ಕಳೆದ ಎರಡು ತಿಂಗಳುಗಳ ಹಿಂದೆ ಚಿನ್ನದ ಬೆಲೆ ಕಂಡಿದ್ದ ಟೊಮೆಟೊ ದರ ಈಗ ಭಾರೀ ಕುಸಿತ ಕಂಡಿದೆ. ಜುಲೈ-ಆಗಸ್ಟ್‌ನಲ್ಲಿ 2.5 ಸಾವಿರ ರೂ.ಗೆ ಮಾರಾಟವಾಗಿದ್ದ 15 ಕೆ.ಜಿ ಬಾಕ್ಸ್ ಟೊಮೆಟೊ, ಇದೀಗ 50 ರಿಂದ 100 ರೂ.ಗೆ ಕುಸಿದಿದೆ. ಟೊಮೆಟೊ ಬೆಳೆದಿದ್ದ ರೈತರು ಕಂಗಾಲಾಗಿದ್ದಾರೆ.
ಟೊಮೆಟೊ ಬೆಲೆ ಏರಿಕೆಯಾಗಿದ್ದ ಸಂದರ್ಭದಲ್ಲಿ ಹಲವಾರು ರೈತರು ಟೊಮೆಟೊ ಬೆಳೆಯತ್ತ ಮುಖಮಾಡಿದ್ದರು. ಟೊಮೆಟೊ ಬಿತ್ತನೆಯೂ ಭಾರೀ ಪ್ರಮಾಣದಲ್ಲಿ ನಡೆದಿತ್ತು. ಆದರೆ, ಆ ಬೆಳೆ ರೈತರ ಕೈಸೇರುವಷ್ಟದಲ್ಲಿ ಬೆಲೆ ಕುಸಿತ ಕಂಡಿದೆ.
ಜುಲೈ ತಿಂಗಳಿನಲ್ಲಿ ಬೇಡಿಕೆಗೆ ತಕ್ಕಷ್ಟು ಟೊಮೆಟೊ ಧಾರಣೆ ಇಲ್ಲದೆ, ಬೆಲೆ ಏರಿಕೆಯಾಗಿತ್ತು. ನೆರೆಯ ರಾಷ್ಟ್ರ ನೇಪಾಳದಿಂದ ಟೊಮೆಟೊ ಆಮದು ಮಾಡಿಕೊಳ್ಳಲಾಗಿತ್ತು. ಇದೀಗ, ರಾಜ್ಯದಲ್ಲಿ ಟೊಮೆಟೊ ಇಳುವರಿ ಹೆಚ್ಚಾಗಿದೆ. ಜೊತೆಗೆ, ನೆರೆಯ ರಾಜ್ಯಗಳಿಂದಲೂ ರಾಜ್ಯದ ಮಾರುಕಟ್ಟೆಗೆ ಟೊಮೆಟೊ ಬಂದಿದೆ. ಹೀಗಾಗಿ, ಟೊಮೆಟೊ ಬೆಲೆಯಲ್ಲಿ ಭಾರೀ ಕುಸಿತವಾಗಿದೆ.
ಟೊಮೆಟೊ ಬೆಳೆಯಲು ಎಕರೆಗೆ 1.5 ಲಕ್ಷದಿಂದ 2 ಲಕ್ಷ ರೂ.ವರೆಗೆ ಖರ್ಚಾಗುತ್ತದೆ. ಆದರೆ, ಬೆಲೆ ಕುಸಿತ ಕಂಡಿದ್ದು, ಹಾಕಿರುವ ಬಂಡವಾಳವೂ ಕೈಸೇರುವುದೋ-ಇಲ್ಲವೋ ಎಂಬ ಆತಂಕ ರೈತರಲ್ಲಿ ಮನೆ ಮಾಡಿದೆ.
ಈದಿನ.ಕಾಮ್ ಜೊತೆ ಮಾತನಾಡಿದ ಚನ್ನರಾಯಪಟ್ಟಣ ತಾಲೂಕಿನ ರೈತ ಪ್ರಭಾಕರ್, “ಸಾಲ ಮಾಡಿ 2 ಎಕರೆ ಜಮೀನಿನಲ್ಲಿ ಟೊಮೆಟೊ ಬೆಳೆದಿದ್ದೆ. ಉತ್ತಮ ಇಳುವರಿಯೂ ಬಂದಿದೆ. ಆದರೆ, ಬೆಲೆ ಕುಸಿತದಿಂದಾಗಿ ಮಾಡಿದ ಸಾಲ ತೀರಿಸಲು ಆಗುತ್ತದೋ-ಇಲ್ಲವೋ ಗೊತ್ತಿಲ್ಲ. ಟೊಮೆಟೊವನ್ನು ಕೊಯ್ಯಲು ಯೋಚಿಸುವ ಪರಿಸ್ಥಿತಿ ಇದೆ. ಟೊಮೆಟೊ ಕೊಯ್ದು, ಮಾರುಕಟ್ಟೆ ಸಾಗಿಸಲು ಮತ್ತಷ್ಟು ವೆಚ್ಚವಾಗುತ್ತದೆ. ಹೀಗಾಗಿ, ಏನು ಮಾಡಬೇಕೆಂಬುದೇ ತೋಚುತ್ತಿಲ್ಲ” ಎಂದಿದ್ದಾರೆ.