನವರು ಎರಡು ಬೆಳೆ ಬೆಳೆಯುತ್ತಾರೆ: ಕಿಡಿ
ಸುಪ್ರೀಂ ಕೋರ್ಟ್ ಸೂಚನೆ ಕೊಟ್ಟ ನಂತರವೇ ತಮಿಳುನಾಡಿಗೆ ನೀರು ಬಿಡಿ ಎಂದು ಈ ಹಿಂದೆ ಹೇಳಿದ್ದೆ. ಆದರೆ, ರಾಜ್ಯ ಸರ್ಕಾರ ಆರಂಭದಲ್ಲೇ ಎಡವಿ, ತಮಿಳುನಾಡು ಕೇಳುವ ಮೊದಲೇ ನೀರು ಬಿಟ್ಟು ಈಗ ಜನರನ್ನು ಸಂಕಷ್ಟಕ್ಕೆ ದೂಡುತ್ತಿದೆ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಕಿಡಿಕಾರಿದರು.
ಶ್ರೀರಂಗಪಟ್ಟಣದ ಕೆಆರ್ಎಸ್ನಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, “ಸಿಡಬ್ಲ್ಯೂಎಂಎ ಸಭೆ ನಡೆಸಿ ನೀರು ಬಿಡಲು ಆದೇಶಿಸಿತ್ತು. ಆಗ ತಮಿಳುನಾಡು ಪ್ರತಿಭಟನೆ ಮಾಡಿ ಸಭೆಯಿಂದ ಹೊರ ಹೋದರು. ನಮ್ಮ ಸರ್ಕಾರ ರೈತರ ವಿಚಾರವನ್ನು ಲಘುವಾಗಿ ಪರಿಗಣಿಸಿದ್ದಾರೆ. ತಮಿಳುನಾಡು ಅರ್ಜಿ ಹಾಕಿದಾಗಲೇ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದೆ” ಎಂದರು.
“ಆದೇಶ ಪಾಲಿಸಲು ಆಗದೆ ಇದ್ದಾಗ ಅದು ನ್ಯಾಯಾಂಗ ನಿಂದನೆ ಆಗಲ್ಲ. ಹೀಗಂತ ಸೆ.16ರಂದು ಸುಪ್ರೀಂಕೋರ್ಟ್ ಆದೇಶದಲ್ಲಿ ಉಲ್ಲೇಖಿಸಿದೆ. ನಮ್ಮ ಸರ್ಕಾರ ಸಿಡಬ್ಲ್ಯೂಆರ್ಸಿ, ಸಿಡಬ್ಲ್ಯೂಎಂಎಗೆ ಸೂಕ್ತ ಮಾಹಿತಿ ನೀಡಿಲ್ಲ. ಎಸಿ ವರ್ಚುವಲ್ನಲ್ಲಿ ಕುಳಿತು ಸಭೆಯಲ್ಲಿ ಭಾಗಿಯಾಗುತ್ತಾರೆ. ತಮಿಳುನಾಡು ಅಧಿಕಾರಿಗಳು ನೇರವಾಗಿ ಸಭೆಯಲ್ಲಿ ಭಾಗಿಯಾಗಿದ್ದಾರೆ. ಸರ್ಕಾರ ಸೂಕ್ತ ದಾಖಲೆ, ಮಾಹಿತಿ ನೀಡುವಲ್ಲಿ ವಿಫಲವಾಗಿದೆ” ಎಂದು ಹರಿಹಾಯ್ದರು.
ಎಲ್ಲಡೆ ಪ್ರತಿಭಟನೆ ನಡೆಯುತ್ತಿದೆ. ಇದನ್ನೂ ಮೀರಿ ತಮಿಳುನಾಡಿಗೆ ನೀರು ಬಿಟ್ಟರೆ ನೋಡಿ ನಮ್ಮ ನಡೆ ಬೇರೆಯೇ ಇರುತ್ತದೆ. ತಮಿಳುನಾಡಿನವರು ಎರಡು ಬೆಳೆ ಬೆಳೆಯುತ್ತಾರೆ. ಕಾವೇರಿ ಪರಿಸ್ಥಿತಿ ಬಗ್ಗೆ ಅಮಿತ್ ಶಾ ಬಳಿ ಚರ್ಚೆ ಮಾಡಿದ್ದೇನೆ” ಎಂದು ಹೇಳಿದರು.