ಈದ್ ಮಿಲಾದ್ ಹಬ್ಬ ಆಚರಿಸುವ ಉದ್ದೇಶಕ್ಕಾಗಿ ಮೀನುಗಾರರು ಸೆ.28ರಂದು ಕಡ್ಡಾಯವಾಗಿ ರಜೆ ತೆಗೆದುಕೊಳ್ಳಬೇಕೆಂಬ ಬ್ಯಾನರ್‌ಅನ್ನು ಮಂಗಳೂರಿನ ಮೀನುಗಾರಿಕಾ ದಕ್ಕೆಯಲ್ಲಿ ಅಳವಡಿಸಲಾಗಿದೆ.
ಹಸಿ ಮೀನು ವ್ಯಾಪಾರಸ್ಥರ ಸಂಘವು ಬ್ಯಾನರ್ ಅಳವಡಿಸಿದ್ದು, ಬ್ಯಾನರ್ ಹಾಕಿರುವುದರ ವಿರುದ್ಧ ಆಕ್ಷೇಪಗಳು ವ್ಯಕ್ತವಾಗಿವೆ. ಆದರೆ, ಬ್ಯಾನರ್ ಅಳವಡಿಕೆಯ ಹಿಂದಿನ ಉದ್ದೇಶವನ್ನು ಸಂಘವು ಸ್ಪಷ್ಟಪಡಿಸಿದೆ.
ಮೀನುಗಾರಿಕಾ ದಕ್ಕೆಯಲ್ಲಿ ಅಳವಡಿಸಿರುವ ಬ್ಯಾನರ್‌ನಲ್ಲಿ, “ವ್ಯಾಪಾರಸ್ಥರ ಸಂಘದ ನಿರ್ಧಾರದಂತೆ ಸೆ.28ರಂದು ಮುಂಜಾನೆ 3:45ರ ನಂತರ ಕಡ್ಡಾಯವಾಗಿ ರಜೆ ತೆಗೆದುಕೊಳ್ಳಬೇಕು. ರಜೆ ಮಾಡದೇ ಕಾನೂನು ಉಲ್ಲಂಘಿಸಿದರೆ, ದಕ್ಕೆಯಲ್ಲಿ ಒಂದು ತಿಂಗಳು ವ್ಯಾಪಾರ ಮಾಡದಂತೆ ಸಂಘವು ಕ್ರಮಕೈಗೊಳ್ಳುತ್ತದೆ ಮತ್ತು ದಂಡನೆ ವಿಧಿಸುತ್ತದೆ” ಬರೆಯಲಾಗಿದೆ.
ಬ್ಯಾನರ್ ಅಳವಡಿಕೆಗೆ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ. ವಿಶ್ವ ಹಿಂದು ಪರಿಷತ್ ಮುಖಂಡ ಶರಣ್ ಪಂಪ್‌ವೆಲ್, “ಧಕ್ಕೆಯಲ್ಲಿ ದಂಡನೆ ವಿಧಿಸಲು ಷರಿಯ ಕಾನೂನು ಜಾರಿಯಲ್ಲಿದೆಯೇ? ಇವರ ಬೆದರಿಕೆ ತಂತ್ರಗಳಿಗೆ ಹಿಂದೂ ಮೀನುಗಾರರು ಮಣಿಯಬಾರದು. ನಿಮ್ಮ ಜೊತೆ ಇಡೀ ಹಿಂದೂ ಸಮಾಜ ಇದೆ” ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಆ ಮೂಲಕ ಹಿಂದುತ್ವ ಕೋಮು ರಾಜಕೀಯಕ್ಕೆ ಯತ್ನಿಸಿದ್ದಾರೆ.
ಆದರೆ, ಬ್ಯಾನರ್ ಅಳವಡಿಸಿದ್ದರ ಬಗ್ಗೆ ಸ್ಪಷ್ಟನೆ ನೀಡಿರುವ ಮೀನುಗಾರರ ಸಂಘ, “ಹಸಿ ಮೀನು ವ್ಯಾಪಾರಸ್ಥರ ಸಂಘದಲ್ಲಿ ಎಲ್ಲ ಸಮುದಾಯದವರೂ ಇದ್ದಾರೆ. ಮಂಗಳೂರು ದಕ್ಕೆಯಲ್ಲಿ ವರ್ಷದಲ್ಲಿ ಒಟ್ಟು 9 ದಿನ ರಜೆಯಿರುತ್ತದೆ. ಅದರಲ್ಲಿ, ಹಿಂದುಗಳ ಹಬ್ಬಕ್ಕೆ 4 ದಿನ, ಮುಸ್ಲಿಮರ ಹಬ್ಬಕ್ಕೆ 3 ದಿನ, ಕ್ರೈಸ್ತರ ಹಬ್ಬಕ್ಕೆ ಎರಡು ದಿನದಂತೆ ರಜೆಯನ್ನು ಹಂಚಲಾಗಿದೆ. ಮೊನ್ನೆ ಚೌತಿಯ (ಗಣೇಶ ಹಬ್ಬ) ದಿನ ರಜೆ ಇತ್ತು. ಆದ್ರೆ ಪರ್ಸಿನ್ ಬೋಟ್‌ಗಳು ನಿಯಮವನ್ನು ಮೀರಿ ವ್ಯಾಪಾರವನ್ನು ಮುಂದುವರೆಸಿದ್ದರು. ಹೀಗಾಗಿ, ರಜೆಯ ರಜೆ ತೆಗೆದುಕೊಳ್ಳಲೇಬೇಕೆಂದು ಬ್ಯಾನರ್ ಅಳವಡಿಸಬೇಕಾಯಿತು” ಎಂದು ಹೇಳಿದೆ.