ಚುನಾವಣೆಯ ಸಮಯದಲ್ಲಿ ಸ್ಥಳೀಯ ಮಟ್ಟದಲ್ಲಿ ಕಾರ್ಯಕರ್ತರ ಅಭಿಪ್ರಾಯ ಕೇಳಿದಾಗ ಮಹಿಳಾ ಅಭ್ಯರ್ಥಿಗಳನ್ನು ಕಾರ್ಯಕರ್ತರು ಒಪ್ಪಿಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥಿಸಿಕೊಂಡರು. ಶನಿವಾರ ಗಾಂಧಿ ಭವನದಲ್ಲಿ ಮಹಿಳಾ ಮೀಸಲಾತಿ ಕುರಿತ ವಿಚಾರ ಸಂಕಿರಣದಲ್ಲಿ ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ, ತಾವು ಟಿಕೆಟ್ ಪಡೆಯಲು ಪಟ್ಟ ಕಷ್ಟದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಂದೆಯೇ ಹೇಳಿಕೊಂಡರು.
“ಮೂಡಿಗೆರೆಯಿಂದ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಆಕಾಂಕ್ಷಿ ಎಂದು ಗೊತ್ತಾದ ಕೂಡಲೇ ಹಿತೈಷಿಯೊಬ್ಬರು ಹೇಳಿದ ಕಿವಿಮಾತನ್ನು ಪ್ರಸ್ತಾಪಿಸಿದರು. ಪುರುಷ ರಾಜಕಾರಣಿಯ ಮಗ ಅಥವಾ ಮಗಳಾದರೆ ಓಕೆ. ಮಹಿಳಾ ರಾಜಕಾರಣಿಯ ಪುತ್ರ ಆದರೂ ಓಕೆ. ಆದರೆ, ನೀನು ಮಹಿಳಾ ರಾಜಕಾರಣಿಯ ಪುತ್ರಿ ಆಗಿದ್ದಿ. ಹಾಗಾಗಿ ಇದು ಕಷ್ಟದ ಪಯಣ ಎಂದು ಹೇಳಿದ್ದರು. ಟಿಕೆಟ್‌ಗೆ ಪ್ರಯತ್ನ ಪಡುವಾಗ ನನಗೆ ಅದು ಅರಿವಿಗೆ ಬಂತು. ಕಷ್ಟಪಟ್ಟು ಟಿಕೆಟ್ ಪಡೆದುಕೊಂಡೆ. ಮೂರನೇ ಪಟ್ಟಿಯಲ್ಲಿ ನನ್ನ ಹೆಸರಿತ್ತು. ನಾನು ಮೂರನೇ ಸ್ಥಾನ ಪಡೆಯಬಹುದು, ಠೇವಣಿ ಕಳೆದುಕೊಳ್ಳಬಹುದು ಎಂದೇ ಎಲ್ಲರೂ ನಂಬಿದ್ದರು. ಆದರೆ ಎಲ್ಲರ ನಿರೀಕ್ಷೆಗೂ ಮೀರಿ ವಿಜಯಿಯಾದೆ. ಇದೆಲ್ಲ ನೋಡುವಾಗ ಮಹಿಳಾ ಮೀಸಲಾತಿ ಮಸೂದೆ ಪಾಸಾಗಿರುವುದು ಖುಷಿ ತಂದಿದೆ. ಬಹುಶಃ ಮುಂದಿನ ಸಲವಾದರೂ ಕಷ್ಟ ಪಡದೇ ಟಿಕೆಟ್ ಪಡೆಯಬಹುದು ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ, “ನಮಗೂ ಅನೇಕ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಟಿಕೆಟ್ ನೀಡಬೇಕು ಎಂಬ ಮನಸ್ಸಿದ್ದರೂ ಆಂತರಿಕ ಸಮೀಕ್ಷೆಯಲ್ಲಿ ಹೆಣ್ಣುಮಕ್ಕಳಿಗೆ ಹೆಚ್ಚು ಬೆಂಬಲ ಸಿಗುತ್ತಿಲ್ಲ. ನಿನಗೂ ಸಮೀಕ್ಷೆಯಲ್ಲಿ ಬೆಂಬಲ ಸಿಕ್ಕಿರಲಿಲ್ಲ. ಕಾರ್ಯಕರ್ತರು ಒಪ್ಪದಿದ್ದರೆ ಏನೂ ಮಾಡಲು ಸಾಧ್ಯವಿಲ್ಲ. ನಿನ್ನಮ್ಮ ಶಾಸಕಿಯಾಗಿದ್ರು, ಆ ಕ್ಷೇತ್ರದಲ್ಲಿ ಮಹಿಳೆಯರ ಪರ ಕೆಲಸ ಮಾಡಿದ ಕಲ್ಚರ್ ಇದೆ. ಹಾಗಾಗಿ ನೀನು ಗೆದ್ದು ಬಂದೆ. ಅದು ಯಾವುದೇ ಪಕ್ಷವಾದರೂ ಅಷ್ಟೇ. ಪುರುಷ ಆಕಾಂಕ್ಷಿಗಳು ಹೆಚ್ಚು ಇರುತ್ತಾರೆ. ನನ್ನ ಬಳಿ ಟಿಕೆಟ್ ಆಕಾಂಕ್ಷಿ ಮಹಿಳೆಯರು ಬಂದಾಗ, ನೀವೆಲ್ಲ ಮಹಿಳಾ ಮೀಸಲಾತಿ ಮಸೂದೆ ಜಾರಿಗೆ ಒತ್ತಾಯಿಸಿ ಹೋರಾಟ ಮಾಡಿ ಎಂದು ಹೇಳಿದ್ದೇನೆ. ಅದು ಜಾರಿಯಾದರೆ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ತಾಲ್ಲೂಕು, ಜಿಲ್ಲಾ ಪಂಚಾಯ್ತಿ, ಪುರಸಭೆ, ಮಹಾನಗರ ಪಾಲಿಕೆಗಳಲ್ಲಿ ಈಗಾಗಲೇ ಮೀಸಲಾತಿ ಕೊಟ್ಟಿದ್ದೇವೆ. ಹಿಂದಿನ ಸಲದ ಬಿಬಿಎಂಪಿಯ 198 ವಾರ್ಡ್‌ಗಳಲ್ಲಿ 103 ಮಂದಿ ಮಹಿಳಾ ಅಭ್ಯರ್ಥಿಗಳಿದ್ದರು. ಅದು ಶೇ 50ಕ್ಕಿಂತ ಹೆಚ್ಚು ಎಂದು ವಿವರಿಸಿದರು.