ಕಾವೇರಿ ನೀರಿನ ವಿಚಾರದಲ್ಲಿ ವಿಪಕ್ಷಗಳ ಮುಖಂಡರಾದ ಬಿಎಸ್ವೈ, ಬೊಮ್ಮಾಯಿ, ಹೆಚ್ಡಿ ಕುಮಾರಸ್ವಾಮಿಯವರು ನೀರಿನ ರಾಜಕೀಯ ಮಾಡುತ್ತಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಾವೇರಿ ವಿಚಾರದಲ್ಲಿ ಸಭೆಯ ಒಳಗಡೆ ರಾಜ್ಯದ ಹಿತದ ಬಗ್ಗೆ ಮಾತನಾಡುತ್ತಾರೆ. ಹೊರಗಡೆ ಬಂದಾಗ ರಾಜಕಾರಣ ಮಾಡುತ್ತಿದ್ದಾರೆ. ನಾವು ನಾಡಿನ ಜನತೆಯ ಹಿತವನ್ನು ಎಷ್ಟರಮಟ್ಟಿಗೆ ಕಾಪಾಡಬೇಕೋ ಅಷ್ಟು ಕಾಪಾಡಿದ್ದೇವೆ. ಈಗಲೂ ಕಾಪಾಡುತ್ತಿದ್ದೇವೆ. ಮುಂದೆಯೂ ಕಾಪಾಡುತ್ತೇವೆ ಎಂದು ಹೇಳಿದರು.
ನಾವು ವಿಪಕ್ಷಗಳ ಧೋರಣೆಯ ವಿರುದ್ಧ ನಡೆದುಕೊಂಡಿದ್ದಿದ್ದರೆ ಅಥವಾ ರಾಜ್ಯದ ಹಿತ ಕಾಪಾಡಲು ನಮ್ಮ ಕರ್ತವ್ಯ ನಿರ್ವಹಿಸದೇ ಇದ್ದಿದ್ದರೆ ವಿಪಕ್ಷಗಳು ಮಾತನಾಡಲಿ. ಯಡಿಯೂರಪ್ಪ, ಬೊಮ್ಮಾಯಿ, ಕುಮಾರಸ್ವಾಮಿಯವರು ನೀರಿನ ರಾಜಕೀಯ ಮಾಡುತ್ತಿದ್ದಾರೆ. ಆದರೆ ನಾವು ರೈತರನ್ನು ಬದುಕಿಸಲು ಹೊರಟಿದ್ದೇವೆ. ನಾನು ಅಂಕಿ-ಅಂಶಗಳನ್ನು ಇಲ್ಲಿ ಬಹಿರಂಗವಾಗಿ ತಿಳಿಸಿದರೆ ರಾಜ್ಯದ ಹಿತಕ್ಕೆ ಧಕ್ಕೆಯಾಗುತ್ತದೆ ಎಂದು ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.
“ಮಾಜಿ ಪ್ರಧಾನಿ ದೇವೇಗೌಡರು ‘ಎಕನಾಮಿಕ್ಸ್ ಟೈಮ್ಸ್’ ಪತ್ರಿಕೆಗೆ ಈ ಹಿಂದೆ ಸಂದರ್ಶನ ನೀಡಿದ್ದರು. ಆ ಸಂದರ್ಶನ ನೋಡಿದರೆ ಎಲ್ಲರಿಗೂ ಗೊತ್ತಾಗುತ್ತದೆ. ಯಾಕೆಂದರೆ ಅದರಲ್ಲಿ ಎಲ್ಲದಕ್ಕೂ ಉತ್ತರ ಸಿಗುತ್ತದೆ. ಈ ನಡುವೆ ಕಾವೇರಿಗೆ ಸಂಬಂಧಿಸಿ ಪ್ರಧಾನಿ ಮಧ್ಯ ಪ್ರವೇಶಿಸಬೇಕೆಂದು ದೇವೇಗೌಡರು ಹೇಳಿದ್ದಾರೆ. ನಾವು ರಾಜ್ಯದ ಜನರ ರಕ್ಷಣೆ ಮಾಡಲು ಹೊರಟಿದ್ದೇವೆ” ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿಳಿಸಿದರು.
ಇದನ್ನು ಓದಿದ್ದೀರಾ? ಕಾವೇರಿ ವಿವಾದ | ಸೆ.26ರಂದು ‘ಬೆಂಗಳೂರು ಬಂದ್’
ಇದೇ ವೇಳೆ ಸೆ.26ರಂದು ‘ಬೆಂಗಳೂರು ಬಂದ್’ ಸುದ್ದಿಗೆ ಪ್ರತಿಕ್ರಿಯಿಸಿರುವ ಡಿಕೆ ಶಿವಕುಮಾರ್, “ಬೆಂಗಳೂರನ್ನು ಬಂದ್ ಮಾಡುವುದೆಂದರೆ ನಮ್ಮ ಹೃದಯವನ್ನು ನಾವೇ ಚುಚ್ಚಿಕೊಂಡಂತೆ. ನಾವು ಎಲ್ಲ ರೀತಿಯ ಸಹಕಾರವನ್ನು ರೈತರಿಗೆ ಕೊಟ್ಟಿದ್ದೇವೆ. ಬಂದ್ ಮಾಡುವುದರಿಂದ ಯಾವುದೇ ಉಪಯೋಗವಿಲ್ಲ. ರಾಜ್ಯದ ಪರವಾಗಿಯೇ ನಾವು ಇದ್ದೇವೆ. ದಯವಿಟ್ಟು ಅಂತಹ ತಪ್ಪುಗಳನ್ನು ಮಾಡುವುದಕ್ಕೆ ಹೋಗಬೇಡಿ. ಕರ್ನಾಟಕ ಸರ್ಕಾರವೇ ರಾಜ್ಯದ ಹಿತ ಕಾಪಾಡುತ್ತದೆ” ಎಂದು ತಿಳಿಸಿದರು.