ಪಿಎಚ್‌ಡಿ ಪ್ರವೇಶ ಪರೀಕ್ಷೆಯಲ್ಲಿ ಹಲವು ಅಕ್ರಮಗಳು ನಡೆದಿದ್ದ ಹಿನ್ನಲೆಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಕರ್ನಾಟಕ ಹೈಕೋರ್ಟ್ ಅಕ್ರಮಗಳ ಬಗ್ಗೆ ತುರ್ತಾಗಿ ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ನೋಟಿಸ್ ಜಾರಿಗೊಳಿಸಿದೆ.
ಅಧಿಸೂಚಿಸಲಾದ ಕೆಎಲ್ಇ ಮತ್ತು ಕೆಂಗೇರಿಯ ಶೇಷಾದ್ರಿಪುರಂ ಅಕಾಡೆಮಿ ಕಾಲೇಜುಗಳಲ್ಲಿ ಜೂನ್ 16, 2023ರಂದು ಪ್ರವೇಶ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಗುರುತಿನ ಚೀಟಿಯಾಗಲಿ ಅಥವಾ ಪ್ರವೇಶ ಪತ್ರವನ್ನು ಪರಿಶೀಲಿಸದೆ ಪರೀಕ್ಷೆಯನ್ನು ಬರೆಯಲು ಅವಕಾಶ ಮಾಡಿಕೊಡಲಾಗಿತ್ತು. ಕೆಲವು ವಿದ್ಯಾರ್ಥಿಗಳು ಮೊಬೈಲ್‌ಗಳನ್ನು ತೆಗೆದುಕೊಂಡು ಹೋಗಿದ್ದು, ಮೊಬೈಲ್ ಮೂಲಕ ರಾಜಾರೋಷವಾಗಿ ಉತ್ತರಗಳನ್ನು ಹುಡುಕಿಕೊಂಡು ಬರೆದಿದ್ದರು.
ಅಕ್ರಮ ಪರೀಕ್ಷೆಗೆ ಸಂಬಂಧಿಸಿದಂತೆ ವಿವಿ ಕುಲಪತಿ, ಮೌಲ್ಯಮಾಪನ ಕುಲಸಚಿವರು, ಪಿಹೆಚ್‌ಡಿ ಪರೀಕ್ಷೆಯ ವಿಶೇಷ ಅಧಿಕಾರಿಗಳಿಗೆ ಪರೀಕ್ಷೆ ರದ್ದುಗೊಳಿಸುವಂತೆ ಅರ್ಜಿದಾರರ ನೇತೃತ್ವದಲ್ಲಿ ವಿದ್ಯಾರ್ಥಿಗಳು ದೂರು ಸಲ್ಲಿಸಿದ್ದರು. ಆದರೆ ವಿವಿಯು ದೂರಿನ ಯಾವುದೇ ಮನವಿ ಪರಿಗಣಿಸದೆ ತರಾತುರಿಯಲ್ಲಿ ತಾತ್ಕಾಲಿಕ ಕೀ ಉತ್ತರಗಳನ್ನು ಪ್ರಕಟಿಸಿತ್ತು. ತಾತ್ಕಾಲಿಕ ಕೀ ಉತ್ತರಗಳಲ್ಲಿ ಹಲವು ಲೋಪದೋಷಗಳಿರುವ ಕಾರಣ ಪ್ರಕಟಿಸಿದ ಕೀ ಉತ್ತರಗಳನ್ನು ಸರಿಪಡಿಸುವ ನೆಪದಲ್ಲಿ ಮತ್ತೊಂದು ಬಾರಿ ಕೀ ಉತ್ತರಗಳನ್ನು ಪ್ರಕಟಿಸಿತ್ತು. ಆಕ್ಷೇಪಣೆಗಳಿಗೆ ಕೇವಲ ಒಂದೇ ದಿನ ಅವಕಾಶವನ್ನು ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರವೇಶ ಪರೀಕ್ಷೆಯಲ್ಲಿನ ಅಕ್ರಮಗಳ ಕುರಿತು ತನಿಖೆ ಮತ್ತು ಮರು ಪರೀಕ್ಷೆ ನಡೆಸುವಂತೆ ಅರ್ಜಿದಾರರು ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು.
ಈ ಸುದ್ದಿ ಓದಿದ್ದೀರಾ? ‘ಅಜ್ಜ-ಅಜ್ಜಿ: ನೆನಪುಗಳು’ | ಕುತೂಹಲಕಾರಿ ಸಂಗತಿಗಳನ್ನು ಅರಹುವ ಆಕರ ಗ್ರಂಥ
ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಅಶೋಕ್ ಎಸ್ ಕಿನಗಿ ಅವರ ನೇತೃತ್ವದ ಪೀಠ ವಿಶ್ವವಿದ್ಯಾಲಯಕ್ಕೆ ತಕ್ಷಣವೇ ತುರ್ತು ನೋಟಿಸ್ ಜಾರಿ ಮಾಡಿದೆ.
ಪರೀಕ್ಷೆ ಅಕ್ರಮದ ಬಗ್ಗೆ ನೊಂದ ವಿದ್ಯಾರ್ಥಿಗಳು ಈ ಮೊದಲು ಜುಲೈನಲ್ಲಿ ಪ್ರಕರಣ ದಾಖಲಿಸಿದ್ದರು. ಈ ಬಗ್ಗೆ ಆಗಸ್ಟ್‌ನಲ್ಲಿ ವಿಚಾರಣೆ ನಡೆಸಿದ್ದ ಕರ್ನಾಟಕ ಹೈಕೋರ್ಟ್ ಕುಲಾಧಿಪತಿ, ಕುಲಪತಿ, ಮೌಲ್ಯಮಾಪನ ಕುಲಸಚಿವರು, ವಿಶೇಷ ಅಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸಿ ಒಂದು ವಾರದೊಳಗೆ ಉತ್ತರವನ್ನು ನೀಡಬೇಕೆಂದು ಆದೇಶಿಸಿತ್ತು.
ನೊಂದ ವಿದ್ಯಾರ್ಥಿಗಳೆಲ್ಲರೂ ವಿವಿ ವಿರುದ್ಧ ಮತ್ತೆ ಹೊಸದಾಗಿ ರಿಟ್ ಅರ್ಜಿಯನ್ನು ಸಲ್ಲಿಸಿ, ಪಿಹೆಚ್‌ಡಿ ಕೌನ್ಸಿಲಿಂಗ್‌ಗೆ ತಡೆ ನೀಡುವಂತೆ ಕೋರಿ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಸೆ.23 ರಂದು ಪುನಃ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ವಿಚಾರಣೆ ಅಂತಿಮವಾಗಿ ತೀರ್ಪು ಹೊರಬರುವವರೆಗೂ ನ್ಯಾಯಾಲಯದ ಆದೇಶಕ್ಕೆ ಬದ್ಧರಾಗಿರುವಂತೆ ಸೂಚಿಸಿದೆ.