ಹಿಡಕಲ್ ಜಲಾಶಯದಿಂದ ಘಟಪ್ರಭಾ ಎಡದಂಡೆ ನಾಲೆಯ ರೈತರಿಗೆ ನೀರುಹರಿಸುವಂತೆ ಕೋರಿ ಚಿಕ್ಕೋಡಿ-ಮಿರಜ್ ರಾಜ್ಯ ಹೆದ್ದರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದಾರೆ. ರಾಜ್ಯ ರೈತ ಸಂಘ ಕರೆದಿದ್ದ ಪ್ರತಿಭಟನೆಗೆ ನೂರಾರು ರೈತರು ಬೆಂಬಲಿಸಿದ್ದು ಕೆರೂರು ಕ್ರಾಸ್ ಬಳಿ ರಸ್ತೆ ತಡೆ ನಡೆಸಿದ್ದಾರೆ.
ರಾಜ್ಯ ಹೆದ್ದಾರಿ ತಡೆದ ರೈತರು ಬೃಹತ್ ಪ್ರತಿಭಟನೆ ನಡೆಸಿದರು. ಪ್ರತಿಭಟನಾ ನಿರತ ರೈತರನ್ನು ತಡೆಯಲು ಪೊಲೀಸರು ಹರಸಾಹಸ ಪಟ್ಟರು. ನಾಲೆ ನೀರು ಬಿಡದ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದ ರೈತರು, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು.
ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಮಂಜುನಾಥ ಪರಗೌಡ, “ರೂಪಿನಾಳ, ಕೆರೂರು, ಜೋಡಕುರಳಿ, ಅರಬ್ಯನವಾಡಿ ಗ್ರಾಮಗಳಿಗೆ ಘಟಪ್ರಭಾ ಎಡದಂಡೆ ನಾಲೆಯ ನೀರು ಹರಿಸಿದರೆ ಇಲ್ಲಿನ ರೈತರಿಗೆ ಅನುಕೂಲವಾಗಲಿದೆ ಎಂದು ಮನವಿ ಸಲ್ಲಿಸಿದ್ದೇವೆ.
ಆದರೆ, ಕಾಳುವೆಗೆ ನೀರು ಬರದ ಕಾಋಣ ರೈತರು ರಸ್ತೆಗಿಳಿದು ಪ್ರತಿಭಟಿಸುತ್ತಿದ್ದಾರೆ. ನೀರು ಬಿಡುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ,” ಎಂದಿದ್ದಾರೆ.
ಪ್ರತಿಭಟನೆ ವೇಳೆ ಮಾತನಾಡಿದ ರೈತ ಮುಖಂಡರು, ಮಳೆ ಬರದ ಕಾರಣ, ಬೆಳೆಗಳೇಲ್ಲ ಒಣಗಲಾರಂಭಿಸಿವೆ. ಜಮೀನುಗಳಿಗೆ ನೀರುಣಿಸಲು ಕಾಲುವೆಗಳಲ್ಲಿ ನೀರು ಸಹ ಇಲ್ಲ. ಈ ಕೂಡಲೇ ನಾಲೆಗೆ ನೀರು ಹರಿಸಿ. ಸಂಕಷ್ಟದಲ್ಲಿರುವ ರೈತರ ಸಾಲ ಮನ್ನಾ ಮಾಡಿ ಎಂದು ಒತ್ತಾಯಿಸಿದರು.
ಪ್ರತಿಭಟನಾ ಸ್ಥಳಕ್ಕೆ ಧಾವಿಸಿದ ನೀರಾವರಿ ಅಧಿಕಾರಿ ನಾಗೇಶ ಕೋಲ್ಕಾರ,”ನೀರಾವವರಿ ಸಲಹಾ ಸಮಿತಿ ಇದೆ. ಬೇಡಿಕೆಗನುಗುಣವಾಘಿ ನೀರು ಬಿಡಲು ಆದೇಶಿಸಿದ್ದಾರೆ. ಸಲಹಾ ಸಮಿತಿ ಒಪ್ಪಿದ ಕೂಡಲೇ ನೀರು ಬಡಲಾಗುತ್ತದೆ. ಕಾಳುವೆಗಳನ್ನು ಸ್ವಚ್ಚ ಗೊಳಿಸಿ ನೀರುಹರಿಸಲಾಗುವುದು. ಮುಂದಿನ ಎಂಟು ದಿನದೊಳಗೆ ಕೆರೂರು ಗ್ರಾಮಕ್ಕೆ ನೀರು ಹರಿಸುವ ಭರವಸೆ ಇದೆ,” ಎಂದು ರೈತರನ್ನು ಸಮಾಧಾನ ಪಡಿಸುವ ಯತ್ನ ಮಾಡಿ, ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದರು.
ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯದರ್ಶಿ ಭೀಮಶಿ ಗಡಾಡಿ, ಅಥಣಿ ರೈತ ಸಂಘದ ಅಧ್ಯಕ್ಷ ಮಹಾದೇವ ಮಡಿವಾಳ, ದುಂಡಪ್ಪ ಹಿಂಗ್ಲಾಜೆ, ಪ್ರತಾಪ ಪಾಟೀಲ ಸೇರಿದಂತೆ ನೂರಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ಭಾರಿ ಬಿಗಿ ಪೊಲೀಸ್ ಬಂದೋಬಸ್ತ ಏರ್ಪಡಿಸಲಾಗಿತ್ತು. ಒಬ್ಬ ಡಿಎಆರ್, ಎರಡು ಕೆಎಸ್‌ಆರ್‌ಪಿ ತುಕಡಿ, ಒಬ್ಬರು ಡಿವೈಎಸ್‌ಪಿ, ಸಿಪಿಐ, ನಾಲ್ವರು ಪಿಎಸ್‌ಐ ಸೇರಿದಂತೆ 50ಕ್ಕೂ ಹೆಚ್ಚು ಪೊಲೀಸರನ್ನು ಸ್ಥಳದಲ್ಲಿ ನಿಯೋಜಿಸಲಾಗಿತ್ತು.